ಮಹರ್ಷಿ ವಾಲ್ಮೀಕಿ ವಿವಿ ಎಡವಟ್ಟು: ಪರೀಕ್ಷೆ ದಿಢೀರ್‌ ರದ್ದು

| Published : Mar 24 2025, 12:38 AM IST

ಸಾರಾಂಶ

Maharishi Valmiki University stumbles: Exams abruptly canceled

-ಕಂಗಾಲಾದ ವಿದ್ಯಾರ್ಥಿಗಳು, ಪಾಲಕರು ವಿಶ್ವವಿದ್ಯಾಲಯದ ವಿರುದ್ಧ ಆಕ್ರೋಶ

-----

ಕನ್ನಡಪ್ರಭ ವಾರ್ತೆ ರಾಯಚೂರು

ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ (ಎಎಸ್‌ಎಂವಿಯುಆರ್‌) ಎಡವಟ್ಟಿನಿಂದಾಗಿ ರವಿವಾರ ನಡೆಯಬೇಕಾಗಿದ್ದ ಪದವಿ ಪರೀಕ್ಷೆಗಳು ದಿಢೀರ್ ರದ್ದುಪಡಿಸಿ ಮುಂದೂಡಿದ್ದರಿಂದ ಕಂಗಾಲಾದ ವಿದ್ಯಾರ್ಥಿಗಳು, ಪಾಲಕರು ವಿಶ್ವವಿದ್ಯಾಲಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎಎಸ್‌ಎಂವಿಯುಆರ್‌ ದಿಂದ ಸ್ನಾತಕೋತ್ತರ ಹಾಗೂ ಪ್ರಥಮ ಸೆಮಿಸ್ಟರ್‌ ನ ಪದವಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಒಂದು (ಕಳೆದ ಮಾ.15 ರಂದು ನಿಗದಿಪಡಿಸಿದ್ದ) ಪರೀಕ್ಷೆಯನ್ನು ರದ್ದುಪಡಿಸಿರುವ ವಿವಿ ಇದೀಗ ಮತ್ತೊಮ್ಮೆ ಪರೀಕ್ಷೆ ರದ್ದುಪಡಿಸಿ ಮುಂದೂಡಿದೆ.

ಪ್ರಶ್ನೆ ಪತ್ರಿಕೆ ಕೋಡ್‌ ಬದಲು: ವಿವಿಧ ಪದವಿ ಕೋರ್ಸ್‌ಗಳಿಗೆ ರವಿವಾರ ಬೆಳಗ್ಗೆ ಮತ್ತು ಮಧ್ಯಾಹ್ನ ಪರೀಕ್ಷೆಗಳನ್ನು ನಿಗದಿಪಡಿಸಲಾಗಿತ್ತು. ಆದರೆ, ಬೆಳಗ್ಗೆ ನಡೆದ ಪರೀಕ್ಷೆಗಳಿಗೆ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಕೋಡ್‌ ವ್ಯಾತ್ಯಾಸವಾಗಿದೆ.

ಇದರಿಂದಾಗಿ ವಿವಿ ವ್ಯಾಪ್ತಿಯ ರಾಯಚೂರು-ಯಾದಗಿರಿ ಜಿಲ್ಲೆಗಳಲ್ಲಿನ ಪದವಿ ಪರೀಕ್ಷೆಗಳನ್ನು ಏಕಾಏಕಿ ರದ್ದುಪಡಿಸುವಂತಾಗಿದ್ದು, ಮುಂದೂಡಿಕೆ ಮಾಡಿರುವ ಪರೀಕ್ಷೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ವಿವಿ ಕಲಸಚಿವರ ನಿರ್ದೇಶನದ ಮೇರೆಗೆ ಮೌಲ್ಯಮಾಪನ ಕುಲಸಚಿವರು ಆದೇಶಿಸಿದ್ದಾರೆ.

....ಬಾಕ್ಸ್......

ಆಶ್ರೀಮವಾ ವಿರುದ್ಧ ಕೆಂಡ

ರವಿವಾರದ ಮಧ್ಯಾಹ್ನದ ಪರೀಕ್ಷೆಗಳನ್ನು ಬರೆಯುವುದಕ್ಕಾಗಿ ದೂರದ ಊರುಗಳಿಂದ ವಿದ್ಯಾರ್ಥಿಗಳು ಆಯಾ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದರು. ಇಷ್ಟು ದಿನ ಕಷ್ಟಪಟ್ಟು ಓದಿ, ಪರೀಕ್ಷಾ ತಯಾರಿ ಮಾಡಿಕೊಂಡು ಬಿರುಬಿಸಿಲಿನಲ್ಲಿ ಸಾರಿಗೆ, ಊಟದ ಖರ್ಚು ಮಾಡಿಕೊಂಡು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಿರುವ ಸುದ್ದಿ ತಿಳಿದು ತೀವ್ರ ಬೇಸರಗೊಂಡರು. ವಿವಿಯ ಎಡವಟ್ಟಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರೀಕ್ಷೆಗಳನ್ನು ಸರಿಯಾಗಿ ನಡೆಸದೇ ಪದೇ ಪದೆ ವಿದ್ಯಾರ್ಥಿಗಳನ್ನು ಸಮಸ್ಯೆಗೆ ಸಿಲುಕಿಸುತ್ತಿರುವ ವಿವಿ ಬೆಜವಾಬ್ದಾರಿತನವನ್ನು ಬಿಡಬೇಕು. ಕಳೆದ ವರ್ಷದ ಪರೀಕ್ಷೆಗಳ ಅಂಕ ಪಟ್ಟಿಯನ್ನು ನೀಡಿಲ್ಲ, ಪದವಿಗಳ ಪ್ರವೇಶ ಪ್ರಕ್ರಿಯೇಯಲ್ಲಿಯೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಇದೀಗ ಪರೀಕ್ಷೆಗಳನ್ನು ಸಹ ಸರಿಯಾಗಿ ನಡೆಸುತ್ತಿಲ್ಲ ಎಂದು ಎಎಸ್‌ಎಂವಿಯುಆರ್‌ ವಿರುದ್ಧ ವಿದ್ಯಾರ್ಥಿಗಳು, ಪಾಲಕರು-ಪೋಷಕರು ಕೆಂಡ ಕಾರುತ್ತಿದ್ದಾರೆ.

-------------------

23ಕೆಪಿಆರ್‌ಸಿಆರ್ 03: ಎಎಸ್‌ಎಂವಿಯುಆರ್‌ ಲೋಗೋ