ಸಾರಾಂಶ
-ಕಲಬುರಗಿ ಸಚಿವ ಸಂಪುಟದಲ್ಲಿ ತೀರ್ಮಾನ । ಪ್ರಾವಾಸೋದ್ಯಮ, ಕೆರೆಗಳ ಭರ್ತಿಗೆ ಅನುದಾನ । ಜನರ ಕನಸು ನನಸಾಗಿದೆ
----ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುದಶಕದ ಬಳಿಕ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ರಾಯಚೂರು ಜಿಲ್ಲೆಗೆ ಸಮಧಾನಕರ ಆದ್ಯತೆ ಲಭಿಸಿದ್ದು, ಬಹುದಿನಗಳ ಬೇಡಿಕೆಯಾಗಿದ್ದ ರಾಯಚೂರು ನಗರವನ್ನು ಮಹಾನಗರ ಪಾಲಿಕೆಯನ್ನಾಗಿ ಘೋಷಣೆ, ಪ್ರವಾಸೋದ್ಯಮ ಮತ್ತು ಕೆರೆಗಳ ಭರ್ತಿಗೆ ಅನುದಾನ ಸೇರಿದಂತೆ ವಿವಿಧ ಆರೋಗ್ಯ ಮತ್ತು ನೀರಾವರಿಗೆ ಸಂಬಂಧಿಸಿದಂತೆ ವಿಷಯಗಳನ್ನು ಪ್ರಸ್ತಾಪಿಸಿ ಅವುಗಳಿಗೆ ಅನುಮೋದನೆ ನೀಡಲಾಗಿದೆ.
ಕಲ್ಯಾಣ ಕರ್ನಾಟಕ ಉತ್ಸವ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಆಯೋಜಿಸಿದ್ದ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಯಚೂರು ಜಿಲ್ಲೆ ಸೇರಿ ಈ ಭಾಗಕ್ಕೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ರೂಪಿಸಿದ್ದು, ಅವುಗಳಿಗೆ ಸಚಿವ ಸಂಪುಟವು ಸಹ ಒಪ್ಪಿಕೆ ನೀಡಿದೆ.ಮಹಾನಗರ ಪಾಲಿಕೆ ಸಾಕಾರ: ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಹೊಂದುವ ದೃಷ್ಠಿಕೋನದಿಂದ ರಾಯಚೂರು ನಗರಸಭೆಯನ್ನು ಮೇಲ್ದರ್ಜೆಗೆ ಏರಿಸಿ ಮಹಾನಗರ ಪಾಲಿಕೆಯನ್ನಾಗಿಸಬೇಕು ಎನ್ನುವ ಬಹುದಿನಗಳ ಬೇಡಿಕೆಯನ್ನು ಸರ್ಕಾರ ಸಾಕಾರಗೊಳಿಸಿದೆ. ಕಳೆದ ಅವಧಿಯ ಬಿಜೆಪಿ ಸರ್ಕಾರವು ರಾಯಚೂರು ನಗರಸಭೆಯನ್ನು ಮೇಲ್ದರ್ಜೆಗೆ ಏರಿಸಿ ಮಹಾನಗರ ಪಾಲಿಕೆಯನ್ನಾಗಿಸುವುದರ ಕುರಿತ ಮಾನದಂಡಗಳ ಪರಿಶೀಲನೆ ಮಾಡುವುವುದಾಗಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದು ಬಿಟ್ಟರೇ ಅದರ ಅನುಷ್ಠಾನಕ್ಕೆ ಯಾವುದೇ ರೀತಿಯ ಪ್ರಯತ್ನ ಮಾಡಿರಲಿಲ್ಲ. ಇದೀಗ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಲಬುರಗಿಯಲ್ಲಿ ಜರುಗಿದ ಸಚಿವ ಸಂಪುಟದಲ್ಲಿ ನಗರಸಭೆಯನ್ನು ಮೇಲ್ದರ್ಜೆಗೆ ಏರಿಸಿ ಮಹಾನಗರ ಪಾಲಿಕೆಯನ್ನಾಗಿಸುವ ನಿರ್ಣಯವನ್ನು ತೆಗೆದುಕೊಳ್ಳುವುದರ ಮೂಲಕ ನಿವಾಸಿಗಳ ಬಹುದಿನಗಳ ಕನಸು ನನಸಾದಂತಾಗಿದೆ.
