ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸಮಾನತೆಯನ್ನು ಸಾಧಿಸಿದಾಗ ಡಾ.ಬಿ.ಆರ್. ಅಂಬೇಡ್ಕರ್ ಕನಸು ನನಸಾಗಲು ಸಾಧ್ಯ ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್. ಮನೋಹರನ್ ತಿಳಿಸಿದರು.ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಅವರ ಬದುಕೇ ಒಂದು ಹೋರಾಟ. ಅವರು ಸಾರಿದ ಸಮಾನತೆಯ ಮಂತ್ರವನ್ನು ನಾವು ಸಾಧಿಸಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.
ದಶಕಗಳೇ ಕಳೆದರೂ ಮನುಷ್ಯರು ಧರ್ಮ ಮತ್ತು ಜಾತಿಯಿಂದ ಮುಕ್ತವಾಗಿಲ್ಲ. ಎಲ್ಲಾ ರೀತಿಯ ತಾರತಮ್ಯಗಳಿಂದ ದೂರಾಗಿ ಸಮಾನತೆಯನ್ನು ಸಾಧಿಸಿದಾಗ ಡಾ. ಅಂಬೇಡ್ಕರ್ ಅವರ ಕನಸು ನನಸಾಗಲು ಸಾಧ್ಯ ಎಂದ ಅವರು, ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸದ ವ್ಯಕ್ತಿಗಳು ಹಕ್ಕುಗಳಿಗಾಗಿ ಹೋರಾಡುವುದರಲ್ಲಿ ಅರ್ಥವಿಲ್ಲ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ. ವಸಂತಕುಮಾರ್ ಮಾತನಾಡಿ, ಡಾ. ಅಂಬೇಡ್ಕರ್ ಅವರ ಬದುಕು ಸಮಾಜಕ್ಕೆ ಸೇತುವೆಯಾಗಿತ್ತು. ಅವರು ಹೊರತಂದ 4 ಪತ್ರಿಕೆಗಳೂ ಅವರ ಚಿಂತನೆಗಳಿಗೆ, ಆಶಯಗಳಿಗೆ ಕನ್ನಡಿಯಾಗಿದ್ದವು. ದ್ವೇಷ ಮತ್ತು ವಿಷದ ಲವಲವೇಶವೂ ಇಲ್ಲದ ಚೇತನ ಡಾ. ಅಂಬೇಡ್ಕರ್ ಅವರ ಎಲ್ಲಾ ಬರಹಗಳೂ ಸತ್ಯದ ಹುಡುಕಾಟದ ಪ್ರಯತ್ನವಾಗಿತ್ತು ಎಂದು ಹೇಳಿದರು.
ಡಾ. ಅಂಬೇಡ್ಕರ್ ಅವರು ದ್ವೇಷಿಸಿದ್ದು ಜಾತೀಯತೆ, ಅಸ್ಪೃಶ್ಯತೆ ಮತ್ತು ಅಸಮಾನತೆಯನ್ನು ಮಾತ್ರ. ನೈತಿಕತೆಯೇ ದೇವರು ಎಂದ ಮಹಾನ್ ವ್ಯಕ್ತಿ ಅಂಬೇಡ್ಕರ್ ಅವರು, ಹೊಸ ಕಾಲದ ಬುದ್ಧ, ಹೊಸ ಕಾಲದ ಪ್ರಜ್ಞೆ ಎಂದು ಅವರು ಬಣ್ಣಿಸಿದರು.ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕಿ ನಾಗರತ್ನಮ್ಮ ಅವರು ಅಂಬೇಡ್ಕರ್ ಕುರಿತು ಪ್ರಾರ್ಥನಾ ಗೀತೆ ಹಾಡಿದರು.
ವಿದ್ಯಾರ್ಥಿನಿಯರಾದ ಸಿಂಚನಾ, ರಕ್ಷಿತಾ ಮತ್ತು ಚೈತನ್ಯಾ ಅಂಬೇಡ್ಕರ್ ಅವರ ಬದುಕು ಮತ್ತು ವಿಚಾರಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಸಾಂಸ್ಕೃತಿಕ ವೇದಿಕೆಯ ಅಧ್ಯಾಪಕ ಕಾರ್ಯದರ್ಶಿ ಎಂ. ನಂಜುಂಡಯ್ಯ, ಅಧ್ಯಾಪಕ ಖಜಾಂಚಿ ಅಶ್ವಿನಿ ಇದ್ದರು. ಜೇನುಶ್ರೀ ನಿರೂಪಿಸಿದರು. ಅನುಷಾ ವಂದಿಸಿದರು.