ಗೋವಾ ಕುತಂತ್ರದಿಂದ ಮಹದಾಯಿ ನೀರು ಸಿಗುತ್ತಿಲ್ಲ: ಸೊಬರದಮಠ

| Published : Feb 10 2024, 01:46 AM IST

ಗೋವಾ ಕುತಂತ್ರದಿಂದ ಮಹದಾಯಿ ನೀರು ಸಿಗುತ್ತಿಲ್ಲ: ಸೊಬರದಮಠ
Share this Article
  • FB
  • TW
  • Linkdin
  • Email

ಸಾರಾಂಶ

ಗೋವಾ ರಾಜ್ಯದ ಕುತಂತ್ರದಿಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮಹದಾಯಿ ನೀರು ಸಿಗುತ್ತಿಲ್ಲ ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಗಂಭೀರ ಆರೋಪ ಮಾಡಿದ್ದಾರೆ.

ನರಗುಂದ: ಗೋವಾ ರಾಜ್ಯದ ಕುತಂತ್ರದಿಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮಹದಾಯಿ ನೀರು ಸಿಗುತ್ತಿಲ್ಲ ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಪ್ರದೇಶದಲ್ಲಿ ಬರುವ ಕಳಸಾ, ಹರತಾಳ ಹಳ್ಳಿಯಿಂದ ನಮಗೆ ಕುಡಿಯಲು 1.7 ಟಿಎಂಸಿ ನೀರು ಪಡೆಯಲು ಸಾಧ್ಯವಿದೆ. ಜನವರಿ 8ರಂದು ಕೇಂದ್ರ ಅರಣ್ಯ ಮತ್ತು ವನ್ಯ ಜೀವಿಗಳ ಅಧಿಕಾರಿಗಳು ಹಳ್ಳದ ವ್ಯಾಪ್ತಿ ಪ್ರದೇಶ ವೀಕ್ಷಣೆ ಮಾಡಲು ಬಂದಾಗ ರೈತ ಸಂಘಟನೆಯಿಂದ ಈ ವ್ಯಾಪ್ತಿಯಲ್ಲಿ ಯಾವುದೇ ವನ್ಯಜೀವಿಗಳು ಮತ್ತು ಅರಣ್ಯ ಪ್ರದೇಶಕ್ಕೆ ಹಾನಿಯಾಗುವುದಿಲ್ಲ. ನಮಗೆ ಕಳಸಾ ಮತ್ತು ಹರತಾಳ ಹಳ್ಳದ ನೀರು ಬಳಕೆ ಮಾಡಿಕೊಳ್ಳಲು ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ. ಆದರೆ ಗೋವಾ ರಾಜ್ಯದವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ನೀರು ಬಳಕೆಗೆ ಅವಕಾಶ ನೀಡಬಾರದು ಎಂದು ಹೇಳಿದ್ದರಿಂದ ಪರವಾನಗಿ ಸಿಕ್ಕಿಲ್ಲ.ಆದರಿಂದ ನೀರು ಪಡೆದುಕೊಳ್ಳಲು ನ್ಯಾಯಾಲಯದಲ್ಲಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಈಗಾಗಲೇ ರಾಜ್ಯ ಸರ್ಕಾರವು ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಆದರಿಂದ ಕೇಂದ್ರ ಸರ್ಕಾರ ಕಳಸಾ ಮತ್ತು ಹರತಾಳ ಹಳ್ಳದ ನೀರು ಬಳಕೆ ಮಾಡಿಕೊಳ್ಳಲು ಆದೇಶ ಮಾಡಬೇಕೆಂದು ರಾಜ್ಯ ಸರ್ಕಾರ ಡಿಪಿಆರ್ ಮತ್ತು ಅಗತ್ಯ ದಾಖಲೆ ಕೇಂದ್ರ ಸರ್ಕಾರಕ್ಕೆ ನೀಡಿದರೂ ಗೋವಾದವರ ಮಾತು ಕೇಳಿಕೊಂಡು ಕುಡಿಯುವ ನೀರಿನ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತದೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ವೀರಬಸಪ್ಪ ಹೂಗಾರ, ಎಸ್.ಬಿ. ಜೋಗಣ್ಣವರ, ಪರಶುರಾಮ ಜಂಬಗಿ, ಸಿ.ಎಸ್. ಪಾಟೀಲ, ಮಲ್ಲಣ್ಣ ಅಲೇಕಾರ, ಸುಭಾಸ ಗಿರಿಯಣ್ಣವರ, ಎಸ್.ಎಫ್. ಪಠಾಣ, ಹನಮಂತ ಸರನಾಯ್ಕರ, ಅರ್ಜುನ ಮಾನೆ, ವಾಸು ಚವ್ಹಾಣ, ಶಂಕ್ರಪ್ಪ ಜಾಧವ ಸೇರಿದಂತೆ ಮುಂತಾದವರು ಇದ್ದರು.