ವಿಶ್ವವಿಖ್ಯಾತ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭಗೊಂಡಿದ್ದು, ಇದರ ಪೂರ್ವಭಾವಿಯಾಗಿ ಭಾನುವಾರ ಬಾಹುಬಲಿ ಬೆಟ್ಟದ ಮೇಲೆ ಅಟ್ಟಳಿಗೆ ಮುಹೂರ್ತ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

ಕಾರ್ಕಳ : ವಿಶ್ವವಿಖ್ಯಾತ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭಗೊಂಡಿದ್ದು, ಇದರ ಪೂರ್ವಭಾವಿಯಾಗಿ ಭಾನುವಾರ ಬಾಹುಬಲಿ ಬೆಟ್ಟದ ಮೇಲೆ ಅಟ್ಟಳಿಗೆ ಮುಹೂರ್ತ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.ಫೆ. 18ರಿಂದ 28ರವರೆಗೆ ಹನ್ನೊಂದು ದಿನಗಳ ಕಾಲ ನಡೆಯಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಮುಖ ಪೂರ್ವಸಿದ್ಧತೆಗಳಲ್ಲಿ ಒಂದಾದ ಅಟ್ಟಳಿಗೆ ನಿರ್ಮಾಣ ಕಾರ್ಯಕ್ಕೆ ಶುಭಾರಂಭ ಮಾಡಲಾಯಿತು. ಬೆಳಗ್ಗೆ 8.35ರಿಂದ 8.55ರ ಶುಭ ಮುಹೂರ್ತದಲ್ಲಿ ಪರಮಪೂಜ್ಯ ರಾಜಗುರು, ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹಾಗೂ ಸೋಂದ ಮಠದ ಪರಮಪೂಜ್ಯ ಅಕಲಂಕಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಅಟ್ಟಳಿಗೆ ಮುಹೂರ್ತ ಕಾರ್ಯಕ್ರಮ ನೆರವೇರಿತು.

ಇದಕ್ಕೂ ಮೊದಲು ಬೆಳಗ್ಗೆ 7.30ರಿಂದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ವಿಶೇಷ ಪಾದಾಭಿಷೇಕ ನೆರವೇರಿಸಲಾಯಿತು. ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡು ಭಗವಾನ್ ಬಾಹುಬಲಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಬಾಹುಬಲಿ ಸ್ವಾಮಿಯ ಏಕಶಿಲಾ ಮೂರ್ತಿಗೆ ವಿವಿಧ ಪವಿತ್ರ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಟ್ಟಳಿಗೆ ನಿರ್ಮಾಣ ಕಾರ್ಯವು ಮಹತ್ವದ ಸಿದ್ಧತೆಯಾಗಿದ್ದು, ಮುಂಬರುವ ಮಹೋತ್ಸವದ ಸಿದ್ಧತೆಗಳಿಗೆ ಅಧಿಕೃತ ಚಾಲನೆ ದೊರೆತಂತಾಗಿದೆ.ಕಾರ್ಯಕ್ರಮದಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಮಾಜಿ ಶಾಸಕ ಅಭಯಚಂದ್ರ ಜೈನ್, ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ ಸಹಕಾರರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಕೋಶಾಧಿಕಾರಿ ಎ. ಮೋಹನ ಪಡಿವಾಳ್, ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್, ಎ. ಎನ್. ರಾಜೇಂದ್ರ ಕುಮಾರ್, ಸುನಿಲ್ ಬಜಗೋಳಿ ಹಾಗೂ ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ನ ಸುಧಾಕರ ಶೆಟ್ಟಿ ಸೇರಿದಂತೆ ಹಲವು ಗಣ್ಯರು, ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ವಿವಿಧ ಹಂತದ ಸಿದ್ಧತೆಗಳು ಮುಂದುವರಿದಿದ್ದು, ದೇಶ-ವಿದೇಶಗಳಿಂದ ಸಹಸ್ರಾರು ಭಕ್ತರು ಹಾಗೂ ಜೈನ ಸಮುದಾಯದ ಗಣ್ಯರು ಆಗಮಿಸುವ ನಿರೀಕ್ಷೆಯಿದೆ.