ಕನ್ನಡಪ್ರಭ ವಾರ್ತೆ ಯಾದಗಿರಿ

‘ಗಾಂಧಿ ನಮ್ಮ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ರಾಷ್ಟ್ರಪಿತ. ಗಾಂಧಿ ನಮ್ಮ ದೇಶದ ರಾಷ್ಟ್ರಪಿತ ಎಂದು ನಾನು ಒಪ್ಪುವುದೇ ಇಲ್ಲ, ನೆಹರು ನಮ್ಮ ದೇಶದ ಮೊದಲ ಪ್ರಧಾನಮಂತ್ರಿ ಎಂದು ನಾನು ಒಪ್ಪುವುದೇ ಇಲ್ಲ, ಇವರೆಲ್ಲ ತಮ್ಮ ತಮ್ಮ ಚಟಕ್ಕೆ ದೇಶ ಹಾಳು ಮಾಡಿದವರು’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶನಿವಾರ ರಾತ್ರಿ ಜಿಲ್ಲೆಯ ಗುರುಮಠಕಲ್‌ನಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಗಾಂಧಿಯನ್ನು ನಾನು ನಮ್ಮ ಭಾರತದ ರಾಷ್ಟ್ರಪಿತ ಎಂದು ಎಂದಿಗೂ ಒಪ್ಪುವುದಿಲ್ಲ, ಆತ ಪಾಕಿಸ್ತಾನದ ರಾಷ್ಟ್ರಪಿತ. ಇನ್ನು, ಜವಾಹರ್‌ ಲಾಲ್‌ ನೆಹರುವನ್ನು ನಾನು ನಮ್ಮ ದೇಶದ ಮೊದಲ ಪ್ರಧಾನಿ ಎಂದು ಎಂದಿಗೂ ಒಪ್ಪುವುದಿಲ್ಲ’ ಎಂದರು. ‘ನಮ್ಮ ದೇಶದ ಮೊದಲ ಪ್ರಧಾನಿ ನೇತಾಜಿ ಸುಭಾಶ್ಚಂದ್ರ ಬೋಸ್‌’ ಎಂದ ಯತ್ನಾಳ್‌, ‘ಚಂದ್ರಶೇಖರ ಆಜಾದ್‌, ತಾತ್ಯಾಟೋಪಿ, ವೀರ ಸಾವರ್ಕರ್‌, ಲಾಲಾ ಲಜಪತರಾಯ್‌, ಬಾಲಗಂಗಾಧರ ತಿಲಕ, ಡಾ.ಅಂಬೇಡ್ಕರ್‌ರಂತಹವರು ಸ್ವಾತಂತ್ರ್ಯಕ್ಕಾಗಿ ಕಷ್ಟ ಪಟ್ಟವರು. ಇತಿಹಾಸವನ್ನು ತಿರುಚಿ ನೆಹರು-ಗಾಂಧಿಯನ್ನು ಹೊಗಳಲಾಗಿದೆ. ಚಕ್ರ ತಿರುಗಿಸಿದ್ದಕ್ಕೆ ಸ್ವಾತಂತ್ರ್ಯ ಸಿಕ್ತು ಎಂದು ಹೇಳ್ತಾರೆ, ಅದ್ಹೇಗೆ ? ನಾನೂ ಚಕ್ರ ತಿರುಗಿಸಿದರೆ ಸಿಎಂ ಆಗುತ್ತೇನೆಯೇ’ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ವಂದೇ ಮಾತರಂ ಬಗ್ಗೆ ತಕರಾರು ತೆಗೆಯುವವರು ಪಾಕಿಸ್ತಾನಕ್ಕೆ ಹೋಗಲಿ ಎಂದೂ ವಾಗ್ದಾಳಿ ನಡೆಸಿದರು. ‘ವಂದೇಮಾತರಂ ಅನ್ನಲಾಗದಿದ್ದರೆ ಗಾಂಧಿ ಮಾಡಿದ ಪಾಕಿಸ್ತಾನಕ್ಕೆ ಹೋಗಿ, ಬೇಕಿದ್ದರೆ ಗಾಂಧಿಯನ್ನೂ ಕರ್ಕೊಂಡು ಹೋಗಿ ಎಂದು ಮಾಹಾತ್ಮಾ ಗಾಂಧಿ ಹಾಗೂ ಜವಾಹರ್‌ಲಾಲ್‌ ನೆಹರು’ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇವತ್ತು ನಮ್ಮ ನರೇಂದ್ರ ಮೋದಿ ಸರ್ಕಾರ ಜನಗಣಮನಗಿಂತ ಮುಂಚೆ ವಂದೇ ಮಾತರಂ ಅನ್ನುವಂತೆ ಹೇಳಿದ್ದಾರೆ. ಕೆಲವರು ಇದಕ್ಕೆ ತಕರಾರು ತೆಗೆದಿದ್ದಾರೆ. "ಇಸ್‌ ದೇಶ ಮೇ ರೆಹನಾ ಹೋಗಾ, ವಂದೇ ಮಾತರಂ ಗಾನಾ ಹೋಗಾ.. ",


ನೆಹರು ಅವರಿಗೆ ಮೌಂಟ್ ಬ್ಯಾಟನ್‌ ಪತ್ನಿ ಜೊತೆ ಸಂಬಂಧವಿತ್ತು, ನೆಹರು ಕಾಶ್ಮೀರಕ್ಕೆ ಕಲಂ 370 ಕೊಟ್ಟರು. ಯಾಕೆಂದರೆ ಶೇಖ್ ಅಬ್ದುಲ್ಲಾ ಜೊತೆ ಲಿಂಕ್‌ ಇತ್ತು. ರಾಹುಲ್‌ ಗಾಂಧಿ- ಉಮರ್‌ ಅಬ್ದುಲ್ಲಾ ಅವರ ಚಹರೆಯಲ್ಲಿ ಸಾಮ್ಯತೆ ಇದೆ, ಅವರು ಅಣ್ಣ-ತಮ್ಮದಿರರಂತೆ ಕಾಣುತ್ತಾರೆ. ಇವರೆಲ್ಲ ತಮ್ಮ ತಮ್ಮ ಚಟಕ್ಕೆ ದೇಶವನ್ನು ಹಾಳು ಮಾಡಿದವರು ಎಂದು ಹೇಳಿದರು

ನೇತಾಜಿ ಬೋಸರ ಅಂಜಿಕೆಯಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಈ ಹಿಂದೆ ಡಾ.ಅಂಬೇಡ್ಕರ್‌ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆಂದರು. ========ಬಾಕ್ಸ್‌========