ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಲಪ್ರಭಾ ನದಿಗೆ ಮಹದಾಯಿ ನೀರನ್ನು ಜೋಡಿಸುವ ಮಹತ್ವದ ಯೋಜನೆ ಅನುಷ್ಠಾನಕ್ಕೆ ತರಲು ತಾರ್ಕಿಕ ಅಂತ್ಯ ಹಾಡುವ ನಿಟ್ಟಿನಲ್ಲಿ ಹೋರಾಟ ಆರಂಭಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ಹೇಳಿದರು.ನಗರದ ಬಸವೇಶ್ವರ ವೀರಶೈವ ವಿದ್ಯಾವರ್ದಕ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ನೂತನ ಸಂಸದರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಹದಾಯಿ ನ್ಯಾಯಾಧೀಕರಣ ತೀರ್ಪಿನಂತೆ ರಾಜ್ಯವು 13 ಟಿಎಂಸಿ ನೀರು, ಕಳಸಾದಿಂದ 1.5 ಟಿಎಂಸಿ ಹಾಗೂ ಬಂಡೂರಿಯಿಂದಲೂ 1.5 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅವಕಾಶವಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹೋರಾಟವನ್ನು ರೂಪಿಸಬೇಕಾಗಿದೆ. ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಮಾಜಿ ಉಪಮುಖ್ಯಮಂತ್ರಿ, ಸಂಸದ ಗೋವಿಂದ ಕಾರಜೋಳ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯಿಂದ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಮಾಡಲು ನೀರು ಲಭ್ಯವಿದೆ. ಈ ಯೋಜನೆ ಪೂರ್ಣಗೊಳ್ಳಲು ಅಖಂಡ ವಿಜಯಪುರ ಜಿಲ್ಲೆಯ ಜನರು ಹೋರಾಟಕ್ಕೆ ಸಜ್ಜಾಗಬೇಕಿದೆ. ನಾನು ಮುಂದೆ ನಿಂತು ಹೋರಾಟದ ಧ್ವಜ ಹಿಡಿಯಲು ಸಿದ್ಧನಿದ್ದೇನೆ. ಕಾವೇರಿಗೆ ನೀಡಿದಷ್ಟು ಮಹತ್ವವನ್ನು ಕೃಷ್ಣೆ ಯೋಜನೆಗೆ ಸರ್ಕಾರ ನೀಡುತ್ತಿಲ್ಲ. ಇದು ಮಲತಾಯಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, 173 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅವಕಾಶವಿದೆ ಎಂದರು.ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಗೆ ಕ್ರಮ ಜರುಗಿಸಲಾಗುವುದು. ಕುಡಚಿ-ಬಾಗಲಕೋಟೆ ರೈಲ್ವೆ ಲೈನ್ ಪೂರ್ಣಗೊಳ್ಳಲಿದೆ. ಆಲಮಟ್ಟಿ-ಚಿತ್ರದುರ್ಗ ರೈಲ್ವೆ ಲೈನ್ ಮಾಡುವ ಸಂಬಂಧ ಚರ್ಚೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಹೆದ್ದಾರಿ ನಿರ್ಮಾಣ, ರೈತರಿಗೆ ಕೇಂದ್ರದಿಂದ ದೊರೆಯುವ ಯೋಜನೆಗಳನ್ನು ತಲುಪಿಸಲಾಗುವುದು ಎಂದರು.
ಈ ವೇಳೆ ಬಿವಿವಿ ಸಂಘದ ಅಧ್ಯಕ್ಷರು, ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಮಹೇಶ ಅಥಣಿ ವಂದಿಸಿದರು. ಆಡಳಿತಾಧಿಕಾರಿ ಡಾ.ವಿ.ಎಸ್.ಕಟಗಿಹಳ್ಳಿಮಠ ಪ್ರಾಸ್ತಾವಿಕ ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ, ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ಹಲಕುರ್ಕಿ, ಕಣವಿ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಪ್ರಕಾಶ ರೇವಡಿಗಾರ, ಗುರುಬಸವ ಸೂಳೇಭಾವಿ, ಅಶೋಕ ಸಜ್ಜನ, ಮಹಾಂತೇಶ ಶೆಟ್ಟರ, ಮಹೇಶ ಕಕರಡ್ಡಿ, ಮಹೇಶ ಅಂಗಡಿ, ಮಲ್ಲಿಕಾರ್ಜುನ ಸಾಸನೂರ, ಶಿವಲಿಂಗಪ್ಪ ಮೊರಬದ, ಅಶೋಕ ಕಕರಡ್ಡಿ, ಚಂದ್ರಶೇಖರ ಶೆಟ್ಟರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಇದ್ದರು.--ಬಾಕ್ಸ್
ಯುಕೆಪಿಎಸ್‌ಗೆ ₹50 ಸಾವಿರ ಕೋಟಿ ಮೀಸಲಿಡಬೇಕುಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿ ಪೂರ್ಣಗೊಳ್ಳಲು ₹50 ಸಾವಿರ ಕೋಟಿ ಮೀಸಲಿಟ್ಟು ಕೆಲಸ ಮಾಡಬೇಕಿದೆ. ಈ ಮೂಲಕ ಯೋಜನೆಯ ಶಾಶ್ವತ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಬಾಗಲಕೋಟೆ-ಕುಡಚಿ ಯೋಜನೆಯು ಪೂರ್ಣಗೊಳ್ಳಲು ಪ್ರಯತ್ನ ಮಾಡಲಾಗುವುದು. ಹುಬ್ಬಳ್ಳಿ-ಅಂಕೋಲ ರೈಲ್ವೆ ಕಾಮಗಾರಿ ಆರಂಭಗೊಳ್ಳಬೇಕಿದೆ. ಕಾರವಾರ ಬೇಲೆಕೆರೆಯಲ್ಲಿ ಪೋಟ್ ಅಭಿವೃದ್ಧಿ ಮಾಡಬೇಕಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ರೈಲ್ವೆ ಲೈನ್, ಹೆದ್ದಾರಿಗಳ ಅಭಿವೃದ್ಧಿ, ರೈತರಿಗೆ ಅನುಕೂಲಕವಾಗುವ ಯೋಜನೆ, ಕೈಗಾರಿಕೆ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದರು.ನಾನು ಸಿಎಂ ಇದ್ದ ಸಂದರ್ಭದಲ್ಲಿ 43 ಹೊಸ ತಾಲೂಕು ಕೇಂದ್ರಗಳನ್ನು ಆರಂಭಿಸಲಾಯಿತು. ಇದರಿಂದ ಆಡಳಿತವು ಜನರ ಮನೆ ಬಾಗಿಲಿಗೆ ಬರುತ್ತದೆ. ಬೆಳಗಾವಿ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಉತ್ತರ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
---ಕೋಟ್
ಜಿಲ್ಲೆಯ ನಾಲ್ವರು ನಾವು ಲೋಕಸಭೆಯನ್ನು ಪ್ರವೇಶ ಮಾಡಿದ್ದು, ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.-ನಾರಾಯಾಣಸಾ ಭಾಂಡಗೆ ರಾಜ್ಯಸಭಾ ಸದಸ್ಯ