ಮಹಾಶಿವರಾತ್ರಿ: ಜಿಲ್ಲಾದ್ಯಂತ ಶಿವಾಲಯಗಳಲ್ಲಿ ‘ಶಿವ ನಾಮಸ್ಮರಣೆ’

| Published : Mar 09 2024, 01:33 AM IST

ಮಹಾಶಿವರಾತ್ರಿ: ಜಿಲ್ಲಾದ್ಯಂತ ಶಿವಾಲಯಗಳಲ್ಲಿ ‘ಶಿವ ನಾಮಸ್ಮರಣೆ’
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಶಿವರಾತ್ರಿ ಪ್ರಯುಕ್ತ ಮಂಡ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಪ್ರಾಯೋಜಕತ್ವದಲ್ಲಿ ೨೧ ಅಡಿ ಎತ್ತರದ ರುದ್ರಾಕ್ಷಿ ಶಿವಲಿಂಗ ಮತ್ತು ನಂದಿ ನಗರದ ಪ್ರಮುಖ ಆಕರ್ಷಣೆಯಾಗಿತ್ತು. ಜಿಲ್ಲೆಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ೨೧ ಅಡಿ ಎತ್ತರದ ಶಿವಲಿಂಗವು ೩.೫೦ ಲಕ್ಷ ರುದ್ರಾಕ್ಷಿ ಮಣಿಯಿಂದ ಸುತ್ತುವರಿದಿದೆ. ಜೊತೆಗೆ ಹೋಲೋಗ್ರಾಮ್ ಶಿವಲಿಂಗ ಹಾಗೂ ಸಹಸ್ರ ಶಿವಲಿಂಗಗಳ ಉಚಿತ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಜಿಲ್ಲೆಯ ಎಲ್ಲಾ ಶಿವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ರುದ್ರಾಭಿಷೇಕ, ಹೋಮ, ಜಾಗರಣೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ನಡೆದವು.

ಹಬ್ಬದ ಪ್ರಯುಕ್ತ ಭಕ್ತಾದಿಗಳು ಮುಂಜಾನೆಯಿಂದಲೇ ಶಿವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಜಾಗರಣೆ ವೃತಾಚರಣೆ ಮಾಡಿದರು. ಶಿವರಾತ್ರಿ ಅಂಗವಾಗಿ ದೇವಾಲಯಗಳಲ್ಲಿ ಹರಿಕಥೆ, ಶಿವ ಪಾರಾಯಣ, ಜಪ-ತಪಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿಯಿಡೀ ಸಂಭ್ರಮದಿಂದ ನೆರವೇರಿದವು.

ಮಂಡ್ಯದ ಅರ್ಕೇಶ್ವರನಗರದ ಶ್ರೀಅರಕೇಶ್ವರಸ್ವಾಮಿ ದೇವಸ್ಥಾನದಲ್ಲಿ ಮುಂಜಾನೆ ೪.೩೦ರಿಂದಲೇ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನಡೆದವು. ಕ್ಷೀರ, ಮೊಸರು, ಎಳನೀರು, ಗಂಧ, ಜೇನುತುಪ್ಪ, ಸಕ್ಕರೆ, ನಿಂಬೆಹಣ್ಣು, ಪಂಚಾಮೃತಾಭಿಷೇಕ, ಅರಿಶಿನ-ಕುಂಕುಮ, ಬಿಲ್ವಪತ್ರ ಅರ್ಚನೆ, ಮುಂಜಾನೆಯಿಂದ ನಾಳೆ ಮುಂಜಾನೆಯವರೆಗೆ ಐದು ಜಾವಗಳ ಪೂಜೆ ನಡೆಯಿತು. ಪ್ರತೀ ಪೂಜೆಯ ಬಳಿಕ ದೇವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿತ್ತು.

