ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಜಿಲ್ಲೆಯಲ್ಲಿ ಪ್ರಸ್ತುತ ಬ್ಯಾಂಕುಗಳ ಒಟ್ಟಾರೆ ಠೇವಣಿ ಮತ್ತು ಸಾಲ (ಸಿ.ಡಿ.) ಅನುಪಾತವು ಶೇ.47.88ರಷ್ಟು ಇದ್ದು, ಇದನ್ನು ಮತ್ತಷ್ಟು ಸುಧಾರಿಸಿ, ಆರ್‌ಬಿಐ ನಿಯಮಾವಳಿ ಅನ್ವಯ ಶೇ.50ರ ಗುರಿ ಸಾಧಿಸಬೇಕು ಎಂದು ಕೆನರಾ ಬ್ಯಾಂಕ್ ಪ್ರಾದೇಶಿಕ ಪ್ರಂಬಂಧಕ ಮಹಾಮಾಯ ಪ್ರಸಾದ್ ರಾಯ್ ತಿಳಿಸಿದರು.ಅವರು ಬುಧವಾರ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಳೆದ ಐದು ವರ್ಷಗಳಲ್ಲಿ ಕೇವಲ 2018-19ನೇ ಸಾಲಿನಲ್ಲಿ ಮಾತ್ರ ಈ ಸಿ.ಡಿ. ಅನುಪಾತವು 50.32 ಹೆಚ್ಚಿತ್ತು. ನಂತರದ ವರ್ಷಗಳಲ್ಲಿ ಶೇ.50ಕ್ಕಿಂತ ಕಡಿಮೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಠೇವಣಿ ಅನುಪಾತವು ಶೇ.47.68 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.47.88 ರಷ್ಟಾಗಿ ಶೇ.0.42 ರಷ್ಟು ಏರಿಕೆಯಾಗಿದೆ. ಎಲ್ಲ ಬ್ಯಾಂಕುಗಳು ಸಿ.ಡಿ ಅನುಪಾತವನ್ನು ಹೆಚ್ಚಿಸಲು ಕಾರ್ಯಪ್ರವೃತ್ತರಾಗಬೇಕು ಎಂದರು.ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಆದ್ಯತೆಯ ಮತ್ತು ಆದ್ಯತೆಯೇತರ ವಲಯಗಳೆರಡಕ್ಕೂ ಒಟ್ಟಾರೆಯಾಗಿ 15,514.08 ಕೋಟಿ ರು.ಗಳ ವಾರ್ಷಿಕ ಸಾಲದ ಗುರಿಯನ್ನು ನಿಗದಿಪಡಿಸಲಾಗಿದ್ದು, ಜೂನ್ ಅಂತ್ಯದವರೆಗೆ ಜಿಲ್ಲೆಯ ಬ್ಯಾಂಕುಗಳು 4,963.96 ಕೋಟಿ ರು. ಸಾಲ ವಿತರಿಸಿ ಶೇ.32 ಗುರಿ ಸಾಧಿಸಿವೆ. ಈ ಗುರಿ ಸಾಧನೆ ಕೂಡ ಹೆಚ್ಚಾಗಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಆರ್ಥಿಕ ವರ್ಷದಲ್ಲಿ 2024ರ ಡಿಸೆಂಬರ್ ಅಂತ್ಯದ ವರೆಗೆ ಕೃಷಿ ವಲಯಕ್ಕೆ 4230 ನಿಗದಿತ ಗುರಿಗೆ 1145 (ಶೇ.27.06), ಸಣ್ಣ ಮತ್ತು ಅತೀಸಣ್ಣ ಉದ್ಯಮ ವಲಯಕ್ಕೆ 3713 ಗುರಿಯಲ್ಲಿ 1569 (ಶೇ.42.26), ಶಿಕ್ಷಣ ವಲಯಕ್ಕೆ 187ರಲ್ಲಿ 33 (ಶೇ.17.42), ವಸತಿ ಕ್ಷೇತ್ರಕ್ಕೆ 510ರಲ್ಲಿ 52 (ಶೇ.10.23) ಹಾಗೂ ಆದ್ಯತೇತರ ವಲಯಗಳಿಗೆ 6474ರಲ್ಲಿ 2014 (ಶೇ.31.11) ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದವರು ವಿವರಗಳನ್ನು ನೀಡಿದರು.ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ., ಆರ್‌ಬಿಐ ಲೀಡ್ ಡಿಸ್ಟ್ರಿಕ್ಟ್ ಅಧಿಕಾರಿ ಅಲೋಕ್ ಸಿನ್ಹಾ, ನಬಾರ್ಡ್‌ನ ಡಿ.ಡಿ.ಎಂ ಸಂಗೀತಾ ಕಾರ್ಥಾ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.