ಸಾರಾಂಶ
ಕಳೆದ ಏಳು ದಿನಗಳಿಂದ ನಡೆಯುತ್ತಿದ್ದ ತಿರುವಾಡಿಪ್ಪುರಂ ಕಾರ್ಯಕ್ರಮಗಳ ಅಂಗವಾಗಿ ಕಲ್ಯಾಣನಾಯಕಿ ಅಮ್ಮನವರಿಗೆ ಭಾನುವಾರ ರಾತ್ರಿ ಬಂಗಾರದ ಚಿಕ್ಕಶೇಷಾಲಂಕಾರದೊಂದಿಗೆ ಉತ್ಸವ ನೆರವೇರಿತು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ತಿರುವಾಡಿಪ್ಪುರಂ ದಿನವಾದ ಸೋಮವಾರ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಮಹಾಲಕ್ಷ್ಮೀ ಯದುಗಿರಿನಾಯಕಿ ಅಮ್ಮನವರ ವರ್ಧಂತಿ ವೈಭವದಿಂದ ನೆರವೇರಿತು.ಮಹಾಲಕ್ಷ್ಮೀ ಕಲ್ಯಾಣ ನಾಯಕಿ ಅಮ್ಮನವರಿಗೆ ವಿಶೇಷ ಅಲಂಕಾರ, ಸೇವಾರ್ಥಗಳು ನಡೆದವು. ಇಡೀ ದಿನ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಸ್ರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಮೈನಡುಗಿಸುವ ಚಳಿ, ಜಡಿಮಳೆಯ ನಡುವೆಯೂ ಧಾರ್ಮಿಕ ಕೈಂಕರ್ಯಗಳು ಶ್ರದ್ಧಾ- ಭಕ್ತಿಯಿಂದ ನೆರವೇರಿದವು.
ತಿರುವಾಡಿಪ್ಪುರಂ ಭಾರತದ ಎಲ್ಲಾ ವೈಷ್ಣವ ದೇವಾಲಯಗಳಲ್ಲಿ ಆಚರಿಸಲ್ಪಡುತ್ತಿದ್ದು, ಮೇಲುಕೋಟೆಯಲ್ಲಿ ತಿರುವಾಡಿಪ್ಪುರಂ ‘ಅಮ್ಮನವರ ವರ್ಧಂತಿ’ಯಾಗಿ ವೈಭವದಿಂದ ನೆರವೇರುತ್ತಾ ಬಂದಿದೆ. ಸ್ಥಾನೀಕರಾದ ಕೋವಿಲ್‌ನಂಬಿ ಮುಕುಂದನ್ ಹಾಗೂ ಪ್ರಸನ್ನಕುಮಾರ್ ಮಹೋತ್ಸವದ ಯಶಸ್ಸಿಗೆ ವಿಶೇಷವಾಗಿ ಶ್ರಮಿಸುವ ಮೂಲಕ ಅನೂಚಾನ ಪರಂಪರೆಯಂತೆ ತಿರುವಾಡಿಪ್ಪುರಂ ಮಹೋತ್ಸವವನ್ನು ಈ ವರ್ಷವೂ ಮೇಲುಕೋಟೆ ದೇವಾಲಯದಲ್ಲಿ ವೈಭವದ ಆಚರಣೆಯನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಮಹೋತ್ಸವದ ಅಂಗವಾಗಿ ಕಲ್ಯಾಣನಾಯಕಿ ಅಮ್ಮನವರಿಗೆ ಬೆಳಗ್ಗೆ 8 ಗಂಟೆ ವೇಳೆಗೆ ಬೆಳ್ಳಿಯ ದೊಡ್ಡ ಆದಿಶೇಷ ವಾಹನೋತ್ಸವ, ದಿವ್ಯ ಪ್ರಬಂಧಪಾರಾಯಣ ಹಾಗೂ ಮಂಗಳವಾದ್ಯದೊಂದಿಗೆ ನೆರವೇರಿತು. ನಂತರ ದ್ವಾದಶಾರಾಧನೆಯೊಂದಿಗೆ ಅಭಿಷೇಕ , ಮಹಾಮಂಗಳಾರತಿ ನೆರವೇರಿಸಲಾಯಿತು.
ಕಳೆದ ಏಳು ದಿನಗಳಿಂದ ನಡೆಯುತ್ತಿದ್ದ ತಿರುವಾಡಿಪ್ಪುರಂ ಕಾರ್ಯಕ್ರಮಗಳ ಅಂಗವಾಗಿ ಕಲ್ಯಾಣನಾಯಕಿ ಅಮ್ಮನವರಿಗೆ ಭಾನುವಾರ ರಾತ್ರಿ ಬಂಗಾರದ ಚಿಕ್ಕಶೇಷಾಲಂಕಾರದೊಂದಿಗೆ ಉತ್ಸವ ನೆರವೇರಿತು.ವರ್ಧಂತಿ ಮಹೋತ್ಸವದ ಅಂಗವಾಗಿ ಅಮ್ಮನವರ ಸನ್ನಿಧಿಯ ಆವರಣವನ್ನು ತಳಿರು ತೋರಣಗಳಿಂದ ಆಕರ್ಷಕವಾಗಿ ಸಿಂಗಾರ ಮಾಡಲಾಗಿತ್ತು. ದೇಗುಲದ ಇಒ ಶೀಲಾ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.