ಮುಂಜಾನೆಯಿಂದಲೇ ಭಕ್ತರ ದಂಡು ದೇವಾಲಯದತ್ತ ಹರಿದುಬಂದಿತ್ತು. ಶ್ರೀಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸಿ ತೀರ್ಥ-ಪ್ರಸಾದ ಸ್ವೀಕರಿಸಿ ಧನ್ಯತಾ ಭಾವದಿಂದ ನಡೆಯುತ್ತಿದ್ದರು. ದೇವಾಲಯದಲ್ಲಿ ರಾತ್ರಿ ಪೂರ್ತಿ ಶಿವ ಪಾರಾಯಣ, ಭಜನಾ ಕಾರ್ಯಕ್ರಮಗಳು ನಡೆದವು. ಬಳಿಕ ನಾಳೆ ಬೆಳಗ್ಗೆ ಭಕ್ತಾಗಳಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ನಗರದ ಪ್ರಮುಖ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶ್ರೀಸಕಲೇಶ್ವರಸ್ವಾಮಿ ದೇವಾಲಯದಲ್ಲೂ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಬೆಳ್ಳಿಯ ನಾಗಾಭರಣವನ್ನು ಧರಿಸಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶಂಕರನಗರದಲ್ಲಿರುವ ಶ್ರೀಮಲೈ ಮಹದೇಶ್ವರಸ್ವಾಮಿ, ಶಂಕರಮಠದ ಆದಿ ಚುಂಚನಗಿರಿ ಶಾಖಾ ಮಠದಲ್ಲಿರುವ ಶ್ರೀಗವಿಗಂಗಾಧರೇಶ್ವರ ಸ್ವಾಮಿಗೆ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಅಭಿಷೇಕ, ಪೂಜೆ, ಅಲಂಕಾರ ನಡೆಸಲಾಗಿತ್ತು. ಬೆಳಗ್ಗೆಯಿಂದಲೇ ನೂರಾರು ಭಕ್ತರು ದೇಗುಲಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು.

ನಗರದ ಸ್ವರ್ಣ ಸಂದ್ರದಲ್ಲಿರುವ ಶ್ರೀಶನೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ದೇವರಿಗೆ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ಬೆಳಗ್ಗೆಯಿಂದ ರಾತ್ರಿಯವರೆಗೆ ನಿರಂತರವಾಗಿ ದೇಗುಲಕ್ಕೆ ಆಗಮಿಸಿ ದೇವರ ದರ್ಶನಪಡೆದರು. ಚಾಮುಂಡೇಶ್ವರಿನಗರದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ದೇವಾಲಯವನ್ನು ನವೀಕರಿಸಲಾಗಿದ್ದು, ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಶ್ರೀ ತಾಂಡವೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ದೇವರಿಗೆ ರುದ್ರಾಭಿಷೇಕ ಮಾಡಿ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಂದ ೨೧ ಅಡಿ ಎತ್ತರದ ರುದ್ರಾಕ್ಷಿ ಶಿವಲಿಂಗ ದರ್ಶನ

