ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ, ವಾಲ್ಮೀಕಿ ಶಾಖಾಮಠ ಸ್ಥಾಪನೆ

| Published : Oct 08 2025, 01:01 AM IST

ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ, ವಾಲ್ಮೀಕಿ ಶಾಖಾಮಠ ಸ್ಥಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯನ್ನು ನಿರ್ಮಿಸಿರುವ ಅರುಣ ಯೋಗಿರಾಜ್ ಅವರ ಕೈಯಿಂದಲೇ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯನ್ನು ಕೆತ್ತಿಸಲಾಗುತ್ತಿದೆ. ₹1.10 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಪುತ್ಥಳಿಯನ್ನು ಎಸ್ಪಿ ವೃತ್ತದಲ್ಲಿ ಬೃಹತ್ ಕಾರ್ಯಕ್ರಮದ ಮೂಲಕ ಪ್ರತಿಷ್ಠಾಪಿಸಲಾಗುವುದು.

ಬಳ್ಳಾರಿ: ನಗರದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪನೆ ಹಾಗೂ ಮಹರ್ಷಿ ವಾಲ್ಮೀಕಿ ಶಾಖಾಮಠ ಸ್ಥಾಪನೆಗೆ ಎರಡು ಎಕರೆ ಜಮೀನು ನೀಡಲಾಗುವುದು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಭರವಸೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ನಲ್ಲಚೇರುವು ಪ್ರದೇಶದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯನ್ನು ನಿರ್ಮಿಸಿರುವ ಅರುಣ ಯೋಗಿರಾಜ್ ಅವರ ಕೈಯಿಂದಲೇ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯನ್ನು ಕೆತ್ತಿಸಲಾಗುತ್ತಿದೆ. ₹1.10 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಪುತ್ಥಳಿಯನ್ನು ಎಸ್ಪಿ ವೃತ್ತದಲ್ಲಿ ಬೃಹತ್ ಕಾರ್ಯಕ್ರಮದ ಮೂಲಕ ಪ್ರತಿಷ್ಠಾಪಿಸಲಾಗುವುದು. ಅಷ್ಟರೊಳಗೆ ಶಾಸಕ ನಾಗೇಂದ್ರ ಅವರು ಮಂತ್ರಿಯಾಗಲಿದ್ದು, ಅವರ ಕೈಯಿಂದಲೇ ಉದ್ಘಾಟಿಸುವುದಾಗಿ ತಿಳಿಸಿದರು.

ಹರಿಹರದ ವಾಲ್ಮೀಕಿ ಪೀಠದ ಶಾಖಾಮಠವನ್ನು ಬಳ್ಳಾರಿಯಲ್ಲಿ ಸ್ಥಾಪಸಲಾಗುವುದು. ಈ ಸಂಬಂಧ ವಾಲ್ಮೀಕಿ ಪೀಠದ ಶ್ರೀಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ಶಾಖಾ ಮಠ ಸ್ಥಾಪನೆಗೆ ನನ್ನಿಂದ ಎರಡು ಎಕರೆ ಜಮೀನು ದೇಣಿಗೆಯಾಗಿ ನೀಡಲು ಸಿದ್ಧನಿದ್ದೇನೆ. ಶ್ರೀಗಳು ಸಮ್ಮತಿ ಸೂಚಿಸಿದ ಮರುದಿನವೇ ಎರಡು ಎಕರೆ ಜಮೀನು ನೀಡಲು ನಾನು ಸಿದ್ಧನಿದ್ದೇನೆ. ವಾಲ್ಮೀಕಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಬಳ್ಳಾರಿಯಲ್ಲಿ ಶಾಖಾ ಮಠ ಸ್ಥಾಪಿಸುವುದರಿಂದ ಈ ಭಾಗದ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚು ಪೂರಕವಾಗಲಿದೆ ಎಂದರು.

ಡಾ. ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಹಾಗೂ ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ವಾಲ್ಮೀಕಿ ಅವರು ರಚಿಸಿದ ಮಹಾಕಾವ್ಯ ರಾಮಾಯಣ ಸರ್ವಕಾಲದ ಶ್ರೇಷ್ಠ ಗ್ರಂಥವಾಗಿದೆ. ಮಹಾಕಾವ್ಯದಲ್ಲಿನ ಬದುಕಿನ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.

ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್‌ ಮಾತನಾಡಿದರು. ಪ್ರಾಧ್ಯಾಪಕ ಡಾ. ವೀರಭದ್ರಪ್ಪ ತಂಬ್ರಳ್ಳಿ ಅವರು ಮಹರ್ಷಿ ವಾಲ್ಮೀಕಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಎಸ್ಪಿ ಡಾ. ಶೋಭಾರಾಣಿ, ಜಿಪಂ ಸಿಇಒ ಮಹಮ್ಮದ್ ಹಾರಿಸ್ ಸುಮೇರ್, ಬಳ್ಳಾರಿ ವಲಯ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್. ಬಸವರಾಜ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಉಪವಿಭಾಗಾಧಿಕಾರಿ ಪಿ. ಪ್ರಮೋದ್, ಪಾಲಿಕೆಯ ಆಯುಕ್ತ ಪಿ.ಎಸ್. ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ವಾಲ್ಮೀಕಿ ಸಮಾಜದ ಪ್ರಮುಖರಾದ ಜನಾರ್ದನ ನಾಯಕ, ಸತ್ಯನಾರಾಯಣ (ಸತ್ಯಪ್ಪ), ಪಿ. ಜಯರಾಮ್, ತಿಮ್ಮಪ್ಪ ಜೋಳದರಾಶಿ, ಮೋಕಾ ಮುದಿ ಮಲ್ಲಯ್ಯ, ವಿ.ಕೆ. ಬಸಪ್ಪ, ಎನ್.ಕೆ. ಸದಾಶಿವಪ್ಪ ಸೇರಿದಂತೆ ಹಲವರಿದ್ದರು.

ನಾಗೇಂದ್ರ ಮಂತ್ರಿಯಾಗಲು ಯಾವುದೇ ತ್ಯಾಗಕ್ಕೂ ಸಿದ್ಧ: ಶಾಸಕ ನಾಗೇಂದ್ರ ಅವರು ಮತ್ತೆ ಮಂತ್ರಿಯಾಗಲಿದ್ದಾರೆ. ಅವರು ಸಚಿವರಾಗಿಯೇ ಬಳ್ಳಾರಿಗೆ ಬರಲಿದ್ದಾರೆ. ಅವರು ಮಂತ್ರಿಯಾಗಲು ನಾನು ಯಾವುದೇ ತ್ಯಾಗಕ್ಕೆ ಸಿದ್ಧನಿದ್ದೇನೆ ಎಂದು ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.

ಕೆಲವರ ಷಡ್ಯಂತ್ರದಿಂದಾಗಿಯೇ ನಾಗೇಂದ್ರ ಅವರು ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಅವರು ಯಾವುದೇ ತಪ್ಪು ಮಾಡಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಶೀಘ್ರದಲ್ಲಿಯೇ ಅವರು ಸಚಿವರಾಗಿ ಬಳ್ಳಾರಿಗೆ ಬರಲಿದ್ದಾರೆ. ಅವರ ಬರುವಿಕೆಗಾಗಿ ನಾವು ಕಾಯುತ್ತಿದ್ದೇವೆ. ಶುಭ ಗಳಿಗೆಯಲ್ಲಿ ಅವರು ಮತ್ತೆ ಮಂತ್ರಿಯಾಗುವ ಯೋಗ ಕೂಡಿ ಬಂದಿದ್ದು, ಅದ್ಧೂರಿಯಾಗಿ ಅವರನ್ನು ಬಳ್ಳಾರಿಗೆ ಸ್ವಾಗತಿಕೊಳ್ಳುತ್ತೇವೆ. ಅವರ ಅಧ್ಯಕ್ಷತೆಯಲ್ಲಿಯೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಭೆ ನಡೆಸುತ್ತೇವೆ. ನಾಗೇಂದ್ರ ಬಿಟ್ಟು ಬೇರೆ ಯಾರನ್ನೂ ನಾವು ಸಚಿವರನ್ನಾಗಿ ಸ್ವೀಕರಿಸಲು ಸಾಧ್ಯವಿಲ್ಲ. ನಮ್ಮ ಕುಟುಂಬದ ರಾಜಕೀಯ ಬೆಳವಣಿಗೆಗೆ ವಾಲ್ಮೀಕಿ ಸಮುದಾಯ ಬಹುದೊಡ್ಡ ತ್ಯಾಗ ಮಾಡಿದೆ. ಅವರ ತ್ಯಾಗ ಹಾಗೂ ಸ್ನೇಹವನ್ನು ನಮ್ಮ ಕುಟುಂಬ ಎಂದೂ ಮರೆಯುವುದಿಲ್ಲ ಎಂದು ಸ್ಮರಿಸಿದರು.