ಮಹದಾಯಿ ಪರವಾನಗಿ ಪತ್ರ ಕೈಸೇರಿಲ್ಲ

| Published : Apr 23 2024, 12:55 AM IST

ಸಾರಾಂಶ

ಪರವಾನಗಿ ದೊರೆತಿದೆ ಎಂದು ಹೇಳಿದವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರೋ ಅಥವಾ ಪ್ರಧಾನಿಗಳೋ ಎಂಬುದನ್ನು ಬಹಿರಂಗ ಪಡಿಸಬೇಕು.

ಹುಬ್ಬಳ್ಳಿ:

ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಮಹದಾಯಿ ಯೋಜನೆ ಜಾರಿಗೆ ಈಗಾಗಲೇ ಪರವಾನಗಿ ಪಡೆಯಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಮಹೇಶ ಟೆಂಗಿನಕಾಯಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು. ಆದರೆ, ಈ ವರೆಗೆ ಯೋಜನೆ ಪರವಾನಗಿ ಪತ್ರ ರೈತರಿಗೆ ತಲುಪಿಲ್ಲ ಎಂದು ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಕಿಡಿಕಾರಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರವಾನಗಿ ದೊರೆತಿದೆ ಎಂದು ಹೇಳಿದವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರೋ ಅಥವಾ ಪ್ರಧಾನಿಗಳೋ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದ ಅವರು, ಈ ಹಿಂದೆ ಮಹದಾಯಿ ಯೋಜನೆ ಜಾರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಡ್ಡಗಾಲು ಹಾಕಿದರು ಎಂದು ವಿಷಾಧಿಸಿದರು.

ಮಹದಾಯಿ ಜಾರಿಗೆ ಒತ್ತಾಯಿಸಿ ಕಳೆದ ಡಿಸೆಂಬರ್‌ನಿಂದ ಫೆಬ್ರವರಿ ವರೆಗೆ ಸಾವಿರಾರು ರೈತರು, ಹೋರಾಟಗಾರರು ಪತ್ರ ಚಳವಳಿ ಕೈಗೊಂಡು ಪ್ರಧಾನಮಂತ್ರಿ ಕಚೇರಿಗೆ ಸಾವಿರಾರು ಪತ್ರ ಕಳುಹಿಸಲಾಗಿದೆ. ಆದರೆ, ಈ ವರೆಗೂ ಪ್ರಧಾನಿಗಳಿಂದಾಗಲಿ ಇಲ್ಲವೇ ಅವರ ಕಚೇರಿಯಿಂದಾಗಲಿ ಒಂದೇ ಒಂದು ಸ್ಪಂದನೆ ಸಹ ದೊರೆತಿಲ್ಲ. ಈ ಯೋಜನೆಗಾಗಿ ಸಾವಿರಾರು ರೈತರು ಹಲವು ಬಾರಿ ಪತ್ರ ಚಳವಳಿ ಮಾಡಿದ್ದಾರೆ ಎಂದರು.

ಈ ವೇಳೆ ರೈತ ಮುಖಂಡರಾದ ಗುರು ರಾಯನಗೌಡ್ರ, ಮಲ್ಲಣ್ಣ ಅಲೈಕಾರ, ಗುರು ಬ್ಯಾಹಟ್ಟಿ, ವಿನಯ ಹೊಸಗೌಡ್ರ, ಬಸವರಾಜ ಗುಡಿ, ಜಯಂತ ವಾಡೇದ ಸೇರಿದಂತೆ ಹಲವರಿದ್ದರು.