ಸಾರಾಂಶ
ಹಾವೇರಿ: ದೀಪಾವಳಿ ಹಬ್ಬದ ನಿಮಿತ್ತ ಜಿಲ್ಲಾದ್ಯಂತ ಮಂಗಳವಾರ ಮಹಾಲಕ್ಷ್ಮಿ ಪೂಜೆಯನ್ನು ಸಡಗರ, ಸಂಭ್ರಮದೊಂದಿಗೆ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ನಗರದಲ್ಲಿ ಕೆಲವರು ಮನೆಗಳಿಗೆ, ಅಂಗಡಿ-ಮುಂಗಟ್ಟುಗಳಿಗೆ ತಳಿರು ತೋರಣಕಟ್ಟಿ, ರಂಗೋಲಿ ಹಾಕಿ, ದೀಪಾಲಂಕಾರದ ಮೂಲಕ ಹಣ್ಣು, ಹೂವು ಹಾಗೂ ಸಿಹಿ ಆಹಾರ ಪದಾರ್ಥ ತಯಾರಿಸಿ ನೈವೇದ್ಯ ಮಾಡಿ, ಲಕ್ಷ್ಮಿ ಪೂಜೆ ಸಲ್ಲಿಸಿದರು. ಕಳೆದೊಂದು ವಾರದಿಂದ ಬೆಳಗ್ಗೆಯಿಂದ ಸಂಜೆಯವರೆಗೂ ಮಾರುಕಟ್ಟೆಯಲ್ಲಿ ಹಬ್ಬದ ತಯಾರಿಯನ್ನು ಮಾಡಿಕೊಳ್ಳುತ್ತಿದ್ದ ಜನರು ಆಕಾಶಬುಟ್ಟಿ, ಹಣತೆ, ಹಣ್ಣು-ಹಂಪಲು, ಸುಣ್ಣ-ಬಣ್ಣ, ಕಬ್ಬು, ಬಾಳೆಕಂಬ ಸೇರಿದಂತೆ ಇನ್ನಿತರ ವಿವಿಧ ಅಲಂಕಾರಿಕ ಸಾಮಗ್ರಿಗಳನ್ನು ಖರೀದಿಸುವ ಭರಾಟೆಯಲ್ಲಿ ತೊಡಗಿದ್ದರು. ದೀಪಾವಳಿಯ ಅಮಾವಾಸ್ಯೆ ದಿನವಾದ ಮಂಗಳವಾರ ಬೆಳಗಿನ ಜಾವದಿಂದಲೇ ಅಂಗಡಿ ಮುಂಗಟ್ಟುಗಳನ್ನು ಹಾಗೂ ಮನೆಯ ಮುಂಭಾಗವನ್ನು ಸ್ವಚ್ಛಗೊಳಿಸುವುದು, ಬಣ್ಣಬಣ್ಣದ ರಂಗೋಲಿ ಬಿಡಿಸುವುದು, ತರಹೇವಾರಿ ಹೂವುಗಳ ಶೃಂಗಾರ, ಮಾವಿನ ತಳಿರುತೋರಣ, ಬಾಳೆ ಕಂದು, ತೆಂಗಿನಗರಿ ಹಾಗೂ ಜಗಮಗಿಸುವ ವಿದ್ಯುತ್ ದೀಪಾಲಂಕಾರವನ್ನು ಮಾಡಿ ಲಕ್ಷ್ಮಿದೇವಿಯ ಆರಾಧನೆಯಲ್ಲಿ ತೊಡಗಿದ್ದು, ಕಂಡುಬಂದಿತು.ಕಳೆಗಟ್ಟಿದ ದೀಪಾವಳಿ: ಜಿಲ್ಲಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು ಮಹಿಳೆಯರು, ಮಕ್ಕಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಬಳಿಕ ಮನೆ, ಅಂಗಡಿಗಳು, ಶೋರೂಂಗಳು, ಕಚೇರಿಗಳಲ್ಲಿ ಮಂಟಪವನ್ನು ತಯಾರಿಸಿ ಲಕ್ಷ್ಮೀ ಮೂರ್ತಿ ಹಾಗೂ ಕಳಸವನ್ನು ಪ್ರತಿಷ್ಠಾಪಿಸಿದರು. ತಟ್ಟೆಗಳಲ್ಲಿ ಬೆಳ್ಳಿ ನಾಣ್ಯ, ಚಿನ್ನಾಭರಣ, ಹಣ(ದುಡ್ಡು) ಸೇರಿದಂತೆ ಕೃಷಿಕರು, ಕೂಲಿ ಕಾರ್ಮಿಕರು, ನೌಕರ ವರ್ಗ ಸೇರಿದಂತೆ ಅವರವರ ವೃತ್ತಿಗಳಿಗನುಸಾರವಾಗಿ ಬಳಕೆ ಮಾಡುತ್ತಿದ್ದ ವಸ್ತುಗಳನ್ನಿಟ್ಟು ಶ್ರದ್ದಾಭಕ್ತಿಯಿಂದ ಧನಲಕ್ಷ್ಮಿಯನ್ನು ಪೂಜಿಸಿದರು.
