ಮಹಾನಗರ ಪಾಲಿಕೆ: ಕಾಂಗ್ರೆಸ್‌ ತಂತ್ರಗಾರಿಕೆ ಮುಂದೆ ಬಿಜೆಪಿ ತಂತ್ರ ವಿಫಲ

| Published : Jan 10 2024, 01:45 AM IST

ಮಹಾನಗರ ಪಾಲಿಕೆ: ಕಾಂಗ್ರೆಸ್‌ ತಂತ್ರಗಾರಿಕೆ ಮುಂದೆ ಬಿಜೆಪಿ ತಂತ್ರ ವಿಫಲ
Share this Article
  • FB
  • TW
  • Linkdin
  • Email

ಸಾರಾಂಶ

ಹೆಚ್ಚು ಸಂಖ್ಯಾಬಲ ಹೊಂದಿದ್ದರೂ ಪಕ್ಷೇತರರನ್ನು ಕಡೆಗಣನೆ ಮಾಡಿದ್ದೇ ಬಿಜೆಪಿ ಮುಳುವಾಯಿತು. ಇದರಿಂದ ಸಹಜವಾಗಿ ಕಾಂಗ್ರೆಸ್‌ ಮೇಯರ್‌, ಉಪಮೇಯರ್‌ ಸ್ಥಾನಗಳನ್ನು ಪಡೆದುಕೊಂಡಿತು.

ಖಾಜಾಮೈನುದ್ದೀನ್‌ ಪಟೇಲ್‌

ಕನ್ನಡಪ್ರಭ ವಾರ್ತೆ ವಿಜಯಪುರ

ಕಮಲದ ಕೋಟೆಯಲ್ಲಿ ಕೈ ರಣತಂತ್ರಕ್ಕೆ ಕಮಲ ಮುದುಡಿದೆ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ 16 ಸ್ಥಾನಗಳನ್ನು (17 ಸ್ಥಾನಗಳಲ್ಲಿ ಒಬ್ಬ ಸದಸ್ಯನ ನಿಧನರಾಗಿದ್ದಾರೆ) ಬಾಚಿಕೊಂಡರೂ ಪಾಲಿಕೆ ಗದ್ದುಗೆ ಏರಲು ವಿಫಲವಾಗಿದೆ. ಹೀಗಾಗಿ ಬಿಜೆಪಿ ಕೈಗೆ ಬಂದ ಕಾಂಗ್ರೆಸ್‌ ಪಾಲಾಗಿದೆ.

ಆದರೆ, ಮಹಾನಗರ ಪಾಲಿಕೆಯ ೧೦ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದರೂ ಕಾಂಗ್ರೆಸ್ ಪಕ್ಷಕ್ಕೆ ಪಕ್ಷೇತರ ಸದಸ್ಯರು, ಎಐಎಂಐಎಂ ಹಾಗೂ ಜೆಡಿಎಸ್ ಸದಸ್ಯರು ಕಾಂಗ್ರೆಸ್‌ ಪರವಾಗಿದ್ದರಿಂದ ಗೆಲವು ಕೂಡ ಸರಳವಾಯಿತು. ಈ ಹಿಂದೆಯೂ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಅನೇಕ ಬಾರಿ ಮೇಯರ್ ಹುದ್ದೆಯಿಂದ ವಂಚಿತವಾಗಿತ್ತು. ಈಗ ಅದೇ ಇತಿಹಾಸ ಮರುಕಳಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ, ಸಚಿವ ಶಿವಾನಂದ ಪಾಟೀಲ, ವಿಪ ಸದಸ್ಯ ಸುನೀಲಗೌಡ ಪಾಟೀಲ, ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಅವರು ಹೆಣೆದ ರಣತಂತ್ರಕ್ಕೆ ಕಮಲ ಪಾಳಯಕ್ಕೆ ಈ ಬಾರಿಯೂ ಬಿಜೆಪಿ ಪಾಲಿಕೆ ಗದ್ದುಗೆ ಏರಲು ವಿಫಲವಾಗಿದೆ.

ಚುನಾವಣೆಯಲ್ಲಿ ತಮ್ಮ ಅಸ್ತಿತ್ವ ಸಾಧಿಸಲೇಬೇಕು ಎಂಬ ಕಾರಣಕ್ಕೆ ಆರಂಭದಲ್ಲಿಯೇ ಅದರ ವಾಸನೆ ಅರಿತ ಕಾಂಗ್ರೆಸ್‌, ಬಹುಮತಕ್ಕೆ ಬೇಕಾದ ಸಂಖ್ಯಾಬಲದ ಕ್ರೂಢೀಕರಿಸಿತು. ತನ್ನ ಬಳಿ ಇರುವ 10 ಸಂಖ್ಯೆಗೆ, ಎಐಎಂಐಎಂನ 2, ಜೆಡಿಎಸ್‌ನ 1 ಮತ್ತು ಐವರು ಪಕ್ಷೇತರರನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಹೀಗಾಗಿ ಸಂಖ್ಯಾಬಲ 18ಕ್ಕೇರಿತು. ಅಲ್ಲದೆ, ಸಚಿವರು ಮತ್ತು ಶಾಸಕರು ಸೇರಿದಂತೆ ಒಟ್ಟು 22ಕ್ಕೆ ಸಂಖ್ಯೆ ಸೇರಿತು. ಹೀಗಾಗಿ ತಾವು ಪಾಲಿಕೆಯಲ್ಲಿ ನಿರಾಯಾಸವಾಗಿ ಗೆಲ್ಲಬಹುದೆಂಬ ಲೆಕ್ಕಾಚಾರವನ್ನು ಕಾಂಗ್ರೆಸ್‌ ಕಂಡಾಗಿತ್ತು.

