ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಗಾಂಧೀಜಿ ಬದುಕು ನಡವಳಿಕೆಯಿಂದ ಇಂದಿಗೂ ಪ್ರಸ್ತುತರಾಗಿ, ಲೌಖಿಕವಾದ ಯಾವುದೇ ಆಕಾಂಕ್ಷೆ ಇಲ್ಲದೇ ಬದುಕಿ ಆದರ್ಶಪ್ರಾಯರಾಗಿರುವ ಮಹಾತ್ಮ ಪ್ರಜೆಗಳ ದೈವಸ್ವರೂಪಿಯಾಗಿದ್ದಾರೆ. ಅತ್ಯಂತ ಸರಳ ಸಜ್ಜನಿಕೆಯ ಲಾಲ್‍ಬಹದ್ದೂರ್ ಶಾಸ್ತ್ರಿಯವರು ಕೂಡಾ ನುಡಿದಂತೆ ನಡೆದವರು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಮಹಾತ್ಮಗಾಂದಿ ಮತ್ತು ಮಾಜಿ ಪ್ರದಾನಿ ಲಾಲ್‍ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯ ಅಂಗವಾಗಿ ಪಟ್ಟಣದಲ್ಲಿ ನಡೆದ ಶಾಂತಿ ನಡಿಗೆಯನ್ನು ಉಧ್ಘಾಟಿಸಿ ಮಾತನಾಡಿ, ಮಹಾತ್ಮರ ಜನ್ಮದಿನಾಚರಣೆ ಕೇವಲ ಸಾಂಕೇತಿಕ ಆಚರಣೆಗೆ ಸೀಮಿತವಾಗಿದ್ದು ಇದೇ ಭಾವನೆ ಮುಂದುವರೆದರೆ ಮುಂದಿನ ಪೀಳಿಗೆ ಗಾಂಧಿ ಯಾರು ಎಂದು ಕೇಳುವ ಸ್ಥಿತಿ ನಿರ್ಮಾಣವಾದೀತು ಎಂದು ಆತಂಕ ವ್ಯಕ್ತಪಡಿಸಿದರು.
ದೈಹಿಕವಾಗಿ ಗೋಡ್ಸೆ ಕೊಂದ ಮಹಾತ್ಮರನ್ನು ಅನುಸರಿಸದ ನಾವುಗಳು ಅವರ ಮೌಲ್ಯಗಳನ್ನು ದಿನನಿತ್ಯ ಸಾಯಿಸುತ್ತಿದ್ದೇವೆ. ಯುದ್ದದಿಂದಾಗಿ ಈ ದೇಶ ಸಂಕಷ್ಟದ ಸ್ಥಿತಿಯಲ್ಲಿದ್ದ ವೇಳೆ ಪ್ರಜೆಗಳು ಒಂದು ಹೊತ್ತಿನ ಊಟವನ್ನು ಬಿಡುವಂತೆ ಶಾಸ್ತ್ರಿಯವರು ನೀಡಿದ ಕರೆಗೆ ಇಂದಿಗೂ ಅದನ್ನು ಪಾಲನೆ ಮಾಡುವವರಿದ್ದಾರೆ. ಈ ಮಹನೀಯರ ಬಗ್ಗೆ ಮಾತನಾಡುವವರು ಅವರ ಆದರ್ಶಗಳಿಂದ ಬದಲಾದವರು ವಿರಳ ಎಂದರು.ಕೈಸ್ತ ಧರ್ಮಗುರು ವೀರೇಶ್ ವಿಕ್ಟರ್ ಮೋರೆಸ್ ಮಾತನಾಡಿ, ಅಹಿಂಸೆ ಅತ್ಯಂತ ಶಕ್ತಿಯುತವಾದ ಆಯುಧವಾಗಿದೆ. ಮಹಾತ್ಮರ ಆಶಯದಂತೆ ಜಾತಿಧರ್ಮದ ಗೋಡೆಗಳನ್ನು ಬೀಳಿಸಿ ಶಾಂತಿ ಸೌಹಾರ್ದತೆಯೊಂದಿಗೆ ಮಾನವೀಯತೆಯಿಂದ ಮನುಷ್ಯ ಧರ್ಮದ ತಳಹದಿಯಲ್ಲಿ ಬದುಕುವ ಅನಿವಾರ್ಯತೆ ಇದೆ. ಜಾತಿ ಧರ್ಮಗಳ ನಡುವಿನ ಇತ್ತೀಚಿನ ಬೆಳವಣಿಗೆ ಆತಂಕಕಾರಿಯಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಎಸ್. ರಂಜಿತ್ ಮಾತನಾಡಿ, ನಿದನರಾಗಿ ಒಂದೂವರೆ ಶತಮಾನದ ನಂತರವೂ ಶಾಶ್ವತರಾಗಿರುವ ಗಾಂಧಿ ಯುಗಪುರುಷರಾಗಿದ್ದಾರೆ. ದೇಶದ ಪ್ರದಾನಿಯಾಗಿ ಜೈ ಜವಾನ್ ಜೈ ಕಿಸಾನ್ ಘೋಷಣೆ ಮೂಲಕ ಸರಳತೆಯಿಂದ ಆಡಳಿತ ನಡೆಸಿದ್ದ ಮಾಜಿ ಪ್ರದಾನಿ ಲಾಲ್‍ಬಹದ್ದೂರ್ ಶಾಸ್ತ್ರಿಯವರು ಈ ದೇಶದ ಜನರ ಹೃದಯದಲ್ಲಿ ಶಾಶ್ವತರಾಗಿದ್ದಾರೆ ಎಂದರು.ಸಭಾ ಕಾರ್ಯಕ್ರಮಕ್ಕೆ ಮುನ್ನ ಆಗುಂಬೆ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೆ ಹಾರ ಹಾಕುವ ಮೂಲಕ ನಡೆದ ಶಾಂತಿ ನಡಿಗೆಗೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ನೀಡಿದರು. ಮೇಗರವಳ್ಳಿ ಚೌಕದ ತಮ್ಮಣ್ಣಭಟ್ಟರು ಗಾಂಧಿ ವೇಷ ಧರಿಸಿ ನಡಿಗೆಯಲ್ಲಿ ಪಾಲ್ಗೊಂಡಿದ್ದರು.
ಪಪಂ ಅಧ್ಯಕ್ಷ ರಹಮತ್‍ಉಲ್ಲಾ ಅಸಾದಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ. ಶೈಲಾ, ತಾಲೂಕು ಮುಸ್ಲೀಂ ಒಕ್ಕೂಟದ ಮಹಮದ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ರಾಘವೇಂದ್ರ, ಪತ್ರಕರ್ತ ಡಾನ್ ರಾಮಣ್ಣ ಹಾಗೂ ಕಂದಾಯ ಇಲಾಖೆಯ ಸುರಥಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.