ಜೊತೆಗೆ ಜಿಲ್ಲೆ ಮಾನ್ವಿ ತಾಲೂಕಿನ ಕುರ್ಡಿ ಕೆರೆ ಭರ್ತಿಗೆ 132 ಕೋಟಿ ರು.ಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು, ಮಾನ್ವಿ ತಾಲೂಕಿನ ಗೋರ್ಕಲ್, ಸುಂಕೇಶ್ವರ, ಮುರಾನಪುರ, ಬೆಟ್ಟದೂರು, ಕಪಗಲ್ ಕೆರೆಗಳನ್ನು ಭರ್ತಿ ಪ್ರಸ್ತಾಪನೆಗೊಂಡಿತ್ತು. ಅಲ್ಲದೇ ಇದರೊಂದಿಗೆ ಮಾನ್ವಿ ತಾಲೂಕಿನ ರಾಜಲಬಂಡಾ ಸಮೀಪ ಜಾಕ್ವೆಲ್ ಪಂಪ್ಹೌಸ ನಿರ್ಮಾಣ ಮಾಡಿ, ತುಂಗಭದ್ರಾ ನದಿಯಿಂದ ರೈಸಿಂಗ್ ಮೇನ್ ಮುಖಾಂತರ 14 ಕೆರೆಗಳಿಗೆ ನೀರು ತುಂಬಿಸಿ, ಕುಡಿಯುವ ನೀರಿನ ಕೊರತೆ ನಿವಾರಿಸಲು ಹಾಗೂ ಅಂತರ್ಜಲ ವೃದ್ಧಿಸುವ ಸದುದ್ದೇಶವನ್ನು ಈ ಯೋಜನೆ ಹೊಂದಿದೆ. ಸಿಂಧನೂರು ನಗರಕ್ಕೆ ಕುಡಿವ ನೀರಿಗಾಗಿ 29.80 ಕೋಟಿ ವೆಚ್ಚದ ಕೆರೆ ನಿರ್ಮಾಣಕ್ಕೆ ಕಾಮಗಾರಿಗೆ ಸಂಪುಟ ಒಪ್ಪಿಗೆ ನೀಡಿಲಾಗಿದೆ,ಆಡಳಿತಸೌಧ ಅನುಮೋದನೆ: ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯ ರಾಯಚೂರು ಜಿಲ್ಲೆಯ ನೂತನ ತಾಲೂಕುಗಳಾದ ಸಿರವಾರ ಹಾಗೂ ಮಸ್ಕಿ ತಾಲೂಕು ಕೇಂದ್ರದಲ್ಲಿ ಮೊದಲನೇ ಹಂತದಲ್ಲಿ ಟೈಪ್ ಎ ಮಾದರಿಯಲ್ಲಿ ತಲಾ 8.60 ಕೋಟಿಯಂತೆ ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವ್ಯಾಪ್ತಿಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಒಂದು ವಸತಿ ಶಾಲೆ ನಿರ್ಮಾಣಕ್ಕೆ 22 ಕೋಟಿ ಅನುದಾನಕ್ಕೆ ಅನುಮೋದನೆ ಮತ್ತು ಹಟ್ಟಿ ಚಿನ್ನದ ಗಣಿ ಕಂಪೆನಿಯ ಹಿರಾ ಬುದಿನ್ನಿ ಚಿನ್ನದ ಗಣಿಯಲ್ಲಿ ಪ್ರಸ್ತುತ ಇರುವ ಶಾಫ್ಟ್ ಆಳ ಹೆಚ್ಚಿಸುವ ಹಾಗೂ ಹೊಸ ಶಾಫ್ಟ್ ಅಳವಡಿಕೆ, ಅಗತ್ಯ ಕಾಮಗಾರಿ ನಿರ್ವಹಣೆ ಒಟ್ಟು 175 ಕೋಟಿ ವೆಚ್ಚವಾಗಲಿರುವ ಹಿನ್ನೆಲೆಯಲ್ಲಿ ಈ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆಯನ್ನು ಸಚಿವ ಸಂಪುಟವು ಒಪ್ಪಿಗೆನೀಡಿದೆ.
