ಕನ್ನಡಪ್ರಭ ವಾರ್ತೆ ಮೇಲುಕೋಟೆ

ಸಮಾನತೆಯ ಹರಿಕಾರ ರಾಮಾನುಜಾಚಾರ್ಯರ 1009ನೇ ತಿರುನಕ್ಷತ್ರ ಮಹೋತ್ಸವ ಅಂಗವಾಗಿ ಮಂಗಳವಾರ ಮಹಾ ರಥೋತ್ಸವ ವೈಭವದಿಂದ ನೆರವೇರಿತು.

ಬೆಳಗ್ಗೆ 9 ಗಂಟೆಗೆ ಯಾತ್ರಾದಾನ, ರಥಪೂಜೆ ಆದನಂತರ ವಜ್ರಖಚಿತ ಗೋವಿಂದರಾಜಮುಡಿ ಧರಿಸಿದ ರಾಮಾನುಜರ ಉತ್ಸವಕ್ಕೆ ಚಾಲನೆ ನೀಡಲಾಯಿತು. ಚೆಲುವನಾರಾಯಣಸ್ವಾಮಿಯ ಮಾಲೆ ಮರ್ಯಾದೆಯಾದ ನಂತರ ಹೊರಪ್ರಾಕಾರ ಪ್ರದಕ್ಷಣೆಯೊಂದಿಗೆ ರಾಮಾನುಚಾರ್ಯರ ಉತ್ಸವ 10.30ರ ವೇಳೆಗೆ ರಥಮಂಟಪ ತಲುಪಿತು.

ಅಲ್ಲಿ ಮಹೂರ್ತ ಪಠಣೆಯ ನಂತರ ರಥಾರೋಹಣ ಕೈಗೊಳ್ಳಲಾಯಿತು. ವಿಶೇಷ ಪಾರಾಯಣದ ನಂತರ ರಾಮಾನಜರ ರಥೋತ್ಸವಕ್ಕೆ 12 ಗಂಟೆಗೆ ಚಾಲನೆ ನೀಡಲಾಯಿತು. ಭಕ್ತರು ರಾಮಾನುಜ ಯತಿರಾಜ ಎಂಬ ಜಯಘೋಷದೊಂದಿಗೆ ಮಹಾ ರಥವನ್ನು ಸಂಭ್ರಮದಿಂದ ಎಳೆದು ಭಕ್ತಿಯ ಭಾವ ಅನುಭವಿಸಿದರು.

ಮಹಾರಥ ನಾಲ್ಕೂ ಉತ್ಸವ ಬೀದಿಗಳಲ್ಲಿ ವೈಭವಯುತವಾಗಿ ಸಂಚರಿಸಿ ಮಧ್ಯಾಹ್ನ 1.15ರ ವೇಳೆಗೆ ದೇವಾಲಯದ ಮುಂಭಾಗ ಬಂದು ನಿಂತಿತು. ಈ ವೇಳೆ ದೇವಾಲಯದಿಂದ ಹಾಗೂ ಯತಿರಾಜದಾಸರ್ ಗುರುಪೀಠದಿಂದ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಲಾಯಿತು.


ರಾಮಾನುಜರ ಮಹಾರಥಕ್ಕೆ ದೇವಾಲಯದ ರಾಜಗೋಪುರದ ಬಳಿ ಪೂಜೆ ಸಲ್ಲಿಸಿದ ನಂತರ ಯತಿರಾಜದಾಸರ್ ಗುರುಪೀಠದ ವತಿಯಿಂದ ಭಕ್ತರಿಗೆ ಮಜ್ಜಿಗೆ, ಜ್ಯೂಸ್ ವಿತರಿಸಲಾಯಿತು. ದೇವಾಲಯದ ಮುಂಭಾಗ ಪೂಜೆ ಮುಗಿದ ನಂತರ ವಾನಮಾಮಲೈ ಬೀದಿ ರಥದ ಬೀದಿಯಲ್ಲಿ ಸಾಗಿದ ರಾಮಾನುಜಾಚಾರ್ಯರ ಮಹಾರಥ ಸಂಜೆ 3 ಗಂಟೆಯವೇಳೆಗೆ ನೆಲೆ ನಿಂತಿತು.

ರಾಮಾನುಜರ ಸನ್ನಿಧಿಯ ಅರ್ಚಕರಾದ ವಿದ್ವಾನ್ ಭಾ.ವಂ ಆನಂದಾಳ್ವಾರ್ ಪರಶ್ರಮದಿಂದಾಗಿ ವೈಭವಯುತವಾಗಿ 1009 ನೇ ತಿರುನಕ್ಷತ್ರ ಮಹೋತ್ಸವದ 9 ದಿನಗಳ ಕಾರ್ಯಕ್ರಮ ಹಾಗೂ ರಥೋತ್ಸವ ವೈಭವದಿಂದ ನಡೆಯಿತು.

ದೇವಾಲಯದ ಇಒ ಶೀಲಾ ಸೇರಿದಂತೆ ಸಾವಿರಾರು ಭಕ್ತರು ರಥಾರೂಢರಾದ ಆಚಾರ್ಯರ ದರ್ಶನ ಪಡೆದರು. ಮೇಲುಕೋಟೆ ಎಸ್.ಐ.ಪ್ರಮೋದ್ ನೇತೃತ್ವದಲ್ಲಿ ಪೊಲೀಸರು ರಥೋತ್ಸವಕ್ಕೆ ಭದ್ರತೆ ನೀಡಿದ್ದರು. ರಥೋತ್ಸವದ ವೇಳೆ ವಿವಿಧ ಶ್ರೀವೈಷ್ಣವರು ತಮ್ಮ ಮನೆ ಬಳಿ ರಥಬಂದ ವೇಳೆ ತೇರೆಳೆಯುತ್ತಿದ್ದ ಭಕ್ತರಿಗೆ ನೀರು, ಮಜ್ಜಿಗೆ ಪಾನಕಗಳನ್ನು ನೀಡಿದರು.

