ಜೀವ ಬಿಟ್ಟೇವು ತಾಲೂಕು ಬಿಡೆವು ಎಂಬ ಗಟ್ಟಿ ನಿಲುವಿನಿಂದ ನಿರಂತರ ೧೩೮೧ನೇ ದಿನದಲ್ಲಿ ನಡೆಯುತ್ತಿರುವ ತಾಲೂಕು ಹೋರಾಟ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಜೀವ ಬಿಟ್ಟೇವು ತಾಲೂಕು ಬಿಡೆವು ಎಂಬ ಗಟ್ಟಿ ನಿಲುವಿನಿಂದ ನಿರಂತರ ೧೩೮೧ನೇ ದಿನದಲ್ಲಿ ನಡೆಯುತ್ತಿರುವ ತಾಲೂಕು ಹೋರಾಟ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿತು.

ಮಹಾಲಿಂಗಪುರ ಹಾಗೂ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಹೋರಾಟಗಾರರು ಬೆಳಗ್ಗೆ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆಯೊಂದಿಗೆ ಸರ್ಕಾರದ ವಿರುದ್ಧ, ತಾಲೂಕು ಘೋಷಣೆಗೆ ಆಗ್ರಹದ ಘೋಷಣೆ ಕೂಗುತ್ತಾ ಚನ್ನಮ್ಮ ವೃತ್ತ ತಲುಪಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ವೃತ್ತದಲ್ಲಿಯೇ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಹೋರಾಟ ಮುಖಂಡರಾದ ಗಂಗಾಧರ ಮೇಟಿ, ನಿಂಗಪ್ಪ ಬಾಳಿಕಾಯಿ, ಮಹಾಲಿಂಗಪ್ಪ ಸನದಿ, ಅರ್ಜುನ ಹಲಗಿಗೌಡರ, ಭೀಮಶೀ ಸಸಾಲಟ್ಟಿ, ಚನ್ನಬಸು ಹುರಕಡ್ಲಿ, ಶ್ರೀಪಾದ ಗೂಂಡಾ, ಶಿವನಗೌಡ ಪಾಟೀಲ, ಸಿದ್ದು ಶಿರೋಳ,ಶಂಕರ ಹಾದಿಮನಿ, ಚಿದಾನಂದ ಧರ್ಮಟ್ಟಿ ,ವೀರೇಶ ಆಸಂಗಿ ಇತರರು ಮಾತನಾಡಿ, ಮಹಾಲಿಂಗಪುರ ಸುಮಾರು ೨ ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು ಆರ್ಥಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ಕೃಷಿ, ವ್ಯಾಪಾರ ಮುಂತಾದ ಎಲ್ಲ ಕ್ಷೇತ್ರಗಳ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ ನಾವು ಅಧಿಕಾರಕ್ಕೆ ಬಂದರೆ ತಕ್ಷಣವೇ ಮಹಾಲಿಂಗಪುರ ತಾಲೂಕು ಘೋಷಿಸುವುದಾಗಿ ಭರವಸೆ ಕೊಟ್ಟಿದ್ದು, ಅಧಿಕಾರಕ್ಕೆ ಬಂದ ಬಳಿಕ ಸೌಜನ್ಯಕ್ಕಾದರೂ ತಾಲೂಕು ಹೋರಾಟಗಾರರ ಜತೆಗೆ ಮಾತನಾಡುವುದಕ್ಕೂ ಅವಕಾಶ ನೀಡದಿರುವುದು ಜನತೆಯನ್ನು ಕೆರಳಿಸಿದೆ.

