ಮಹರ್ಷಿ ವಾಲ್ಮೀಕಿ ತತ್ವಗಳು ಎಂದಿಗೂ ಪ್ರಸ್ತುತ: ಪ್ರಾಧ್ಯಾಪಕಿ ಡಾ. ಸುಧಾ

| Published : Oct 18 2024, 01:16 AM IST

ಮಹರ್ಷಿ ವಾಲ್ಮೀಕಿ ತತ್ವಗಳು ಎಂದಿಗೂ ಪ್ರಸ್ತುತ: ಪ್ರಾಧ್ಯಾಪಕಿ ಡಾ. ಸುಧಾ
Share this Article
  • FB
  • TW
  • Linkdin
  • Email

ಸಾರಾಂಶ

ಆದಿಕವಿ ಮಹರ್ಷಿ ವಾಲ್ಮೀಕಿ ವ್ಯಕ್ತಿತ್ವ ಹಾಗೂ ಜೀವನದ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಬಿ.ಎಸ್.ಸುಧಾ ಕರೆ ನೀಡಿದರು. ರಾಮನಗರದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಾಲ್ಮೀಕಿ ಜಯಂತಿ

ಕನ್ನಡಪ್ರಭ ವಾರ್ತೆ ರಾಮನಗರ

ಆದಿಕವಿ ಮಹರ್ಷಿ ವಾಲ್ಮೀಕಿ ವ್ಯಕ್ತಿತ್ವ ಹಾಗೂ ಜೀವನದ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಬಿ.ಎಸ್.ಸುಧಾ ಕರೆ ನೀಡಿದರು.

ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಹಿಂದೆ ಇದ್ದ ಒಬ್ಬ ವ್ಯಕ್ತಿಯ ಜಯಂತಿಯನ್ನು ನಾವು ಇಂದು ಆಚರಿಸಬೇಕಾದರೆ ಆ ವ್ಯಕ್ತಿಯ ಆದರ್ಶ ಮತ್ತು ಮೌಲ್ಯಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ ವಚನಗಳಾಗಿರಬಹುದು ಮತ್ತು ಅಂಬೇಡ್ಕರ್ ಅವರು ಹೇಳಿರುವ ಸಿದ್ಧಾಂತಗಳಾಗಿರಬಹುದು, ಇವೆಲ್ಲದರ ಮೂಲ ತತ್ವ ಶ್ರೀ ವಾಲ್ಮೀಕಿ ಅವರಲ್ಲಿ ಅಡಕವಾಗಿರುವುದನ್ನು ನಾವು ಕಾಣಬಹುದು ಎಂದರು.

ವಾಲ್ಮೀಕಿಯು ಈಗಲೂ ಪ್ರಸ್ತುತವಾಗುತ್ತಿರುವುದು ಎರಡು ಕಾರಣಗಳಿಂದ ಒಂದು ಅವರ ವ್ಯಕ್ತಿತ್ವದಿಂದ, ಮತ್ತೊಂದು ಅವರು ಕಟ್ಟಿಕೊಟ್ಟಂತಹ ರಾಮಾಯಣ ಮತ್ತು ಅದರಲ್ಲಿ ಬರುವ ರಾಮನ ವ್ಯಕ್ತಿತ್ವದಿಂದ. ನಾವು ಯಾವುದಾದರೂ ವ್ಯಕ್ತಿಯನ್ನು ಆರಾಧನೆ ಮಾಡಬೇಕಾದರೆ ಕೇವಲ ವ್ಯಕ್ತಿಯನ್ನಾಗಿ ನಾವು ಆರಾಧಿಸುವುದಿಲ್ಲ. ಬುದ್ದ, ಬಸವಣ್ಣ, ಗಾಂಧಿ, ಅಂಬೇಡ್ಕರ್ ಅವರು ವ್ಯಕ್ತಿಯಾಚೆಗೆ ಮೀರುವಂತ ವ್ಯಕ್ತಿಗಳಾಗಿ ಬೆಳೆಯಲು ಕಾರಣ ಅವರು ಸಾಮಾಜಿಕ ನ್ಯಾಯವನ್ನು ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವುದರಿಂದ ಪೂಜ್ಯನೀಯರಾಗುತ್ತಾರೆ. ಹಾಗೆಯೇ ವಾಲ್ಮೀಕಿಯು ಸಹ ಅಂತಹ ವ್ಯಕ್ತಿತ್ವಗಳಲ್ಲಿ ಮೊದಲು ಬರುತ್ತಾರೆ ಎಂದು ಹೇಳಿದರು.