ಮಂಡ್ಯ: ಮಹಾಶಿವರಾತ್ರಿ ಪ್ರಯುಕ್ತ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಪ್ರಾಯೋಜಕತ್ವದಲ್ಲಿ ೨೧ ಅಡಿ ಎತ್ತರದ ರುದ್ರಾಕ್ಷಿ ಶಿವಲಿಂಗ ಮತ್ತು ನಂದಿ ನಗರದ ಪ್ರಮುಖ ಆಕರ್ಷಣೆಯಾಗಿತ್ತು. ಜಿಲ್ಲೆಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ೨೧ ಅಡಿ ಎತ್ತರದ ಶಿವಲಿಂಗವು ೩.೫೦ ಲಕ್ಷ ರುದ್ರಾಕ್ಷಿ ಮಣಿಯಿಂದ ಸುತ್ತುವರಿದಿದೆ. ಜೊತೆಗೆ ಹೋಲೋಗ್ರಾಮ್ ಶಿವಲಿಂಗ ಹಾಗೂ ಸಹಸ್ರ ಶಿವಲಿಂಗಗಳ ಉಚಿತ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯಿಂದಲೇ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮದ ಜನರು ಸ್ಥಳಕ್ಕೆ ಭೇಟಿ ನೀಡಿ ಶಿವಲಿಂಗವನ್ನು ವೀಕ್ಷಿಸಿದರು. ಶಿವಲಿಂಗದ ಎದುರು ನಿಂತು ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡರು. ಗಾಜಿನ ಎದುರು ನಿಂತರೆ ಎರಡೂ ಕಡೆ ಸಹಸ್ರಲಿಂಗಗಳ ದರ್ಶನವಾಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಮತ್ತೊಂದು ತ್ರೀಡಿ ಶಿವಲಿಂಗ ಆಕರ್ಷಣೀಯವಾಗಿದೆ. ರುದ್ರಾಕ್ಷಿ ಶಿವಲಿಂಗ ಆಕರ್ಷಣೆಯ ಕೇಂದ್ರಬಿಂದುವಾಗಿ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ಮಹಾಶಿವರಾತ್ರಿಯಿಂದ ಆರಂಭವಾಗಿ ಮಾ.೧೨ರವರೆಗೂ ಪ್ರತಿದಿನ ಬೆಳಗ್ಗೆ ೭ ಗಂಟೆಯಿಂದ ರಾತ್ರಿ ೯ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಶಿವ ದೇಗುಲಗಳಲ್ಲಿ ಬಾಂಬ್ ಪತ್ತೆ ದಳದಿಂದ ಶೋಧ

ಮಂಡ್ಯ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಶಿವ ದೇಗುಲಗಳಲ್ಲಿ ಬಾಂಬ್ ಪತ್ತೆ ದಳದಿಂದ ತೀವ್ರ ಶೋಧ ನಡೆಸಲಾಯಿತು.

ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶಿವನ ದೇಗುಲಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ತಂಡಗಳಲ್ಲಿ ಬಾಂಬ್ ಪತ್ತೆ ದಳದಿಂದ ತೀವ್ರ ಶೋಧ ನಡೆಸಲಾಯಿತು. ಮಂಡ್ಯದ ಗುತ್ತಲಿನ ಶ್ರೀಅರಕೇಶ್ವರಸ್ವಾಮಿ ದೇವಸ್ಥಾನದ ಬಾಂಬ್ ಪತ್ತೆ ದಳದಿಂದ ಪರಿಶೀಲನೆ ನಡೆಸಿತು. ದೇವಸ್ಥಾನದ ಆವರಣ ಹಾಗೂ ದೇವಸ್ಥಾನದ ಒಳಗಡೆ ತಪಾಸಣೆ ಮಾಡಲಾಯಿತು.

ಆದಿಚುಂಚನಗಿರಿಯ ಶ್ರೀಕಾಲಭೈರವೇಶ್ವರ, ಹನುಮಂತನಗರದ ಶ್ರೀಆತ್ಮಲಿಂಗೇಶ್ವರ, ಮದ್ದೂರಿನ ಶ್ರೀವೈದ್ಯನಾಥೇಶ್ವರ, ಮಳವಳ್ಳಿಯ ಶ್ರೀಮತ್ತಿತಾಳೇಶ್ವರ, ಮಂಡ್ಯ ಕೊಪ್ಪಲು ಕಾವೇರಿ ಶ್ರೀಬೋರೇದೇವರು, ಹೊಳಲು ಗ್ರಾಮದ ಶ್ರೀತಾಂಡವೇಶ್ವರ, ಕೆರಗೋಡಿನ ಶ್ರೀಪಂಚಲಿಂಗೇಶ್ವರ ದೇಗುಲಗಳಲ್ಲಿ ಬಾಂಬ್ ಪತ್ತೆ ದಳದಿಂದ ಪರಿಶೀಲನೆ ನಡೆಯಿತು.