ರಾಮಾನುಜರ ಐತಿಹಾಸಿಕ ಮಹತ್ವದ ಬಿಕ್ಷಾ ಕೈಂಕರ್ಯವನ್ನು ರಥೋತ್ಸವದ ರಾತ್ರಿ ಯತಿರಾಜದಾಸರ್ ಗುರು ಪರಂಪರೆಯ ಸ್ಥಾನಾಚಾರ್ಯ ಶ್ರೀನಿವಾಸನರಸಿಂನ್, ಸ್ಥಾನೀಕಂ ಸಂತಾನರಾಮನ್ ಮತ್ತು ಪ್ರೊ.ಶಲ್ವಪ್ಪಿಳ್ಳೆ ಅಯ್ಯಂಗಾರ್ ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.

ರಾಮಾನುರಿಗೆ ಮಹಾಭಿಷೇಕ ಚೆಲುವನಿಗೆ ದಶಾವತಾರ ಉತ್ಸವ:

ರಾಮಾನುಜಾಚಾರ್ಯರಿಗೆ ಏ.22 ರಂದು 1009೯ನೇ ತಿರುನಕ್ಷತ್ರ ಮಹೋತ್ಸವದ ವೇಳೆ ದ್ವಾದಶಾರಾಧನೆಯೊಂದಿಗೆ ಮಹಾಭಿಷೇಕ ಬುಧವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಕಲ್ಯಾಣಿಯಿಂದ ಅಭಿಷೇಕದ ತೀರ್ಥ ತಂದು ಸ್ನಪನಪೂರ್ವಕವಾಗಿ ಮಹಾಭಿಷೇಕ ನೆರವೇರಿಸಲಾಗುತ್ತದೆ. ತಿರುನಕ್ಷತ್ರದ ಮಹಾಭಿಷೇಕದಂದು ಸಹಸ್ರಾರು ಶ್ರೀವೈಷ್ಣವ ಭಕ್ತರು ಭಾಗವಹಿಸಲಿದ್ದಾರೆ. ನಂತರ ಶಾತ್ತೊಮೊರೈ ಹಾಗೂ ಸಂಜೆ ಶ್ರೀಗಂದದ ಅಲಂಕಾರದಲ್ಲಿ ಬೆಳ್ಳಿಯಪಲ್ಲಕ್ಕಿ ಉತ್ಸವ ರಾತ್ರಿ 10 ಗಂಟೆ ನಂತರ ಚೆಲುವನಾರಾಯಣಸ್ವಾಮಿಯ ದಶಾವತಾರ ಉತ್ಸವ ನಡೆಯಲಿದೆ.

ಕಳಚಿ ಬಿದ್ದ ಮರದ ವಿಗ್ರಹ: ತಪ್ಪಿದ ಅನಾಹುತ

ಮೇಲುಕೋಟೆ:

ರಾಮಾನುಜರ ರಥೋತ್ಸವದ ವೇಳೆ ಅಧೃಷ್ಟವಶಾತ್ ಭಾರೀ ಅಪಾಯ ತಪ್ಪಿದ ಘಟನೆ ನಡೆಯಿತು.

ದೇವಾಲಯದ ವಂಶಪಾರಂಪರ್ಯ ಬಂಡಿಕಾರ ಬಲರಾಮೇಗೌಡ ಮಹಾರಥಕ್ಕೆ ಎಡಭಾಗದ ಚಕ್ರಕ್ಕೆ ಗೊದಮಕೊಡುವ ಸೇವೆ ಮಾಡುತ್ತಿದ್ದರು. ಮಹಾರಥ ಮಾರಿಗುಡಿಯ ಬಳಿಗೆ ಬಂದಾದ ರಥಕ್ಕೆ ಅಳವಡಿಸಿದ್ದ ಸಾರಥಿಯ ಮರದ ವಿಗ್ರಹ ಸುಮಾರು 15 ಎತ್ತರದಿಂದ ಕಳಚಿಕೊಂಡು ಬಲರಾಮೇಗೌಡ ಕಾಲಿನ ಪಕ್ಕದಲ್ಲೇ ಬಿತ್ತು. ಅಂದಾಜು 30 ಕೆ.ಜಿಗೂ ಹೆಚ್ಚು ತೂಕವಿದ್ದು ಸಾರಥಿಯ ವಿಗ್ರಹ ಬಂಡೀಕಾರರ ತಲೆ ಮೇಲೆ ಬಿದ್ದಿದ್ದರೆ ಭಾರೀ ಅನಾಹುತವೇ ನಡೆದು ಹೋಗುತ್ತಿತ್ತು.

ಚೆಲುವನಾರಾಯಣಸ್ವಾಮಿ, ರಾಮಾನುಜರ ಅನುಗ್ರಹದಿಂದ ಬಂಡೀಕಾರರಿಗೆ ತೊಂದರೆಯಾಗದೆ ಮಹಾರಥೋತ್ಸವ ಮುಂದುವರೆದಿದೆ ಎಂದು ದೇವಾಲಯದ ಶ್ರೀಪಾದದವರು ಮತ್ತು ಬಂಡೀಕಾರರು ಮಾತನಾಡಿಕೊಂಡಿದ್ದು ನಿಜವೆನಿಸಿತ್ತು.