ಮಹಾವೀರ ಕಾಲೇಜು: ಪ್ರಕೃತಿ-ರಕ್ಷಕ್‌ ಫೆಸ್ಟ್ ಸಮಾರೋಪ

| Published : Mar 27 2025, 01:01 AM IST

ಸಾರಾಂಶ

ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜು ೬೦ನೇ ವರ್ಷಾಚರಣೆ ಸಂಭ್ರಮದಲ್ಲಿ ಕಾಲೇಜಿನ ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ಘಟಕಗಳು ಆಯೋಜಿಸಿದ ‘ಪ್ರಕೃತಿ-ರಕ್ಷಕ್’ ಎಂಬ ಅಂತರ್‌ಕಾಲೇಜು ಫೆಸ್ಟ್‌ ಸಮಾರೋಪ ಸಮಾರಂಭ ಇತ್ತೀಚೆಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಲ್ಲಿನ ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜು ೬೦ನೇ ವರ್ಷಾಚರಣೆ ಸಂಭ್ರಮದಲ್ಲಿ ಕಾಲೇಜಿನ ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ಘಟಕಗಳು ಆಯೋಜಿಸಿದ ‘ಪ್ರಕೃತಿ-ರಕ್ಷಕ್’ ಎಂಬ ಅಂತರ್‌ಕಾಲೇಜು ಫೆಸ್ಟ್‌ ಸಮಾರೋಪ ಸಮಾರಂಭ ಇತ್ತೀಚೆಗೆ ನೆರವೇರಿತು.

ಶ್ರೀ ಮಹಾವೀರ ಕಾಲೇಜು ಟ್ರಸ್ಟ್‌ ಸದಸ್ಯ ಕೆ. ಸುರೇಶ್ ಪ್ರಭು ಮಾತನಾಡಿ, ಮಹಾವೀರ ಕಾಲೇಜಿನ ೬೦ನೇ ವರ್ಷದ ಸಂಭ್ರಮಾಚರಣೆಯಲ್ಲಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು.

ಮೂಡುಬಿದಿರೆಯ ವಕೀಲ ಜೆ.ಪಿ.ಭಂಡಾರಿ ಮಾತನಾಡಿ, ಶ್ರೀ ಮಹಾವೀರ ಕಾಲೇಜಿನವರು ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ವಿದ್ಯಾರ್ಥಿಗಳ ಪ್ರತಿಭೆಯನ್ನು ತೋರಿಸಲು ಈ ವೇದಿಕೆಯಲ್ಲಿ ಒಂದೊಳ್ಳೆಯ ಅವಕಾಶವನ್ನು ನೀಡಿದ್ದಾರೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿದ ಎನ್.ಎಸ್.ಎಸ್. ಹಾಗೂ ಎನ್.ಸಿ.ಸಿ. ವಿದ್ಯಾರ್ಥಿಗಳಿಂದ ಮುಂದೆ ಜೀವನದಲ್ಲಿ ದೇಶಕ್ಕೆ ಸೇವೆ ಮಾಡಲು ಅವಕಾಶ ಸಿಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದಂತಹ ಎಲ್ಲರಿಗೂ ಅಭಿನಂದನೆ ತಿಳಿಸಿದರು.

ಎನ್.ಎಸ್.ಎಸ್. ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪ್ರಕೃತಿ ಸ್ಪರ್ಧೆಯಲ್ಲಿ ವಿಜೇತರ ಪಟ್ಟಿಯನ್ನು ಎನ್.ಎಸ್.ಎಸ್. ಯೋಜನಾಧಿಕಾರಿ ಶಾರದಾ ವಾಚಿಸಿದರು.

ಈ ಸ್ಪರ್ಧೆಯಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ಎನ್.ಸಿ.ಸಿ. ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರಕ್ಷಕ್ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಎನ್.ಸಿ.ಸಿ. ಅಧಿಕಾರಿ ಲೆಫ್ಟಿನೆಂಟ್ ವಿಜಯಲಕ್ಷ್ಮೀ ವಾಚಿಸಿದರು. ಈ ಸ್ಪರ್ಧೆಯ ಸಮಗ್ರ ಪ್ರಶಸ್ತಿಯನ್ನು ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ತಮ್ಮದಾಗಿಸಿಕೊಂಡಿತು. ಈ ಸಂದರ್ಭ ಶ್ರೀ ಮಹಾವೀರ ಕಾಲೇಜು ಟ್ರಸ್ಟ್ನ ಸದಸ್ಯ ಕೆ. ಸುರೇಶ್ ಪ್ರಭು ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಎನ್.ಎಸ್.ಎಸ್. ವಲಯ ಸಂಚಾಲಕ ಸಂತೋಷ್ ಶೆಟ್ಟಿ, ಪ್ರಜ್ವಲ್, ರೆಜಿಮೆಂಟಲ್ ೩೪೫ ಫೀಲ್ಡ್, ಭಾರತೀಯ ಭೂ ಸೇನೆ ಹಾಗೂ ಹಳೆ ವಿದ್ಯಾರ್ಥಿ, ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ರಮೇಶ್ ಭಟ್, ವಿದ್ಯಾರ್ಥಿಕ್ಷೇಮ ಪಾಲನಾಧಿಕಾರಿ ಪ್ರೊ. ಹರೀಶ್, ಎನ್.ಎಸ್.ಎಸ್. ಅಧಿಕಾರಿ ಶಾರದಾ, ವಿದ್ಯಾರ್ಥಿ ನಾಯಕಿ ಶೃತಿ ಪೆರಿ, ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ವಿದ್ಯಾರ್ಥಿ ನಾಯಕರಾದ ವೈಜೇಶ್, ಸಂಶೋಧ್, ಶ್ರೀನಿಧಿ, ತುಳಸಿ ಮತ್ತು ಲತೇಶ್ ಇದ್ದರು. ಎನ್.ಸಿ.ಸಿ. ಕೆಡೆಟ್ ಚಂದ್ರಶೇಖರ್ ಸ್ವಾಗತಿಸಿ, ಎನ್.ಎಸ್.ಎಸ್. ಸ್ವಯಂಸೇವಕಿ ಶ್ರೇಷ್ಠ ನಿರೂಪಿಸಿದರು. ಎನ್.ಎಸ್.ಎಸ್. ಸ್ವಯಂಸೇವಕ ವಿಜೇತ್ ವಂದಿಸಿದರು.