ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ದೇಶದ ಸ್ವಾತಂತ್ರ್ಯ ಸಂಗ್ರಾಮದ ಶಕ್ತಿಯಾಗಿರುವ ಮಹಾತ್ಮ ಗಾಂಧೀಜಿ ಅಹಿಂಸಾ ಹೋರಾಟವನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ವಿಶ್ವದ ಶಾಂತಿದೂತರಾಗಿ ಹೊರಹೊಮ್ಮಿದ್ದಾರೆ ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ಹೇಳಿದರು.ಪಟ್ಟಣದ ಶ್ರೀಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಕರ್ನಾಟಕ ಸಂಘ, ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನ, ತಾಲೂಕು ಸಮಾನ ಮನಸ್ಕರ ವೇದಿಕೆ, ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಶ್ರೀಮತಿ ಲಕ್ಷ್ಮಮ್ಮ ವೆಂಕಟರಾಮ್ ಚಾರಿಟಬಲ್ ಸೇವಾ ಟ್ರಸ್ಟ್‌ನಿಂದ ಆಯೋಜಿಸಿದ್ದ ಮಹಾತ್ಮ ಗಾಂಧೀಜಿಯವರ ಬದುಕು ಮತ್ತು ಹೋರಾಟ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಅಹಿಂಸಾ ಹೋರಾಟದ ಮೂಲಕ ಬ್ರಿಟಿಷರ ವಿರುದ್ಧ ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬದುಕು ಮತ್ತು ಜೀವನದ ಸಾಧನೆಗಳು ಇಂದು ಯುವ ಜನರಿಗೆ ಚೆನ್ನಾಗಿ ಅರ್ಥವಾಗಬೇಕಾಗಿದೆ ಎಂದರು. ಗಾಂಧೀಜಿ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಿ ಸಂಚು ನಡೆಸುತ್ತಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಗಾಂಧೀಜಿಯವರ ಸಚ್ಚಾರಿತ್ರಕ್ಕೆ ಅಪಚಾರ ತರುವಂತಹ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತ ಅಪಪ್ರಚಾರ ನಡೆಸಿ ತಪ್ಪು ಭಾವನೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.ಗಾಂಧೀಜಿ ತತ್ವ, ಸಂದೇಶಗಳು ಇಂದು ಹೆಚ್ಚು ಪ್ರಸ್ತುತವಾಗಿವೆ. ಅನ್ಯಾಯದ ವಿರುದ್ಧ ಹೋರಾಡುವಂತೆ ನಾಡಿನ ಯುವಕರಿಗೆ ಸಂದೇಶ ನೀಡಿರುವ ಗಾಂಧೀಜಿ ತಂದೆ ತಾಯಿಗಳು ಹಾಗೂ ಗುರು ಹಿರಿಯರನ್ನು ಗೌರವಿಸುವಂತೆಯೂ ಸೂಚಿಸಿದ್ದಾರೆ. ಹೆಣ್ಣು ಮಕ್ಕಳನ್ನು ಪೂಜಿಸಿ ಗೌರವಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಬೇಕು ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಮಹಾತ್ಮ ಗಾಂಧೀಜಿ ಚಿಂತನೆ ಹಾಗೂ ತತ್ವದರ್ಶಕಗಳು ಹಿಂದಿನ ಸಮಾಜಕ್ಕೆ ಅಗತ್ಯವಾಗಿದೆ. ಗಾಂಧೀಜಿ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ನಿರಂತರವಾಗಿ ನಡೆಯುತ್ತಿವೆ ಎಂದರು.ಪಟ್ಟಣದಲ್ಲಿ ಒಂದು ಸುಸಜ್ಜಿತ ರಂಗಮಂದಿರವಿಲ್ಲ. ತಾಲೂಕು ಹಾಗೂ ಜಿಲ್ಲಾಡಳಿತವು ಕೃಷ್ಣರಾಜಪೇಟೆಯಲ್ಲಿ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲು ಅನುಕೂಲವಾಗುವಂತೆ ಒಂದು ರಂಗಮಂದಿರ ನಿರ್ಮಿಸುವ ದಿಕ್ಕಿನಲ್ಲಿ ಕೆಲಸ ಮಾಡಬೇಕು ಎಂದರು.
ಮಂಡ್ಯ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚೆಲುವಯ್ಯ ಮಾತನಾಡಿದರು. ಇಂದು ನಡೆದ ವಿಚಾರ ಸಂಕಿರಣದಲ್ಲಿ ಗಾಂಧಿ ಕಥನ-ಒಂದು ನೋಟ ವಿಷಯ ಕುರಿತು ಉಪನ್ಯಾಸಕ ಜೆ.ಬಿ.ಮಂಜುನಾಥ್, ಮಹಾತ್ಮಗಾಂಧಿ ಮತ್ತು ವಿದ್ಯಾರ್ಥಿಗಳು ಕುರಿತು ಸಹಾಯಕ ಪ್ರಾಧ್ಯಾಪಕ ದೊಡ್ಡಿಶೇಖರ್, ನನ್ನ ದೃಷ್ಟಿಯಲ್ಲಿ ಗಾಂಧಿ ಕುರಿತು ಚಿಂತಕಿ ಸವಿತಾನಾಗಭೂಷಣ ವಿಷಯ ಮಂಡಿಸಿದರು.ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಬಿ.ಎಂ.ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಲಕ್ಷ್ಮಮ್ಮ ವೆಂಕಟರಾಮ್ ಚಾರಿಟಬಲ್ ಸೇವಾ ಟ್ರಸ್ಟ್ ಅಧ್ಯಕ್ಷ ಹನುಮ ಶೆಟ್ಟರು, ಹಿರಿಯ ರೈತ ಮುಖಂಡ ಎಂ.ವಿ.ರಾಜೇಗೌಡ, ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೇಹೊಸಳ್ಳಿ ಜವರಾಯಿಗೌಡ, ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))