ಜಯಂತಿ ಕಾರ್ಯಕ್ರಮಗಳು ಸಾಮಾಜಿಕ ಏಕತೆ ಮತ್ತು ಪ್ರಗತಿಯನ್ನು ಸಾಧಿಸಲು ಪ್ರೇರಣೆ ನೀಡುವ ಕಾರ್ಯಕ್ರಮಗಳಾಗಿವೆ.

ಬಳ್ಳಾರಿ: ಮಹನೀಯರ ಆದರ್ಶ ಬದುಕು, ಅವರ ತತ್ವಗಳನ್ನು ಈಗಿನ ಯುವಜನತೆಗೆ ತಲುಪಿಸಲು ಮತ್ತು ಸಮಾಜದಲ್ಲಿ ಸಮಾನತೆ, ಸೌಹಾರ್ದ ಮೂಡಿಸುವಲ್ಲಿ ರಾಜ್ಯ ಸರ್ಕಾರವು ಜಯಂತಿ ಕಾರ್ಯಕ್ರಮಗಳನ್ನು ಆಚರಿಸುತ್ತಿದೆ ಎಂದು ಮಹಾನಗರ ಪಾಲಿಕೆಯ ಮಹಾಪೌರ ಪಿ.ಗಾದೆಪ್ಪ ತಿಳಿಸಿದರು.ಜಿಲ್ಲಾಡಳಿತ, ಜಿಪಂ, ಕನ್ನಡ- ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಯಂತಿ ಕಾರ್ಯಕ್ರಮಗಳು ಸಾಮಾಜಿಕ ಏಕತೆ ಮತ್ತು ಪ್ರಗತಿಯನ್ನು ಸಾಧಿಸಲು ಪ್ರೇರಣೆ ನೀಡುವ ಕಾರ್ಯಕ್ರಮಗಳಾಗಿವೆ. ಹಾಗಾಗಿ ಮಹನೀಯರ ಆದರ್ಶಗಳನ್ನು ಪಾಲಿಸಿ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಮಹನೀಯರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಮಾತನಾಡಿ, ಕನ್ನಡದಲ್ಲಿ ಸರ್ವಜ್ಞ ಮತ್ತು ತಮಿಳಿನಲ್ಲಿ ತಿರುವಳ್ಳುವರ್ ಅವರಂತೆ ತೆಲುಗಿನಲ್ಲಿ ಶ್ರೇಷ್ಠ ಮತ್ತು ಮಹಾಕವಿ ಎಂದರೆ ಮಹಾಯೋಗಿ ವೇಮನರು. ಜನಸಾಮಾನ್ಯರ ಕವಿ, ಜೀವಕಾರುಣ್ಯದ ಕವಿ, ಲೋಕಕ್ಕೆ ಮಾರ್ಗದರ್ಶಿಯಾಗಿದ್ದ ಮತ್ತು ತಮ್ಮ ಜೀವಿತಾವಧಿಯ ಕಾಲಘಟ್ಟದಲ್ಲಿ ಜಾತೀಯತೆ, ಅಂಧಶ್ರದ್ಧೆ, ಮೇಲುಕೀಳುಗಳನ್ನು ತಮ್ಮ ಪದ್ಯಗಳ ಮೂಲಕ ಧಿಕ್ಕರಿಸಿದವರು ಮಹಾಯೋಗಿ ವೇಮನರು ಎಂದು ಹೇಳಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮಲಪನಗುಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶೇಖರ ಗಿರಡ್ಡಿ ಜಯಂತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ವೇಮನರು ಆಂಧ್ರಪ್ರದೇಶದ ಮೂಗಚಿಪಲ್ಲಿಯ ಕೋಮಗಿರಿ ವೇಮ ಭೂಪಾಲ ಮತ್ತು ಮಲ್ಲಮಾಂಬೆ ಎಂಬ ದಂಪತಿಯ ಮಗನಾಗಿ ಜನಿಸಿದರು. 1412- 1480ರ ನಡುವೆ ಅಂದಾಜು 68 ವರ್ಷ ಬದುಕಿದ್ದ ವೇಮನ ಮಹಾಕವಿ, ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತರಾಗಿ, ಮಹಾಂತರಾಗಿ ಬೆಳೆದವರು. 15ನೇ ಶತಮಾನದ ತೆಲುಗು ಭಾಷೆಯ ಅನುಭವಿ ವಚನಕಾರ ಮತ್ತು ಸಮಾಜ ಸುಧಾರಕರಾಗಿದ್ದರು ಎಂದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂವಿಧಾನ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ನಿಹಾರಿಕಾ ಇ ಅವರು ಭರತನಾಟ್ಯ ಪ್ರದರ್ಶಿಸಿದರೆ, ವಿದ್ಯಾರ್ಥಿನಿ ಹಿಮಬಿಂದು ಅವರು ಗಾಂಧಾರಿ ಕಲೆ ಪ್ರದರ್ಶಿಸಿ, ಗಮನ ಸೆಳೆದರು. ದೊಡ್ಡಬಸಪ್ಪ ಗವಾಯಿ ಡಿ.ಕಗ್ಗಲ್ ಭಕ್ತಿ ಸಂಗೀತ, ವೇಮನ ಪದ್ಯಗಳನ್ನು ಗಾಯನದ ಮೂಲಕ ಪ್ರಸ್ತುತಪಡಿಸಿದರು.

ಸಂಭ್ರಮದ ಮೆರವಣಿಗೆ: ಮಹಾಯೋಗಿ ವೇಮನ ಜಯಂತಿ ಅಂಗವಾಗಿ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು. ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆಗೈಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ರೆಡ್ಡಿ ಜನ ಸಂಘ ಆವರಣದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತ- ರೈಲು ನಿಲ್ದಾಣ ರಸ್ತೆ- ಹಳೆ ಜಿಲ್ಲಾಧಿಕಾರಿ ಕಚೇರಿ ರಸ್ತೆ- ಎಚ್.ಆರ್. ಗವಿಯಪ್ಪ ವೃತ್ತದ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ನಡೆಯಿತು.

ಈ ವೇಳೆ ಬಳ್ಳಾರಿ ರೆಡ್ಡಿ ಜನ ಸಂಘ(ರಿ)ದ ಜಿಲ್ಲಾಧ್ಯಕ್ಷ ಎನ್.ಪ್ರತಾಪ್ ರೆಡ್ಡಿ, ಸಹಾಯಕ ಆಯುಕ್ತರ ಕಚೇರಿಯ ತಹಶೀಲ್ದಾರ ಶಾಷಾವಲಿ, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಬಸರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.