ಜ.31 ರಂದು ಬೆಳಗ್ಗೆ 10:30 ಗಂಟೆಗೆ ಭಾಗ್ಯನಗರ ರೈಲ್ವೆ ಬ್ರಿಡ್ಜ್ ಬಳಿಯ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಸಭೆ

ಕೊಪ್ಪಳ: ಇಂದು ಸತ್ಯ, ಅಹಿಂಸೆ ಮತ್ತು ತ್ಯಾಗಮಯ ಜೀವನ ಗೌರವಿಸುವ ದಿನವಾಗಿದೆ. ಬ್ರಿಟಿಷರನ್ನು ದೇಶದಿಂದ ಓಡಿಸಲು ಯಾವುದೇ ಆಯುಧ ಬಳಸಿಲ್ಲ. ಅವರು ಅಹಿಂಸಾ ಮಾರ್ಗದ ಅಸ್ತ್ರ ಬಳಸಿ ಆಂಗ್ಲರ ಎದೆ ನಡುಗಿಸಿದರು ಎಂದು ಹಿರಿಯ ಸಾಹಿತಿ ಎ.ಎಂ. ಮದರಿ ಹೇಳಿದರು.

ಬಲ್ಡೋಟ ಕಾರ್ಖಾನೆ ವಿರೋಧಿ ನಗರದ ನಗರಸಭೆ ಬಳಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟದ 92 ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 68 ನೇ ಹುತಾತ್ಮ ಸ್ಮರಣೆ ದಿನ ಆಚರಣೆಯಲ್ಲಿ ಮಾತನಾಡಿದ ಅವರು, ರಕ್ತಪಾತದಿಂದ ಅಸಂಖ್ಯಾತ ಜನರ ಸಾವುನೋವು ಆಗುವುದನ್ನು ಮಹಾತ್ಮಗಾಂಧೀಜಿ ಅಹಿಂಸಾ ತತ್ವದ ಮೂಲಕ ತಪ್ಪಿಸಿದರು. ಇಂತಹ ಸಂತನ ಹೋರಾಟದ ಮಾರ್ಗ ಜಗತ್ತಿಗೆ ಮಾದರಿಯಾಯಿತು. ಈ ಮಹಾತ್ಮನ ಹೋರಾಟದ ದಾರಿ ನಮಗೂ ಆದರ್ಶವಾಗಿದೆ. ಈ ಹೋರಾಟ ಅದೇ ಮಾರ್ಗದಲ್ಲಿ ಗೆಲ್ಲೋಣ ಎಂದರು.

ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಜ.31 ರಂದು ಬೆಳಗ್ಗೆ 10:30 ಗಂಟೆಗೆ ಭಾಗ್ಯನಗರ ರೈಲ್ವೆ ಬ್ರಿಡ್ಜ್ ಬಳಿಯ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಸಭೆ ಕರೆಯಲಾಗಿದೆ. ಈ ವಿಸ್ತೃತ ಸಭೆಗೆ ನಗರದ ಪ್ರಮುಖರು, ಸಂಘ, ಸಂಸ್ಥೆಯ ಪ್ರಮುಖರು, ಸಮಾಜದ ಹಿರಿಯರು ಹಾಗೂ ಬಾಧಿತ 20 ಹಳ್ಳಿಗಳ ಹೋರಾಟದ ಪ್ರಮುಖರನ್ನು ಆಹ್ವಾನಿಸಲಾಗಿದೆ.

ಬಲ್ಡೋಟ, ಎಂಎಸ್ಪಿಎಲ್, ಕಲ್ಯಾಣಿ ಸ್ಟೀಲ್, ಕಿರ್ಲೊಸ್ಕರ್, ಮುಕುಂದ ಸುಮಿ,ಎಕ್ಸ್ ಇಂಡಿಯಾ ಮುಂತಾದ ಕಾರ್ಖಾನೆಗಳ ವಿಸ್ತರಣೆ ವಿರೋಧಿಸುತ್ತಿರುವ ಧರಣಿ ಸತ್ಯಾಗ್ರಹ ಫೆ.7 ರಂದು 100 ನೇ ದಿನವಾಗುತ್ತದೆ. ಅಂದು ಸಾಣೆಹಳ್ಳಿ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಗದುಗಿನ ತೋಂಟದ ಸಿದ್ಧರಾಮ ಸ್ವಾಮಿಗಳು, ಕೊಪ್ಪಳ ಜಿಲ್ಲೆಯ ಮೈನಳ್ಳಿ ಸ್ವಾಮಿಗಳು, ಸಾಹಿತಿ, ಚಿಂತಕ ರಂಜಾನ್ ದರ್ಗಾ, ಖ್ಯಾತ ರಂಗನಿರ್ದೇಶಕ ಸೂರ್ಯಕಾಂತ ಗುಣಕೀಮಠ, ಲೇಖಕ ಅಸ್ಲಂ ದರ್ಗಾ ಆಗಮಿಸುತ್ತಾರೆ. ಕಾರ್ಯಕ್ರಮದ ಯಶಸ್ವಿಗಾಗಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಕೊಪ್ಪಳ ಭಾಗ್ಯನಗರದ ಮತ್ತು ಬಾಧಿತ ಹಳ್ಳಿಯ ಪ್ರಮುಖರು ಸಭೆಗೆ ಆಗಮಿಸಬೇಕೆಂದು ಕೋರಿದರು.

ಸಂಚಾಲಕ ಡಿ.ಎಂ.ಬಡಿಗೇರ, ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎಸ್.ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ, ಬಿ.ಜಿ. ಕರಿಗಾರ, ಸಿ.ಬಿ. ಪಾಟೀಲ್, ಮಹಾದೇವಪ್ಪ ಮಾವಿನಮಾಡು, ಮಂಜುನಾಥ ಕವಲೂರು, ಭೀಮಪ್ಪ ಯಲಬುರ್ಗಾ, ರತ್ನಮ್ಮ ದೊಡ್ಡಮನಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಮಂಗಳೇಶ ರಾಠೋಡ್, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಕ್ಬುಲ್‌ ರಾಯಚೂರು, ಶಿವಪ್ಪ ಜಲ್ಲಿ ಸೇರಿದಂತೆ ಮೊದಲಾದವರು ಹೋರಾಟದಲ್ಲಿ ಪಾಲ್ಗೊಂಡಿದ್ದರು.