ಆರೋಗ್ಯ ರಕ್ಷಣೆಯಡಿ ಕಲ್ಯಾಣ ಕರ್ನಾಟಕ ಸಂಪೂರ್ಣ ಆರೋಗ್ಯ ಯೋಜನೆ ರೂಪಿಸಿ 47 ಆರೋಗ್ಯ ಕೇಂದ್ರಗಳ ಮುಖಾಂತರ ಅಭಿವೃದ್ಧಿಗೆ ಕ್ರಮವಹಿಸಿದ್ದು, ಈ ಭಾಗದ ಏಳು ಜಿಲ್ಲೆಗಳಲ್ಲಿ 24 ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೇಗೆ ಏರಿಸಲಾಗಿದೆ. ಇದರಲ್ಲಿ ರಾಯಚೂರು ಜಿಲ್ಲೆಗೆ ಮೂರು ಸೇರಿ ಒಟ್ಟು 10 ಸಮುದಾಯ ಆರೋಗ್ಯ ಕೇಂದ್ರಗಳಿವೆ, ಅಷ್ಟೇ ಅಲ್ಲದೇ 50 ಸಾವಿರ ಜನಸಂಖ್ಯೆಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನೀಡಲಾಗಿದೆ.ಪ್ರಾವಾಸೋದ್ಯಮಕ್ಕೆ 10 ಕೊಟಿ: ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಯಡಿ ವಿಶೇಷ ಆಸಕ್ತಿ ತೋರಿ 510 ಕೋಟಿ ಮೀಸಲಿಟ್ಟಿದ್ದು, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಸೇತುವೆಯ ಅಲ್ಲಮಪ್ರಭು ದೇವಸ್ಥಾನ ಪ್ರಗತಿ. ಮಸ್ಕಿ ಅಶೋಕ ಶಿಲಾಶಾಸನ ಅಭಿವೃದ್ಧಿಗೆ 10 ಕೋಟಿ ನೀಡಲಾಗಿದೆ. ಅಷ್ಟೇ ಅಲ್ಲದೇ ತುಂಗಭದ್ರಾ ಜಲಾಶಯಕ್ಕೆ ಪರ್ಯಾಯ ಜಲಾಶಯ ನಿರ್ಮಾಣಕ್ಕಾಗಿ ನವಲಿ ಸಮೀಪ ಬಿಆರ್ ನಿರ್ಮಿಸಲು ಅಗತ್ಯವಾದ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳಲು 9 ಸಾವಿರ ಕೋಟಿ ಒದಗಿಸಿದ್ದು, ಭೂಸ್ವಾಧೀನಕ್ಕೆ 6 ಸಾವಿರ ಕೋಟಿ ಎಚ್ಚದಲ್ಲಿ ನವಲಿ ಬಿಆರ್ ನಿರ್ಮಿಸಲು ಅಂದಾಜಿಸಲಾಗಿದೆ.
-------------------------....ಕೋಟ್.....
ಈ ಭಾಗದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ನಡೆಸ ಸಚಿವ ಸಂಪುಟ ಸಭೆಯಲ್ಲಿ ಹಲವಾರು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ರಾಯಚೂರಿಗೆ ಮಹಾನಗರ ಪಾಲಿಕೆ,ಕೆರೆ ಭರ್ತಿ, ಆರೋಗ್ಯ,ಪ್ರವಾಸೋದ್ಯಮ ಸೇರಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದು ಅವುಗಳ ಅನುಷ್ಠನಕ್ಕು ಕ್ರಮ ವಹಿಸಲಾಗುವುದು.-ಎನ್.ಎಸ್.ಬೋಸರಾಜು, ಸಚಿವ ಸಣ್ಣ ನೀರಾವರಿ,ವಿಜ್ಞಾನ ಮತ್ತು ತಂತ್ರಜ್ಞಾನ