ತಡವಾಗಿ ಎಚ್ಚೆತ್ತುಕೊಂಡ ಬಿಜೆಪಿ:

ಕಾಂಗ್ರೆಸ್ ಪಕ್ಷ ಸೆಳೆದಿದ್ದ ಪಕ್ಷೇತರರೊಬ್ಬರನ್ನೇ ಮೇಯರ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ನಿಟ್ಟಿನಲ್ಲಿ ಬಿಜೆಪಿ ತೆರೆಮರೆಯ ರಣತಂತ್ರ ರೂಪಿಸಿತ್ತು. ಈ ತಂತ್ರ ಫಲಿಸಿದ್ದರೆ ಬಿಜೆಪಿ ಪಾಲಿಕೆ ಚುಕ್ಕಾಣಿಯನ್ನು ಕೈ ವಶ ಮಾಡಿಕೊಳ್ಳುವುದು ಕಷ್ಟವಿರಲಿಲ್ಲ. ಆದರೆ ಈ ರಣತಂತ್ರ ಬಿಜೆಪಿಗೆ ಮುಳುವಾಯಿತು. ಅಲ್ಲದೆ, ತಮ್ಮ ಸದಸ್ಯ ಬಲವನ್ನೇ ಹೆಚ್ಚು ನಂಬಿಕೊಂಡಿದ್ದರಿಂದ ಬಿಜೆಪಿ ಅಧಿಕಾರ ಹಿಡಿದುಕೊಳ್ಳುವಲ್ಲಿ ವಿಫಲವಾಯಿತು. ಪಕ್ಷೇತರರನ್ನು ಹಿಡಿದಿಟ್ಟುಕೊಂಡಿದ್ದರೆ ಸರಳ ಬಹುಮತ ಸಾಧಿಸುತ್ತಿತ್ತು. ಅಷ್ಟರೊಳಗೆ ಕಾಂಗ್ರೆಸ್‌ ಪಕ್ಷೇತರರನ್ನು ತನ್ನ ಬಳಿ ಸೆಳೆದುಕೊಂಡಿತ್ತು.

ಪಾಲಿಕೆ ಸದಸ್ಯ ಚುನಾವಣೆಯಲ್ಲಿ ಯಾವ ಪಕ್ಷವೂ ಸ್ಪಷ್ಟಬಹುಮತ ಬಾರದ ಕಾರಣ ಮೇಯರ್ ಹುದ್ದೆ ಅಲಂಕರಿಸಲು ಪಕ್ಷೇತರರ ಬೆಂಬಲ ಅಗತ್ಯವಾಗಿತ್ತು. ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ಅಶೋಕ ನ್ಯಾಮಗೌಂಡ, ಅಲ್ತಾಫ್ ಇಟಗಿ, ವಿಮಲಾ ರಫೀಕ್‌ಅಹ್ಮದ್ ಖಾಣೆ, ಸುಮೀತ್ರಾ ರಾಜು ಜಾಧವ, ನಿಷಾತ್ ಹೈದರಲಿ ನದಾಫ್ ಹಾಗೂ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಏಕೈಕ ಸದಸ್ಯ ರಾಜು ಚವ್ಹಾಣ, ಎಐಎಂಎಐಎಂ ಪಕ್ಷದಿಂದ ಆಯ್ಕೆಯಾಗಿದ್ದ ಸುಫೀಯಾ ಅಬ್ದುಲ್ ರಹಿಮಾನ ವಾಟಿ, ರಿಜ್ವಾನಾಬಾನು ಕೈಸರ್ ಇನಾಮದಾರ ಹೀಗೆ ೮ ಜನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ ಪರಿಣಾಮ ಹಾಗೂ ಸಚಿವ ಡಾ.ಎಂ.ಬಿ. ಪಾಟೀಲ, ಶಾಸಕರಾದ ವಿಠ್ಠಲ ಕಟಕದೊಂಡ, ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ ಅವರ ಪ್ರಾತಿನಿಧಿ ಮತವೂ ಕಾಂಗ್ರೆಸ್‌ಗೆ ಬಿದ್ದ ಪರಿಣಾಮ ಕೈ ಗೆಲುವು ಸುಲಭವಾಯಿತು.