ಮೂಡುಬಿದಿರೆಯಲ್ಲಿ ಮಹಾವೀರ ಜಯಂತಿ ಆಚರಣೆ

| Published : Apr 22 2024, 02:16 AM IST

ಸಾರಾಂಶ

ಮಹಾವೀರ ಸ್ವಾಮಿಗೆ ಪಂಚಾಮೃತ ಅಭಿಷೇಕ, ಸಾಮೂಹಿಕ ಅಷ್ಟವಿದಾರ್ಚನೆ ಪೂಜೆ ನಡೆಯಿತು. ಬೆಳಗ್ಗೆ ಜೈನ ಮಠದಿಂದ ಬೆಳ್ಳಿಯ ಪಲ್ಲಕ್ಕಿಯಲ್ಲಿ ದೇವ, ಶಾಸ್ತ್ರಗುರುಗಳನ್ನು ಹೊತ್ತು ಬೆಟ್ಕೆರಿ ಮಹಾವೀರ ಸ್ವಾಮಿ ಬಸದಿಗೆ ತೆರಳಿ ಅಲ್ಲಿ ಸ್ವಾಮಿಗೆ ಕ್ಷೀರಾಭಿಷೇಕ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಪ್ರತಿಯೊಬ್ಬ ಮನುಷ್ಯ ಕೂಡಾ ಜೀವನದಲ್ಲಿ ಸಣ್ಣ ಸಣ್ಣ ವ್ರತ ನಿಯಮ ಪಾಲನೆ, ಅಹಿಂಸಾವೃತದಿಂದ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ ಎಂದು ಹಿರಿಯ ಸಾಹಿತಿ, ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಪಿ. ಸಂಪತ್ ಕುಮಾರ್‌ ಹೇಳಿದರು.

ಭಾನುವಾರ ಜೈನಕಾಶಿ ಮೂಡುಬಿದಿರೆಯ ಶ್ರೀ ಮಹಾವೀರ ಭವನದಲ್ಲಿ ಭಗವಾನ್ ಶ್ರೀ ಮಹಾವೀರ ಸ್ವಾಮಿಯವರ 2623ನೇ ಜನ್ಮ ಕಲ್ಯಾಣ ಮಹೋತ್ಸವದಲ್ಲಿ ಉಪನ್ಯಾಸ ನೀಡಿದರು.

ಜೈನರ ಅಂತಿಮ ತೀರ್ಥಂಕರರಾದ ಮಹಾವೀರ ಸ್ವಾಮಿಯ ಬೋಧನೆಗಳು ಇಂದಿಗೂ ‘ವೀರ ಶಾಸನ’ವಾಗಿ ಜಗತ್ತಿನ ಎಲ್ಲ ಜೈನರು ಇಂದಿಗೂ ಪಾಲಿಸುತ್ತಿರುವವುದು ಹೆಮ್ಮೆಯ ವಿಚಾರವಾಗಿದೆ. ಮಧು, ಮದ್ಯ ಮಾಂಸ ಆಹಾರಗಳ ತ್ಯಾಗದಿಂದ ಆತ್ಮ ಕಲ್ಯಾಣ ಮಾಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದವರು ಹೇಳಿದರು.

ಧಾರ್ಮಿಕ ಸಭೆಯಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಮಹಾವೀರರ ಬೋಧನೆಗಳು ಸಾರ್ವಕಾಲಿಕವಾಗಿದ್ದು. ಸತ್ಯ, ಅಹಿಂಸೆ, ಅಪರಿಗ್ರಹ, ಆಚೌರ್ಯ ಮತ್ತು ಬ್ರಹ್ಮಚರ್ಯ ಮೊದಲಾದ ಪಂಚ ಅಣು ವ್ರತಗಳನ್ನು ಪಾಲಿಸುವುದರ ಮೂಲಕ ಆತ್ಮ ಕಲ್ಯಾಣವಾಗಿ ಪ್ರತಿಯೊಂದು ಜೀವಾತ್ಮ ಕೂಡಾ ಪರಮಾತ್ಮ ಪದವಿಯನ್ನು ಪಡೆಯಬಹುದು. ಮನುಷ್ಯ ಜನ್ಮದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ತಾನು ಜೀವಿಸುವುದರೊಂದಿಗೆ ಇನ್ನೊಂದು ಜೀವರಾಶಿಯನ್ನು ಕೂಡಾ ಜೀವಿಸಲು ಬಿಡುವುದೇ ಧರ್ಮ ಎಂದರು.

ಮೂಡುಬಿದಿರೆ ಅಲಂಗಾರು ಮೌಂಟ್ ರೋಸರಿ ಚಾರಿಟಬಲ್ ಟ್ರಸ್ಟ್‌ನ ವೃದ್ಧಾಶ್ರಮಕ್ಕೆ ಮಧ್ಯಾಹ್ನದ ಆಹಾರ ದಾನವನ್ನು ನೀಡಲಾಯಿತು. ಮಂಗಳೂರಿನ ಎ.ಜೆ. ಆಸ್ಪತ್ರೆಯ ಸಹಭಾಗಿತ್ವದಲ್ಲಿ ಮೂಡುಬಿದಿರೆಯ ಜೈನ್ ಮೆಡಿಕಲ್ ಸೆಂಟರ್‌ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ಸುಮಾರು 75 ಜನ ರಕ್ತದಾನ ಮಾಡಿದರು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮಹಾವೀರ ಸ್ವಾಮಿಗೆ ಪಂಚಾಮೃತ ಅಭಿಷೇಕ, ಸಾಮೂಹಿಕ ಅಷ್ಟವಿದಾರ್ಚನೆ ಪೂಜೆ ನಡೆಯಿತು. ಬೆಳಗ್ಗೆ ಜೈನ ಮಠದಿಂದ ಬೆಳ್ಳಿಯ ಪಲ್ಲಕ್ಕಿಯಲ್ಲಿ ದೇವ, ಶಾಸ್ತ್ರಗುರುಗಳನ್ನು ಹೊತ್ತು ಬೆಟ್ಕೆರಿ ಮಹಾವೀರ ಸ್ವಾಮಿ ಬಸದಿಗೆ ತೆರಳಿ ಅಲ್ಲಿ ಸ್ವಾಮಿಗೆ ಕ್ಷೀರಾಭಿಷೇಕ ನಡೆಸಲಾಯಿತು.

ಧಾರ್ಮಿಕ ಸಭೆಯ ವೇದಿಕೆಯಲ್ಲಿ ಪಟ್ನಶೆಟ್ಟಿ ಸುಧೇಶ್ ಕುಮಾರ್, ಬಸದಿಗಳ ಮೋಕೆಸರ ಆನಡ್ಕ ದಿನೇಶ್ ಕುಮಾರ್ ಕಾರ್ಯಾಧ್ಯಕ್ಷ ಶೈಲೇಂದ್ರ ಕುಮಾರ್ ಉಪಸ್ಥಿತರಿದ್ದರು. ಜನ್ಮ ಕಲ್ಯಾಣ ಸಮಿತಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಅನಂತ್‌ವೀರ ಜೈನ್ ವಂದಿಸಿದರು. ನಿರಂಜನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.