ಇವರು ಕೇವಲ ಆದಿ ಕವಿಯಾಗಿ ಅಷ್ಟೇ ಸೀಮಿತವಾಗಿರಲಿಲ್ಲ, ಮಹಾನ್ ಮಾನವತಾವಾದಿ ಹಾಗೂ ಮಹಾ ಆದರ್ಶವಾದಿಯಾಗಿದ್ದರು. ಹಾಗಾಗಿಯೇ ಅವರು ಅಂದು ಬರೆದ ರಾಮಾಯಣ ಇಂದಿಗೂ ಸಹ ಉಳಿದುಕೊಂಡು ಲಕ್ಷಾಂತರ ರೂಪಾಂತರಗಳನ್ನು ಹೊಂದಿದೆ ಎಂದು ಸುಧಾ ತಿಳಿಸಿದರು.

ರಾಮನು ಕೇವಲ ಒಂದು ಸಂಸ್ಕೃತಿಯ ನಾಯಕನಾಗದೆ ಇಡೀ ಭಾರತದ ಹಾಗೂ ವಿಶ್ವದ ನಾಯಕನಾಗಿ ಉಳಿದುಕೊಂಡಿದ್ದಾನೆ. ನಾವು ವಾಲ್ಮೀಕಿ, ರಾಮ, ರಾಮಾಯಣ, ಈ ಮೂರು ವ್ಯಕ್ತಿತ್ವಗಳನ್ನು ವಿಭಿನ್ನ ರೀತಿಯಲ್ಲಿ ನೋಡಲು ಸಾಧ್ಯವಿಲ್ಲ, ಒಂದಕ್ಕೊಂದು ಬೆಸೆದುಕೊಂಡಿದೆ. ಇವರು ಕಟ್ಟಿಕೊಟ್ಟಂತಹ ಪಾತ್ರಗಳು ಹಾಗೂ ಸಾಮಾಜಿಕ ಮೌಲ್ಯಗಳು ಕೇವಲ ಒಂದು ಸಮಾಜಕ್ಕೆ ಸೀಮಿತವಾದುದಲ್ಲ, ಅದು ಹಲವು ಸಮಾಜಗಳ ಹಾಗೂ ವ್ಯಕ್ತಿತ್ವಗಳದ್ದು ಎಂದು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಮಾಜದಲ್ಲಿ ರಾಮನನ್ನು ಯಾರು ಬೇಕಾದರೂ ಆರಾಧಿಸಬಹುದು ಮತ್ತು ಒಪ್ಪಿಕೊಳ್ಳಬಹುದು ಅಥವಾ ನಿರಾಕರಿಸಲು ಬಹುದು, ಪೂಜೆ ಮಾಡಬಹುದು. ರಾಮಾಯಣದಲ್ಲಿ ಬರುವ ಪ್ರತಿಯೊಂದು ಪಾತ್ರ, ಸನ್ನಿವೇಶ ಮತ್ತು ಘಟನೆಗಳು ಒಂದೊಂದು ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ ಎಂದು ಸುಧಾ ತಿಳಿಸಿದರು.

ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಗೂ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಶ್ರೀ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹಾಗೂ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅದಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಲಾಲ್ ಎಂ.ಜಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸತೀಶ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಮುದಾಯ ಮುಖಂಡರು ಭಾಗವಹಿಸಿದ್ದರು.