ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ ಚಿಂತಕ, ಸುಧಾರಕ, ತತ್ವಜ್ಞಾನಿ ಕೂಡ ಆಗಿದ್ದರು. ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿಯವರ ಜೀವನ ಮೌಲ್ಯಗಳನ್ನು ಇಂದಿನ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶಾಭಿಮಾನ ಮೆರೆಯಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.ಪಟ್ಟಣದ ತಾಲೂಕು ಆಡಳಿತ ಮತ್ತು ಪುರಸಭೆಯಿಂದ ನೇತಾಜಿ ನಗರ ಬಡಾವಣೆಯಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಹಿನ್ನೆಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸ್ಮರಿಸಿದರು. ಭಾರತೀಯರಾಗ ನಾವೆಲ್ಲ ಒಂದೇ, ಅಖಂಡ ಭಾರತ ಕಟ್ಟುವ ಗುರಿಯೊಂದೇ ನಮ್ಮ ಧ್ಯೇಯವಾಗಬೇಕು ಎಂಬ ಉದ್ದೇಶದೊಂದಿಗೆ ಅಹಿಂಸಾ ಚಳುವಳಿ ಮೂಲಕ ಬ್ರಿಟೀಷರನ್ನು ದೇಶದಿಂದ ಓಡಿಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ್ದಾರೆ. ಗಾಂಧಿಜೀಯವರು ಅತ್ಯಂತ ಸರಳ ಜೀವನ ನಡೆಸಿ ಸಮಾಜದ ಸುಧಾರಣೆಗೆ ಬದುಕನ್ನೇ ಮುಡಿಪಾಗಿಟ್ಟಿದ್ದರು. ಹೀಗಾಗಿ, ಅವರನ್ನು ಪ್ರತಿ ಅ.2ರಂದು ಜಯಂತಿ ಮೂಲಕ ಸ್ಮರಿಸುತ್ತೇವೆ ಎಂದರು.
ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದು, ಯುವ ರಾಜಕಾರಣಿಗಳಿಗೆ ಪ್ರೇರಣೆಯಾದವರು ಲಾಲ್ ಬಹದ್ದೂರ್ ಶಾಸ್ತ್ರಿ ಅವರು. ಲಾಲ್ ಬಹದ್ಧೂರ್ ಶಾಸ್ತ್ರಿ ಮೂಲತಃ ಉತ್ತರ ಪ್ರದೇಶದ ವಾರಣಾಸಿ ಬಳಿಯ ಹಳ್ಳಿ ಮುಗಲ್ಸರಾಯಿಯಲ್ಲಿ ಅಕ್ಟೋಬರ್ 2, 1904ರಂದು ಜನಿಸಿದರು. ಮುಂದೆ ಅವರು ದೇಶದ ಎರಡನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. 16 ವರ್ಷದವರಿದ್ದಾಗಲೇ ಗಾಂಧಿಜೀ ಕರೆಗೆ ಓಗಟ್ಟು ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡರು. ನಂತರ ಅವರು ಕೇಂದ್ರ ಸರ್ಕಾರದ ಸಂಪುಟದಲ್ಲಿ ಹಲವು ಪ್ರಮುಖ ಇಲಾಖೆಗಳನ್ನು ನಿಭಾಯಿಸಿದರು. 1964ರಿಂದ 1966 ವರೆಗೆ ದೇಶದ 2ನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಭಾರತದ ರಾಜಕೀಯ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಶಾಸ್ತ್ರಿ ಅವರು, ಜೈ ಜವಾನ್, ಜೈ ಕಿಸಾನ್ ಎಂಬ ಘೋಷವಾಕ್ಯದ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಹೊಳಪು ನೀಡಿದವರು.ಈ ವೇಳೆ ತಹಶಿಲ್ದಾರ ಬಲರಾಮ ಕಟ್ಟಿಮನಿ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಮುಖಂಡರಾದ ವಾಯ್ ಎಚ್ ವಿಜಯಕರ, ವಾಸುದೇವ ಶಾಸ್ತ್ರೀ, ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷ ಬಿ ಕೆ ಬಿರಾದಾರ, ಗಣ್ಯ ಉದ್ಯಮಿ ರಮೇಶ ಓಸ್ವಾಲ್, ಮುಖಂಡರಾದ ಗಫೂರಸಾಬ ಮಕಾನದಾರ, ಎಸ್ ಎಸ್ ಯು ಐ ಶಂಘಟನೆಯ ಪ್ರದಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ಲಕ್ಷ್ಮಣ ಲಮಾಣಿ, ಯೂಥ್ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದರಫೀಕ ಶಿರೋಳ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಮಹಿಳಾ ಘಟದ ಅಧ್ಯಕ್ಷೆ ಶೋಭಾ ಶಳ್ಳಗಿ, ಸೇರಿದಂತೆ ಹಲವರು ಇದ್ದರು.
ಪಾದಯಾತ್ರೆ: ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಜಯಂತಿ ಅಂಗವಾಗಿ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ), ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ನೇತೃತ್ವದಲ್ಲಿ ತಾಲೂಕು ಘಟಕದಿಂದ ಹಾಗೂ ತಾಲೂಕು ಆಡಳಿತದಿಂದ ನೇತಾಜಿ ನಗರ ಬಡಾವಣೆಯವರೆಗೆ ಪಾದಯಾತ್ರೆ ನಡೆಸಲಾಯಿತು. ಪಾದಯಾತ್ರೆಯಲ್ಲಿ ಹಲವು ಗಣ್ಯರು, ಸಾಹಿತಿಗಳು, ಉದ್ಯಮಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.