ವ್ಯಸನಮುಕ್ತ ಸಮಾಜಕ್ಕೆ ಮಹಾಂತ ಶ್ರೀಗಳ ಅನನ್ಯ ಸೇವೆ: ಗುರುಸಿದ್ದರಾಜಯೋಗೇಂದ್ರ ಸ್ವಾಮೀಜಿ

| Published : May 21 2024, 12:31 AM IST

ವ್ಯಸನಮುಕ್ತ ಸಮಾಜಕ್ಕೆ ಮಹಾಂತ ಶ್ರೀಗಳ ಅನನ್ಯ ಸೇವೆ: ಗುರುಸಿದ್ದರಾಜಯೋಗೇಂದ್ರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಹುನಗುಂದ ಪಟ್ಟಣದ ಬಸವ ಮಂಟಪದಲ್ಲಿ ಭಾನುವಾರ ಶಿವಾನುಭವ ಶಿಬಿರ ಮಂಗಲ ಸಮಾರಂಭ ಹಾಗೂ ಮಹಾಂತ ಶಿವಯೋಗಿಗಳ ಆರನೇ ಶರಣೋತ್ಸವ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಹುನಗುಂದ

ನಾವು ಜೋಳ, ಭತ್ತ, ಅಕ್ಕಿ ಜೋಳಿಗೆ ಹಾಕಿಸಿಕೊಂಡಿದ್ದೇವೆ. ಅದಕ್ಕೂ ಮಿಗಿಲಾಗಿ ಕಾಣಿಕೆ, ಬೆಳ್ಳಿ, ಬಂಗಾರ ಹಾಕಿಸಿಕೊಂಡಿರಬಹುದು. ಆದರೆ, ಭಕ್ತರಲ್ಲಿನ ವ್ಯಸನಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಳ್ಳುವ ಮೂಲಕ ಸಮಾಜದ ಶುದ್ಧೀಕರಣಕ್ಕೆ ಶ್ರಮಿಸುತ್ತಿರುವವರು ಮಹಾಂತ ಶಿವಯೋಗಿಗಳು ಮಾತ್ರ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ದರಾಜಯೋಗೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಬಸವ ಮಂಟಪದಲ್ಲಿ ಭಾನುವಾರ ನಡೆದ ಶಿವಾನುಭವ ಶಿಬಿರ ಮಂಗಲ ಸಮಾರಂಭ ಹಾಗೂ ಮಹಾಂತ ಶಿವಯೋಗಿಗಳ ಆರನೇ ಶರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಹಾಂತ ಶಿವಯೋಗಿಗಳು ಶರಣ ತತ್ವ ಪ್ರಚಾರವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದರು ಎಂದರು.

ನಿಡಸೋಸಿ ಸಿದ್ಧಸಂಸ್ಥಾನಮಠದ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಇಳಕಲ್ಲ ಮಹಾಂತ ಸ್ವಾಮಿಗಳ ಪ್ರಭಾವದಿಂದ ಎಲ್ಲರೂ ಇಲ್ಲಿ ಲಿಂಗವಂತರಾಗಿದ್ದಾರೆ. ಬಸವತತ್ವವನ್ನು ಸಹಜ ಸರಳವಾಗಿ ಮನೆ ಮನೆಗೆ ರೈತ, ಮಹಿಳೆಯರಿಗೆ ಮುಟ್ಟುವ ಹಾಗೆ ಇನ್ನಷ್ಟು ಪ್ರಚಾರ ಮಾಡಬೇಕು. ವಿಜಯಮಹಾಂತೇಶ ಶಿವಯೋಗಿಗಳು ಧರ್ಮವನ್ನು ಬೆನ್ನಿಗೆ ಜೋಳಿಗೆ ಕಟ್ಟಿಕೊಂಡು, ಕುದುರೆಯ ಮೇಲೆ ಪ್ರತಿ ಹಳ್ಳಿಗಳಿಗೆ ಸಂಚರಿಸಿ ಧರ್ಮಪ್ರಸಾರ ಮಾಡಿದ್ದಾರೆ ಎಂದು ತಿಳಿಸಿದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಇಳಕಲ್ಲ ಡಾ.ಮಹಾಂತ ಸ್ವಾಮಿಗಳ ವ್ಯಸನಮುಕ್ತ ಸಮಾಜ ನಿರ್ಮಾಣದ ಕನಸನ್ನು ಗುರುಮಹಾಂತ ಸ್ವಾಮಿಗಳು ನನಸು ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ವೀರಣ್ಣ ರಾಜೂರು ಮಾತನಾಡಿದರು. ಮರೆಗುದ್ದಿ ಗುರುಮಹಾಂತ ಸ್ವಾಮೀಜಿ, ವೀರಭದಪ್ಪ ಕರಕುಂದಿ ಮಾತನಾಡಿದರು. ಶಿರೂರು ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ. ಬಿ.ಎಚ್. ಕೆರೂಡಿ, ಮಹಾಂತೇಶ ಕಡಪಟ್ಟಿ, ಗುರಣ್ಣ ಮರಟದ, ಇದ್ದರು. ಅಕ್ಕನ ಬಳಗದ ಸದಸ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ವಚನ ರೂಪಕ ಮತ್ತು ವಚನ ನೃತ್ಯ ಮಾಡಿದರು.