ವಾಹನಗಳ ಪೂಜೆ: ಇನ್ನುಳಿದಂತೆ ವಾಹನ ಪ್ರಿಯರು ಟ್ರ್ಯಾಕ್ಟರ್, ಬೈಕ್, ಎತ್ತಿನ ಚಕ್ಕಡಿ, ಕಾರು, ಟಾಟಾಏಸ್, ಆಟೋ ರಿಕ್ಷಾ, ಟಾಟಾಮ್ಯೂಸಿಕ್ ಸೇರಿದಂತೆ ಮತ್ತಿತರ ದಿನಂಪ್ರತಿ ಬಳಸುವ ವಾಹನಗಳನ್ನು ಮತ್ತು ವಸ್ತುಗಳನ್ನು ಅಲಂಕರಿಸಿ ಪೂಜಿಸಿದರು. ಹಬ್ಬದ ಪ್ರಯುಕ್ತ ಮನೆಯಲ್ಲಿ ತಯಾರಿಸಲಾದ ವಿಶೇಷ ಖಾದ್ಯವನ್ನು ನೈವೇದ್ಯ ರೂಪದಲ್ಲಿ ದೇವರಿಗೆ ಅರ್ಪಿಸಿದರು. ನಂತರ ಪೂಜೆಗೆ ಆಹ್ವಾನಿಸಿದ್ದ ಮುತ್ತೈದೆ ಸ್ತ್ರೀಯರಿಗೆ ಬಾಳೆಹಣ್ಣು, ಉತ್ತತ್ತಿ, ಕುಬಸದಕಣ, ಪುಟಾಣಿ ಸಕ್ಕರೆ, ಬಳೆ, ಅರಿಶಿಣಕುಂಕುಮ ನೀಡಿ ಉಡಿತುಂಬಿ ಬೀಳ್ಕೊಟ್ಟರು.ರಾರಾಜಿಸಿದ ಹಣತೆ ದೀಪಗಳು: ಈ ದೀಪಾವಳಿ ಅಂಧಕಾರ ಕಳೆದು ಪ್ರತಿ ಮನೆ, ಮನಗಳಲ್ಲಿ ಬೆಳಕಿನ ಸ್ಪರ್ಶವಾಗಲಿ, ಜ್ಞಾನದ ಜ್ಯೋತಿ ಪ್ರಜ್ವಲಿಸಲಿ, ಹೊಸ ಆಶಯ, ಕನಸುಗಳೆಲ್ಲವೂ ಸಾಕಾರಗೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಜನರು, ತಮ್ಮ ತಮ್ಮ ಮನೆ, ಅಂಗಡಿ ಮುಂಗಟ್ಟುಗಳಲ್ಲಿ ದೀಪದ ಹಣತೆಗಳನ್ನು ಹಾಗೂ ಆಕಾಶಬುಟ್ಟಿಗಳನ್ನು ಹಚ್ಚಿ ಇಡುವುದರ ಮೂಲಕ ಬೆಳಕಿನ ಪ್ರಕಾಶಮಾನ ಜೀವನವನ್ನು ಪ್ರಜ್ವಲಿಸುವಂತೆ ಮಾಡಿದರು. ಇದರ ಜತೆಗೆ ಯುವಕರು, ಮಕ್ಕಳು ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಸಿಡಿಸುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮಿಸಿದರು.ಝಗಮಗಿಸುವ ವಿದ್ಯುತ್ ದೀಪಾಲಂಕಾರ: ಸಂಜೆಯಾಗುತ್ತಿದ್ದಂತೆ ನಗರದ ಅಂಗಡಿಗಳೆಲ್ಲ ಝಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಎಲ್ಲರನ್ನು ಆಕರ್ಷಿಸುತ್ತಿದ್ದವು. ಬಹುತೇಕ ಎಲ್ಲ ಅಂಗಡಿಗಳಲ್ಲಿಯೂ ವಿದ್ಯುತ್ ಅಲಂಕಾರ ಮಾಡಿದ್ದರಿಂದ ಇಡೀ ನಗರವೇ ಬೆಳಕಿನಲ್ಲಿ ಮಿಂಚುವಂತಿತ್ತು. ಸಂಜೆ ಹೊತ್ತು ಮಾರುಕಟ್ಟೆ ಪ್ರದೇಶದೆಲ್ಲೆಡೆ ಪೂಜೆಯ ಜಾಗಟೆ, ಗಂಟೆಯ ನಾದ, ಸಿಡಿ ಮದ್ದಿನ ಶಬ್ದ, ಚಿಣ್ಣರ ಕೈಯಲ್ಲಿದ್ದ ಮಿಂಚಿ ಕಿಡಿ ಸೂಸುವ ಸುರುಸುರಬತ್ತಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿತು.