ಮಹಾವೀರ ಸಹಕಾರಿ ಬ್ಯಾಂಕಿಗೆ 3.55 ಕೋಟಿ ಲಾಭ

| Published : Apr 06 2025, 01:51 AM IST

ಸಾರಾಂಶ

ಹುಕ್ಕೇರಿ ಪ್ರತಿಷ್ಠಿತ ಮಹಾವೀರ ಮಲ್ಟಿಪರ್ಪಜ್ ಸೌಹಾರ್ದ ಸಹಕಾರಿ ಸಂಘವು ಪ್ರಗತಿ ಪಥದತ್ತ ಸಾಗಿದ್ದು 3.55 ಕೋಟಿ ನಿವ್ವಳ ಲಾಭ ಗಳಿಸಿದೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಜಿಲ್ಲೆಯ ಜನರ ಜೀವನಾಡಿಯಾಗಿ ಬ್ಯಾಂಕಿಂಗ್ ವಲಯದಲ್ಲಿ ಶ್ರೇಷ್ಠ ಸಹಕಾರಿ ಎನಿಸಿರುವ ಹುಕ್ಕೇರಿ ಪ್ರತಿಷ್ಠಿತ ಮಹಾವೀರ ಮಲ್ಟಿಪರ್ಪಜ್ ಸೌಹಾರ್ದ ಸಹಕಾರಿ ಸಂಘವು ಪ್ರಗತಿ ಪಥದತ್ತ ಸಾಗಿದ್ದು ₹3.55 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಬಡ, ಮಧ್ಯಮ ವರ್ಗದ ಜನರು, ಕೂಲಿಕಾರರು, ಬೀದಿ ವ್ಯಾಪಾರಸ್ಥರು, ಸಣ್ಣ ಉದ್ದಿಮೆದಾರರ ಆರ್ಥಿಕ ಮಟ್ಟ ಸುಧಾರಣೆ ಸದುದ್ದೇಶದಿಂದ ಆರಂಭವಾದ ಸಂಸ್ಥೆ ಸುದೀರ್ಘ ಪಯಣವನ್ನು ಯಶಸ್ವಿಯಾಗಿ ಪೂರೈಸಿ ಪ್ರಗತಿ ಪಥದತ್ತ ಸಾಗಿದೆ ಎಂದರು. ಎರಡು ದಶಕಗಳ ಹಿಂದೆ ಜನ್ಮ ತಳೆದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಬ್ಯಾಂಕ್ ಒಟ್ಟು 15151 ಜನ ಸದಸ್ಯರನ್ನು ಹೊಂದಿದ್ದು ಒಟ್ಟು ₹1183 ಕೋಟಿ ವಹಿವಾಟು ನಡೆಸಿದೆ. 42 ಲಕ್ಷ ಶೇರು ಬಂಡವಾಳವಿದ್ದು ₹10 ಕೋಟಿ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳಿವೆ. ₹315 ಕೋಟಿ ದುಡಿಯುವ ಬಂಡವಾಳವಿದ್ದು ₹250 ಕೋಟಿ ಸಾಲ ವಿತರಿಸಲಾಗಿದೆ. ₹280 ಕೋಟಿ ಠೇವುಗಳಿದ್ದು ₹38 ಕೋಟಿ ಹೂಡಿಕೆಗಳಿವೆ. 31 ಮಾರ್ಚ್ 2025ರವರೆಗೆ ₹3.55 ಕೋಟಿ ರೂ ನಿವ್ಹಳ ಲಾಭ ಗಳಿಸಿದೆ ಎಂದು ವಿವರಿಸಿದರು.

ಸದ್ಯ ನಾಲ್ಕು ಜಿಲ್ಲೆಗಳಲ್ಲಿ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡಿದೆ. ಈಗಾಗಲೇ ಪ್ರಧಾನ ಕಚೇರಿ ಸೇರಿ ಒಟ್ಟು 17 ಶಾಖೆಗಳಿದ್ದು ಹಾವೇರಿ, ಗದಗ, ಕಾರವಾರ, ಶಿವಮೊಗ್ಗ ಜಿಲ್ಲೆಯಲ್ಲಿ ನೂತನ ಶಾಖೆಗಳನ್ನು ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಗ್ರಾಹಕರೇ ಬ್ಯಾಂಕಿನ ಆಧಾರಸ್ತಂಭವಾಗಿದ್ದು ವಿವಿಧ ಸಾಲಗಳಿಗೆ ಕಡಿಮೆ ಬಡ್ಡಿ ದರ ಆಕರಣೆ, ಠೇವುದಾರರಿಗೆ ಆಕರ್ಷಕ ಬಡ್ಡಿ ದರ ನೀಡಲಾಗುತ್ತಿದೆ. ಹಿರಿಯ ನಾಗರಿಕರು, ಸೈನಿಕರು ಮತ್ತು ವಿಧವೆಯರಿಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಸಿಬ್ಬಂದಿ ದಕ್ಷತೆಯಿಂದ ಆಧುನಿಕ ಸೌಲಭ್ಯಗಳೊಂದಿಗೆ ಗ್ರಾಹಕ-ಸದಸ್ಯರಿಗೆ ತ್ವರಿತಗತಿಯಲ್ಲಿ ಸೇವೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

ನಿರ್ದೇಶಕರಾದ ಸಂಜಯ ನಿಲಜಗಿ, ಕಿರಣ ಸೊಲ್ಲಾಪುರೆ, ಅಶೋಕ ಪಾಟೀಲ, ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಪಾಟೀಲ, ಶಾಖಾ ವ್ಯವಸ್ಥಾಪಕ ಸಂತೋಷಸಿಂಗ್ ರಜಪೂತ ಮತ್ತಿತರರು ಉಪಸ್ಥಿತರಿದ್ದರು.