ಮಹದಾಯಿ ಯೋಜನೆ ಜಾರಿಗಾಗಿ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲಾಗುವುದು ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಪರಿಸರ ಇಲಾಖೆ ಅನುಮತಿ ಮಾತ್ರ ಬಾಕಿಯಿದೆ. ಆದರೆ, ಯೋಜನೆ ಜಾರಿಗೆ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಸಂತೋಷ ಲಾಡ್‌ ಹೇಳಿದರು.

ಹುಬ್ಬಳ್ಳಿ:

ಮಹದಾಯಿ ಯೋಜನೆ ಜಾರಿಗಾಗಿ ಶೀಘ್ರದಲ್ಲಿಯೇ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಒಯ್ಯುಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಪಕ್ಷಗಳ ನಿಯೋಗ ಒಯ್ಯುವುದಾಗಿ ಹೇಳಿದ್ದಾರೆ. ಪರಿಸರ ಇಲಾಖೆ ಅನುಮತಿ ಮಾತ್ರ ಬಾಕಿಯಿದೆ. ಆದರೆ, ಯೋಜನೆ ಜಾರಿಗೆ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ. ಯೋಜನೆಗೆ ಕೇಂದ್ರದಿಂದ ಪರವಾನಗಿ ದೊರೆಯದ ಹೊರತು ಏನೂ ಸಾಧ್ಯವಿಲ್ಲ. ಯೋಜನೆಗಾಗಿ ನಮ್ಮ ಸರ್ಕಾರ ಹಣವನ್ನೂ ಮೀಸಲಿಟ್ಟಿದೆ. ಕೇಂದ್ರದಿಂದ ಹಸಿರು ನಿಶಾನೆ ದೊರೆತ ತಕ್ಷಣವೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದರು.

ಬಂಡೂರಿ ನಾಲಾ ತಿರುವಿಗೆ ಆರ್‌ಇಸಿ ಹೊಸ ಕ್ಯಾತೆ

ಬಂಡೂರಿ ನಾಲಾಕ್ಕೆ ಮಹದಾಯಿ ನೀರು ತಿರುಗಿಸಿಕೊಳ್ಳುವ ರಾಜ್ಯದ ಪ್ರಸ್ತಾವನೆಗೆ ಕೇಂದ್ರ ಪರಿಸರ ಖಾತೆಯ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಆರ್‌ಇಸಿ) ಹೊಸ ಕ್ಯಾತೆ ತೆಗೆದಿದೆ. ಈ ಬಗ್ಗೆ ರಾಜ್ಯದ ಸಂಸದರು ಧ್ವನಿ ಎತ್ತದಿದ್ದರೆ ರೈತ ಹೋರಾಟಗಾರರ ಸಭೆ ಕರೆದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಟ್ಟ ಅರಣ್ಯ ಹಾಳಾಗುತ್ತದೆ. ಪಂಪ್‌ಗಳನ್ನು ಅಳವಡಿಸಿ ನೀರು ಎತ್ತುವಳಿ ಮಾಡಿಕೊಳ್ಳುವುದು ಅರಣ್ಯದ ಬುಡವನ್ನು ಸಡಿಲ ಮಾಡುತ್ತದೆ. ಗೋವಾದ ಭೀಮಗಡ ವ್ಯಾಪ್ತಿಯ ಹುಲಿ ರಕ್ಷಿತ ಅರಣ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ ಎಂದು ಹೇಳಲಾಗಿದೆ. 1972ರ ವನ್ಯಜೀವಿ ಕಾಯ್ದೆ, 1980ರ ಅರಣ್ಯ ಕಾಯ್ದೆ ಹಾಗೂ 1982ರ ಪರಿಸರ ಸಂರಕ್ಷಣಾ ಕಾಯ್ದೆಗಳ ಅನ್ವಯ ಬಂಡೂರಿಗೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ಪ್ರಾದೇಶಿಕ ಉನ್ನತಾಧಿಕಾರ ಸಮಿತಿ ನಿರ್ಣಯ ಕೈಗೊಂಡಿರುವುದು ಅತ್ಯಂತ ಖೇದಕರ ಸಂಗತಿ ಎಂದರು.

ಈ ವರೆಗೂ ಇದ್ದ ಅನೇಕ ಅಂತಾರಾಜ್ಯ ವಿವಾದಗಳು ಬಗೆಹರಿದಿವೆ. ಕಳಸಾ ಬಂಡೂರಿ ಯೋಜನೆಯ ವಿಚಾರವಾಗಿ ನ್ಯಾಯಾಧಿಕರಣವೂ ಕ್ಲಿಯರೆನ್ಸ್ ನೀಡಿದೆ. ಯೋಜನೆಯ ಅನುಷ್ಠಾನಕ್ಕೆ ಡಿಪಿಆರ್‌ಗೆ ಅನುಮೋದನೆ ನೀಡಲಾಗಿದೆ. ಆದರೆ, ಇಲ್ಲಸಲ್ಲದ ಕಾನೂನು ತಂದು ಯೋಜನೆಗೆ ತಡೆಹಿಡಿಯಲಾಗುತ್ತಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದಲ್ಲಿ ಸರ್ವಪಕ್ಷ ನಿಯೋಗದೊಂದಿಗೆ ರಾಜ್ಯದ ಎಲ್ಲ ಸಂಸದರೊದಿಗೆ ಪ್ರಧಾನಿ ಭೇಟಿ ಮಾಡಬೇಕು ಎಂದು ತೀರ್ಮಾನ ಕೈಗೊಂಡಿದ್ದೆವು. ಆದರೆ, ಇದಕ್ಕೆ ಸಂಸದರು ಆಸಕ್ತಿ ತೋರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ ಮುಖ್ಯಮಂತ್ರಿ ಭೇಟಿಯಾಗಿ ನಿಯೋಗ ಒಯ್ಯುವ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.