ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಮಹಾಶಿವರಾತ್ರಿ ಹಬ್ಬವನ್ನು ಕಲ್ಪತರು ನಾಡು ತಿಪಟೂರು ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ನಗರದ ದೇವಾಲಯಗಳಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಇತಿಹಾಸ ಪ್ರಸಿದ್ದ ಶ್ರೀ ಕಲ್ಲೇಶ್ವರ ಸ್ವಾಮಿ, ತಿಪಟೂರು ಗ್ರಾಮದ ದೇವತೆ ಶ್ರೀ ಕೆಂಪಮ್ಮದೇವಿ, ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ, ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ, ನಗರದ ಕೆಇಬಿ ರಾಮಮಂದಿರದ ಶಿವ ದೇವಾಲಯ ಸೇರಿದಂತೆ ಇತರೆ ದೇವಸ್ಥಾನಗಳಲ್ಲಿ ಬಿಲ್ವಪತ್ರೆ, ತುಳಸಿ, ಎಕ್ಕ, ಮುತ್ತುಗದ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಅಭಿಷೇಕ ಮಾಡಲಾಯಿತು. ಭಕ್ತರು ಸಾಲು ಗಟ್ಟಿ ನಿಂತು ಶಿವನಾಮ ಜಪಿಸುತ್ತಾ ಬೇಡಿಕೆಗಳನ್ನು ಈಡೇರಿಸುವಂತೆ ವಿನಮ್ರದಿಂದ ಪ್ರಾರ್ಥಿಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು. ಭಕ್ತರು ದೇವಸ್ಥಾನಗಳಲ್ಲಿ ಪಾನಕ, ಫಲಹಾರ, ಮಜ್ಜಿಗೆ ವಿತರಣೆ ಮಾಡುತ್ತಾ ತಮ್ಮ ಹರಕೆಗಳನ್ನು ಈಡೇರಿಸಿಕೊಂಡರು. ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಮಹಾಶಿವರಾತ್ರಿ ಶಿವ ಪರಮಾತ್ಮನ ತ್ರಿಮೂರ್ತಿ ಶಿವಜಯಂತಿ, ಶಿವ ಧ್ವಜಾರೋಹಣ ಹಾಗೂ ಶಿವಲಿಂಗಳ ಜ್ಞಾನ ಕಳಸಗಳಿಂದ ಶಾಂತಿಯಾತ್ರೆ ನಡೆಯಿತು. ಶಿವರಾತ್ರಿ ನಗರದಲ್ಲದೆ ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರದ ಶ್ರೀ ಶಂಕರೇಶ್ವರ ದೇವಾಲಯ, ಬಳ್ಳೆಕಟ್ಟೆ ಶೆಟ್ಟೀಹಳ್ಳಿ ಬೆಟ್ಟದಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ನೊಣವಿನಕೆರೆಯ ಶ್ರೀ ಕಾಡಸಿದ್ದೇಶ್ವರ ದೇವಾಲಯಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿರುವ ಶಿವದೇವಸ್ಥಾನಗಳಲ್ಲಿ ವಿಶೇಷ ರುದ್ರಾಭಿಷೇಕ, ವಿಶೇಷ ಪೂಜೆ, ಅಲಂಕಾರ ಸೇರಿದಂತೆ ರಾತ್ರಿ ವೇಳೆ ಭಜನಾ ಕಾರ್ಯಕ್ರಮಗಳು, ವಿವಿಧ ಪೂಜಾ ಕೈಂಕರ್ಯಗಳು ಸಾಂಗವಾಗಿ ನಡೆದವು.