ಅಭಿನಯ, ಆಂಗೀಕ, ವಾಚಿಕ ಹಾಗೂ ಸಾತ್ವಿಕ, ಆಹರ‍್ಯ ಇವು ವ್ಯಕ್ತಿಯನ್ನು ಕಲಾವಿದರನ್ನಾಗಿ ರೂಪಿಸುತ್ತವೆ. ಅದೇ ರೀತಿ ಅವರು ಪಾತ್ರಕ್ಕೆ ಪ್ರಸಾಧನ ವೇಷಭೂಷಣದ ಮೂಲಕ ಗಜಾನನ ಮಹಾಲೆ ಜೀವ ತುಂಬುತ್ತಿದ್ದರು.

ಧಾರವಾಡ:

ಗಜಾನನ ಮಹಾಲೆ ಪ್ರಸಾಧನದಲ್ಲಿ ಪ್ರಾವಿಣ್ಯತೆ ಪಡೆದಿದ್ದು, ಅನೇಕ ನಾಟಕ, ಸಂಗೀತ ಮತ್ತು ಚಿತ್ರಕಲೆಗಳಲ್ಲಿಯೂ ಪರಿಣಿತಿ ಪಡೆದಿದ್ದರು. ಅವರ ಹೆಸರಿನ ಪ್ರತಿಷ್ಠಾನವು ಸರ್ಕಾರಿ ಅನುದಾನಿತ ಟ್ರಸ್ಟ್‌ಗಿಂತ ಅವರ ಅಭಿಮಾನಗಳಿಂದ ರಚಿತವಾಗಿದೆ ಎಂದು ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ ಹೇಳಿದರು.

ದಿ. ಗಜಾನನ ಮಹಾಲೆ ಕಲಾ ಪ್ರತಿಷ್ಠಾನ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಪ್ರಸಾಧನ ಕಲಾವಿದ ಗಜಾನನ ಮಹಾಲೆ 94ನೇ ಜನ್ಮದಿನಾಚರಣೆಯಲ್ಲಿ ಕಲಾ ಉಪಾಸಕ ಪ್ರಶಸ್ತಿ ಪ್ರದಾನ ಮಾಡಿದ ಅವರು, ಎಪ್ಪತ್ತರ ದಶಕದಲ್ಲಿ ತಾವು ಮಹಾಲೆಯವರ ಕೈಯಿಂದ ಪ್ರಸಾಧನ ಮಾಡಿಕೊಂಡಿದ್ದನ್ನು ಸ್ಮರಿಸಿದರು. ಅಭಿನಯ, ಆಂಗೀಕ, ವಾಚಿಕ ಹಾಗೂ ಸಾತ್ವಿಕ, ಆಹರ‍್ಯ ಇವು ವ್ಯಕ್ತಿಯನ್ನು ಕಲಾವಿದರನ್ನಾಗಿ ರೂಪಿಸುತ್ತವೆ. ಅದೇ ರೀತಿ ಅವರು ಪಾತ್ರಕ್ಕೆ ಪ್ರಸಾಧನ ವೇಷಭೂಷಣದ ಮೂಲಕ ಜೀವ ತುಂಬುತ್ತಿದ್ದರು. ಅವರು ಮನೆತನದ ಪರಂಪರೆಯ ವೃತ್ತಿಗೆ ಘನತೆ ತಂದುಕೊಟ್ಟು, ಹವ್ಯಾಸವಾಗಿ ಮೇಕಪ್, ಚಿತ್ರಕಲೆ, ಸಂಗೀತ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದರು ಎಂದರು.

₹ 10000 ನಗದು ಹಾಗೂ ಕಲಾ ಉಪಾಸಕ ಪ್ರಶಸ್ತಿ ಫಲಕ ಸ್ವೀಕರಿಸಿದ ದೀಪಕ ಮಹಾಲೆ, ತಮ್ಮ ಅಣ್ಣ ಗಜಾನನ ಮಹಾಲೆಯವರು ತಮಗೆ ಸ್ಫೂರ್ತಿದಾಯಕರು. ತಮ್ಮ ಸಂಗಡ ಪ್ರಸಾಧನ ಕಲೆಯಲ್ಲಿ ತೊಡಗಿಸಿಕೊಳ್ಳಲು ಕರೆದುಕೊಂಡು ಹೋಗುತ್ತಿದ್ದರು. ಅವರ ಸರಳತೆ ಮತ್ತು ಅವರು ತೊಡಗಿಸಿಕೊಳ್ಳುತ್ತಿದ್ದ ವಿಭಿನ್ನ ಶೈಲಿಯ ಪ್ರಸಾಧನದ ಕಲೆಯಿಂದಲೇ ನಾನಿಂದು ಉತ್ತಮ ಪ್ರಸಾಧನ ಕಲಾವಿದನಾಗಿ ಹೊರಹೊಮ್ಮಲು ಸಾಕ್ಷಿಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಬಾಳಣ್ಣಾ ಶೀಗೀಹಳ್ಳಿ, ಉತ್ತರ ಕರ್ನಾಟಕದ ಪ್ರಸಾಧನ ಕಲೆಯಲ್ಲಿ ದಿಗ್ಗಜರಾಗಿ ಜನಮಾನಸದಲ್ಲಿ ಇಂದಿಗೂ ಮಹಾಲೆ ನೆಲೆಸಿದ್ದಾರೆ. ಹವ್ಯಾಸಿ ಕಲೆಯೊಂದಿಗೆ ತಮ್ಮ ವೃತ್ತಿಯನ್ನು ಅಷ್ಟೇ ಶ್ರದ್ಧಾ ಭಕ್ತಿಯಿಂದ ಮತ್ತು ಸರಳತೆಯಿಂದ ಬದುಕಿ ತಮ್ಮ ಕುಟುಂಬದ ಜತೆಗೆ ಸಮಾಜದಲ್ಲಿ ಕಲೆಯ ನೆಲೆಯನ್ನು ಉಳಿಸಿದ ಮಹಾನ್ ಕಲಾವಿದ ಎಂದರು.

ಅನುರಾಗ ಸಾಂಸ್ಕೃತಿ ಬಳಗದ ಡಾ. ಅನೀಲ ಮೇತ್ರಿ ಹಾಗೂ ಹೇಮಂತ ಲಮಾಣಿ, ಸೋಹೇಲ್ ಸೈಯದ್‌, ಸೋಮಿಬಾಯಿ ಕುರಿಗಾರ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿದವು. ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು. ಅಪೂರ್ವಾ ಮಹಾಲೆ, ಕಲಾವಿದ ಬಿ. ಮಾರುತಿ, ಬಿಐ, ಈಳಿಗೇರ, ಕೆ.ಎಚ್.ನಾಯಕ, ಸಂತೋಷ ಮಹಾಲೆ ಮತ್ತಿತರರು ಇದ್ದರು.