ಸ್ಥಳೀಯ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಮತ್ತು ಐಪಿಎಲ್ ತಂಡಗಳ ಗಮನ ಸೆಳೆಯುವುದು ಮಹಾರಾಜ ಟಿ-20 ಲೀಗ್ ಪಂದ್ಯದ ಉದ್ದೇಶ.
ಹುಬ್ಬಳ್ಳಿ:
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ವತಿಯಿಂದ ಇಲ್ಲಿನ ರಾಜ್ ನಗರದ ಕೆಎಸ್‌ಸಿಎ ಮೈದಾನದಲ್ಲಿ ಜೂ. 27ರಿಂದ ಜು. 3ರ ವರೆಗೆ ಮಹಾರಾಜಾ ಟಿ-20 ಕ್ರಿಕೆಟ್ ಲೀಗ್ ಪಂದ್ಯ ನಡೆಯಲಿವೆ ಎಂದು ಮಹಾರಾಜಾ ಟ್ರೋಫಿ ಅಧ್ಯಕ್ಷ ಎಂ.ಎಸ್. ಕೇಶವ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಮತ್ತು ಐಪಿಎಲ್ ತಂಡಗಳ ಗಮನ ಸೆಳೆಯುವುದು ಈ ಟೂರ್ನಿಯ ಮುಖ್ಯ ಉದ್ದೇಶ. ಜೂ.20ಕ್ಕೆ ಮೈಸೂರಿನಲ್ಲಿ ಟ್ರೋಫಿಯ ಲೀಗ್ ಪಂದ್ಯಗಳು ಆರಂಭಗೊಳ್ಳಲಿವೆ. ಅಲ್ಲಿ ಜೂ. 25ರ ವರೆಗೆ 12 ಪಂದ್ಯ, ಬಳಿಕ ಜೂ. 27ರಿಂದ ಜುಲೈ 3ರ ವರೆಗೆ ಹುಬ್ಬಳ್ಳಿಯ ರಾಜ್ ನಗರದಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ 12 ಪಂದ್ಯ ನಡೆಯಲಿವೆ. ಜು. 5ರಿಂದ 12ರ ವರೆಗೆ ಕೊನೆ ಹಂತದ ಪಂದ್ಯ ಹಾಗೂ ಪ್ಲೇ-ಆಫ್, ಫೈನಲ್ ಪಂದ್ಯಗಳಿಗೆ ಬೆಂಗಳೂರಿನಲ್ಲಿ ನಡೆಯಲಿವೆ. ಲೀಗ್‌ನಲ್ಲಿ ಒಟ್ಟು 6 ತಂಡಗಳು ಪಾಲ್ಗೊಳ್ಳುತ್ತಿವೆ ಎಂದರು.
16ರಿಂದ ಟಿಕೆಟ್ ಮಾರಾಟ:ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಲೀಗ್ ಪಂದ್ಯಗಳಿಗೆ ₹100 ಹಾಗೂ ₹ 200 ದರ ನಿಗದಿಗೊಳಿಸಲಾಗಿದೆ. ಪಂದ್ಯಗಳ ಟಿಕೆಟ್ ಮಾರಾಟ ಪ್ರಕ್ರಿಯೆ ಜೂ. 16ರಿಂದ ಆನ್‌ಲೈನ್‌ನಲ್ಲಿ ಮಾರಾಟ ಆರಂಭಗೊಳ್ಳಲಿದೆ. ಡಿಸ್ಟ್ರಿಕ್ಟ್ ಆ್ಯಪ್ (District by Zomato)ನಲ್ಲಿ ಟಿಕೆಟ್ ಖರೀದಿಸಬಹುದು. ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯಗಳಿಗೆ ಇನ್ನೂ ಟಿಕೆಟ್ ದರ ನಿಗದಿಗೊಳಿಸಿಲ್ಲ. ಶೀಘ್ರದಲ್ಲಿಯೇ ದರ ನಿಗದಿಗೊಳಿಸಲಾಗುವುದು ಎಂದು ಹೇಳಿದರು.
ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ ಮಾತನಾಡಿ, ಏಳು ವರ್ಷಗಳ ಬಳಿಕ ಹುಬ್ಬಳ್ಳಿಯಲ್ಲಿ ಮಹಾರಾಜಾ ಟ್ರೋಫಿ ಲೀಗ್ ಪಂದ್ಯ ನಡೆಯಲಿವೆ. ಈಗಾಗಲೇ ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ. ಹುಬ್ಬಳ್ಳಿಯಲ್ಲಿ 7 ಪಂದ್ಯಗಳು ಮಧ್ಯಾಹ್ನ, 5 ಪಂದ್ಯಗಳು ರಾತ್ರಿ ಸೇರಿ ಒಟ್ಟು 12 ಪಂದ್ಯ ನಡೆಯಲಿವೆ ಎಂದರು.ಫ್ಲಡ್‌ಲೈಟ್ ಬದಲು ಎಲ್‌ಇಡಿ: ಕ್ರೀಡಾಂಗಣದಲ್ಲಿ 4 ಫ್ಲಡ್‌ಲೈಟ್ ಕಂಬಗಳಿದ್ದು, ಅದರಲ್ಲಿ ಹಾಲೋಜನ್ ಬಲ್ಬ್ ಅಳವಡಿಸಲಾಗಿತ್ತು. ಹಗಲು-ರಾತ್ರಿ ಪಂದ್ಯ ನಡೆಯುವುದರಿಂದ ಅವುಗಳನ್ನು ಬದಲಿಸಿ ಎಲ್‌ಇಡಿ ಫಡ್‌ಲೈಟ್ ಅಳವಡಿಸಲಾಗುತ್ತಿದೆ. ಜತೆಗೆ ಬೆಂಗಳೂರು ಹಾಗೂ ಮೈಸೂರಿನಲ್ಲಿಯೂ ಎಲ್‌ಇಡಿ ಫ್ಲಡ್‌ಲೈಟ್ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿ ಫೆಬ್ರುವರಿಯಲ್ಲಿ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ತಂಡಗಳ ನಡುವೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಾವಳಿಯನ್ನು ಅತ್ಯುತ್ತಮವಾಗಿ ಆಯೋಜಿಸಲಾಗಿತ್ತು. ಇದನ್ನು ಗಮನಿಸಿ ಈ ಬಾರಿ ಹುಬ್ಬಳ್ಳಿಯಲ್ಲೂ ಮಹಾರಾಜಾ ಟ್ರೋಫಿ ಪಂದ್ಯಾವಳಿ ಆಡಿಸಲಾಗುತ್ತಿದೆ ಎಂದರು. ಕೆಎಸ್‌ಸಿಎಗೆ ಅಧ್ಯಕ್ಷನಾಗಿ ಅಧಿಕಾರ ವಹಿಸಿದ 7 ತಿಂಗಳಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹಲವು ರಚನಾತ್ಮಕ ಚಟವಟಿಕೆ ಆಯೋಜಿಸಿದ್ದೇನೆ. ನಮ್ಮ ತಂಡವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲು ಯೋಚಿಸಿದೆ ಎಂದರು.ಬಳಿಕ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ, ಮಹಾರಾಜಾ ಟ್ರೋಫಿ ಅಧ್ಯಕ್ಷ ಎಂ.ಎಸ್. ಕೇಶವ ಸೇರಿದಂತೆ ಹಲವರು ರಾಜ್ ನಗರದ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ಮಹಾರಾಜಾ ಟ್ರೋಫಿಯ ಲೀಗ್ ಪಂದ್ಯಾವಳಿ ಆಯೋಜನೆಯ ಸಿದ್ಧತಾ ಕಾರ್ಯ ಪರಿಶೀಲಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾರಾಜಾ ಟ್ರೋಫಿ ಆಡಳಿತ ಮಂಡಳಿ ಸದಸ್ಯ ಎ.ವಿ. ಶಶಿಧರ, ಕೆಎಸ್‌ಸಿಎ ಧಾರವಾಡ ವಲಯದ ಅಧ್ಯಕ್ಷ ಅಲ್ತಾಫ ಕಿತ್ತೂರ, ವಲಯ ಸಂಚಾಲಕ ವೀರಣ್ಣ ಸವಡಿ, ವಿಜಯ ವೈದ್ಯ ಸೇರಿದಂತೆ ಹಲವರಿದ್ದರು.