ಇದೇ ವರ್ತನೆ ತೋರಿದರೆ ಚುನಾವಣೆ ಬಹಿಷ್ಕರಿಸಿ ಸರ್ಕಾರಕ್ಕೆ ಉತ್ತರ ನೀಡಬೇಕಾಗುತ್ತದೆ. ಮಹಾಲಿಂಗಪುರ ಜನ ಶಾಂತಿಪ್ರಿಯರು ಈಗಾಗಲೇ ಸಾಮೋಪಾಯ, ಭೇದೋಪಾಯ ಮುಗಿದಿದ್ದು, ಇನ್ನು ದಂಡೋಪಾಯ ಬಳಸಬೇಕಾಗುತ್ತದೆ. ಯಾವ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ತಾಲೂಕು ಘೋಷಣೆಯಾಗುವವರೆಗೂ ಹೋರಾಟ ಮುಂದುವರೆಯಲಿದೆ. ಲಾಠಿ ಏಟು ತಿನ್ನಲು, ಜೈಲಿಗೆ ಹೋಗಲು ಸಿದ್ಧರಿದ್ದೇವೆ. ಸರ್ಕಾರ ಕಡೆಗಣಿಸಿದರೆ ಭಾರೀ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಾಸಕ ಸಿದ್ದು ಸವದಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ,ಮಹಾಲಿಂಗಪ್ಪ ಅವರಾದಿ, ಜಿಪಂ ಸದಸ್ಯ ಮಹಾಂತೇಶ ಹಿಟ್ಟಿನಮಠ, ಧರೆಪ್ಪ ಸಾಂಗ್ಲಿಕರ,ಈರಪ್ಪ ದಿನ್ನಿಮನಿ, ಮಹಾದೇವ ಮರಾಪುರ, ಗಿರಿಮಲ್ಲಪ್ಪ ಬರಗಿ, ಮಹಾಲಿಂಗಪ್ಪ ಲಾತೂರ, ಪರಪ್ಪ ಬ್ಯಾಕೋಡ, ಭೀಮಶಿ ಗೌಂಡಿ, ರವಿ ಜವಳಗಿ, ಅರ್ಜುನ ಮೋಪಗಾರ, ಬಿ.ಜಿ. ಹೊಸೂರ, ಸುಭಾಸ ಶಿರಬೂರ, ನಿಂಗಪ್ಪ ಬಾಳಿಕಾಯಿ, ಮಾರುತಿ ಕರೋಶಿ, ವಿನೋದಗೌಡ ಉಳ್ಳೆಗಡ್ಡಿ, ಚನ್ನಪ್ಪ ಪಟ್ಟಣಶೆಟ್ಟಿ, ಚೆನ್ನು ದೇಸಾಯಿ, ಹಣಮಂತ ಜಮಾದಾರ, ಗಿರಿಯಪ್ಪ ಕಬಾಡಿ, ಮೂಸಾ ಬೂದಿಹಾಳ, ರಾಜು ತೇರದಾಳ,ಮುಬಾರಕ್ ಅಲ್ಲಾಖಾನ, ಮೋಸಿನ್‌ ಹಳಿಂಗಳಿ, ಶಂಕರ ಸೈದಾಪುರ, ಮಲ್ಲಪ್ಪ ಮಿರ್ಜಿ, ಬಸವರಾಜ ನಾಗನೂರ, ದುಂಡಪ್ಪ ಜಾಧವ, ಅರ್ಜುನ ಹಲಗಿಗೌಡರ, ರಫೀಕ್ ಮಾಲದಾರ, ಮಲ್ಲು ಸಂಗಣ್ಣವರ, ತಿಪ್ಪಣ್ಣ ಬಂಡಿವಡ್ಡರ, ವಿಠ್ಠಲ ಸಂಶಿ, ಈಶ್ವರ ಮುರಗೋಡ, ಎಂ.ಎಸ್.ಮುಗಳಖೋಡ, ಪ್ರಭು ನಾವಿ, ಪಂಡಿತಪ್ಪ ಪೂಜಾರ, ಶಂಕರ ಕೋಳಿಗುಡ್ಡ, ನಾನಾ ಜೋಶಿ, ಸಿದ್ದು ಬೆಣ್ಣೂರ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.

ಬಂದ್‌ ಕರೆ ವ್ಯಾಪಕ ಪ್ರತಿಕ್ರಿಯೆ: ಹೋರಾಟಗಾರರು ಸೋಮವಾರ ಕರೆ ನೀಡಿದ್ದ ಮಹಾಲಿಂಗಪುರ ಬಂದ್‌ ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್‌ ಕರೆಯ ಹಿನ್ನೆಲೆ ಸರ್ಕಾರಿ ಬಸ್‌ಗಳ ಸಂಚಾರ ಮತ್ತು ಹೋಟೆಲ್ ಅಂಗಡಿ ಮುಂಗಟ್ಟುಗಳು ಸ್ಥಗಿತಗೊಂಡಿದ್ದವು. ಬಸ್ ನಿಲ್ದಾಣ ಮತ್ತು ಪ್ರಮುಖ ಬೀದಿಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಶಾಲಾ-ಕಾಲೇಜು ಅನಧಿಕೃತ ರಜೆ ನೀಡಲಾಗಿತ್ತು. ಪ್ರತಿಭಟನೆ ಮಾರ್ಗ ಹೊರತುಪಡಿಸಿ ಮಾರುಕಟ್ಟೆ ಪ್ರದೇಶ ಜನರಿಲ್ಲದೇ ಬಿಕೋ ಎನ್ನುತ್ತಿತ್ತು.