ಬಾಗಲಕೋಟೆ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನುಸಚಿವ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಮಾಯಣ ಮೂಲಕ ಶ್ರೀರಾಮನ ಆದರ್ಶ ಬದುಕನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ ಅವರು ಸತ್ಯ, ನ್ಯಾಯ, ಸಹೋದರತ್ವ, ತ್ಯಾಗ ಹಾಗೂ ಮಾನವೀಯತೆಯ ಮಹತ್ವ ಸಾರಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.ನವನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದ ಅವರು, ವಾಲ್ಮೀಕಿಯವರು ರಚಿಸಿದ ರಾಮಾಯಣ ಕೇವಲ ಒಂದು ಮಹಾಕಾವ್ಯವಲ್ಲ. ಮಾನವೀಯ ಮೌಲ್ಯಗಳು, ಸತ್ಯ, ಧರ್ಮ, ಕರ್ತವ್ಯ, ತ್ಯಾಗ ಹಾಗೂ ಸಾಮಾಜಿಕ ಬದುಕಿನ ಆದರ್ಶಗಳನ್ನು ಸಾರುವ ವಿಶ್ವದ ಅಮೂಲ್ಯ ಗ್ರಂಥವಾಗಿದೆ ಎಂದರು.ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಸಂದೇಶಗಳು ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರ ಸಾಹಿತ್ಯ ಹಾಗೂ ಚಿಂತನೆಗಳು ಇಡೀ ಮಾನವಕುಲಕ್ಕೆ ಸೇರಿದವು. ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಡೆಯುವುದು, ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವುದು ಹಾಗೂ ದುರ್ಬಲರ ನೆರವಿಗೆ ನಿಲ್ಲುವುದು ವಾಲ್ಮೀಕಿ ಅವರ ಬದುಕಿನ ಪ್ರಮುಖ ಸಂದೇಶವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟೆ ಶಾಸಕ ಉಮೇಶ ಮೇಟಿ ಮಾತನಾಡಿದರು. ನಿವೃತ್ತ ನ್ಯಾಯಾಧೀಶ ಡಿ.ವೈ.ಬಸಾಪೂರ ಉಪನ್ಯಾಸ ನೀಡಿದರು.ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ, ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷ ಅನೀಲ ದಡ್ಡಿ, ಬುಡಾದ ಅಧ್ಯಕ್ಷ ಅಬ್ದುಲ್ರಜಾಕ್ ಬೇನೂರ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಎಸ್.ಎಂ.ರಾಂಪೂರ, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಒ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸದಾಶಿವ ಬಡಿಗೇರ, ಸಮುದಾಯದ ಮುಖಂಡರಾದ ದ್ಯಾಮಣ್ಣ ಗಾಳಿ, ರಾಜು ನಾಯ್ಕರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ಜರುಗಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ:ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಜಡಗಣ್ಣ ಬಾಲಣ್ಣ ಹೆಸರಿನಲ್ಲಿ ನೀಡುವ ಪುರಸ್ಕಾರವನ್ನು ಸೃಷ್ಠಿ ಆನಂದ ಕೇರಿಕಾರ್ ಅವರಿಗೆ ನೀಡಲಾಯಿತು. ಅಲ್ಲದೇ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಶ್ರದ್ದಾ ಕಟಗಿ, ಸಾನಿಕಾ ಮರೆನ್ನವರ, ಪೃಥ್ವಿ ಪೂಜಾರ, ಪಿಯುಸಿ ದ್ವಿತೀಯ ವರ್ಷದ ಕಲಾವಿಭಾಗದಲ್ಲಿ ಲಕ್ಷ್ಮೀ ದಳವಾಯಿ, ಕೃತೀಕಾ ಬಿಸನಾಳ, ಭೀಮವ್ವ ದಟ್ಟಂಡಿ, ವಾಣಿಜ್ಯ ವಿಭಾಗದಲ್ಲಿ ಹನಮವ್ವ ಕಡ್ಡೇನ್ನವರ, ಭೀಮವ್ವ ಡಿವಟಗಿ, ಸುಶ್ಮೀತಾ ಮೇದಾರ, ವಿಜ್ಞಾನ ವಿಭಾಗದಲ್ಲಿ ಪ್ರಶಾಂತ ಕಳಸದ, ಸಮರ್ಥ ಮೇದಾರ ಪ್ರಸನ್ನಕುಮಾರ ಗಾಡಗೊಳಿ ಅವರನ್ನು ಸನ್ಮಾನಿಸಲಾಯಿತು.