ಸಾರಾಂಶ
ಗದಗ: ಆದರ್ಶ ಜೀವನವನ್ನು ಸಾಗಿಸಲು ಅಗತ್ಯವಾಗಿ ಬೇಕಾದ ಉದಾತ್ತ ಮೌಲ್ಯಗಳನ್ನು ಪರಿಚಯಿಸಿದವರು ಮಹಾಯೋಗಿ ಶ್ರೀ ವೇಮನರು. ಅವರು ಬೋಧಿಸಿದ ತತ್ವಗಳು ಸರ್ವಕಾಲಿಕ ಮಹತ್ವಪೂರ್ಣವಾದವುಗಳು ಎಂದು ಕಾನೂನು, ಪ್ರವಾಸೋದ್ಯಮ ಮತ್ತು ಜಿಲ್ಲಾಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಲಾ, ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಇತ್ತೀಚೆಗೆ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಮಹಾಯೋಗಿ ವೇಮನ ಪೀಠ ಹಾಗೂ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಮಹಾಯೋಗಿ ವೇಮನರ ತತ್ವ ಪ್ರಸಾರದಲ್ಲಿ ಕೆ.ಎಚ್. ಪಾಟೀಲರ ಪಾತ್ರ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ರೈತನು ಬೆಳೆದ ಬೆಳೆಗೆ ರೈತನೇ ಬೆಲೆ ನಿರ್ಧರಿಸುವಂತಾದಾಗಲೇ ರೈತಾಪಿ ವರ್ಗದ ಕಲ್ಯಾಣ ಸಾಧ್ಯ ಎಂಬುದು ಕೆ.ಎಚ್. ಪಾಟೀಲ ಅವರ ಆಶಯವಾಗಿತ್ತು. ಮಹಾನ್ ವ್ಯಕ್ತಿತ್ವದ ವೇಮನರು ನಮಗೆ ಕೊಟ್ಟ ಆತ್ಮ ವಿದ್ಯಾ ಸಂಪತ್ತು ಅದು ಆದರ್ಶ ಸಂಪತ್ತಾಗಿದೆ. ಬದುಕನ್ನು ಸಾರ್ಥಕ ಪಡಿಸಿಕೊಳ್ಳುವ ಆತ್ಮೋನ್ನತಿ ಹಾದಿ ತೋರಿದ ಸಂಪತ್ತಾಗಿದೆ. ಪ್ರತಿ ಅಂಶದಲ್ಲಿ ದೈವತ್ವ ಕಂಡ ಮಹಾಜ್ಞಾನಿಯಾದವರು ವೇಮನರು ಎಂದರು.
ಮಾಜಿ ಸಂಸದ ಐ.ಜಿ. ಸನದಿ ಮಾತನಾಡಿ, ವೇಮನರ ಸಾಹಿತ್ಯದ ಬಗ್ಗೆ ಕೆ.ಎಚ್. ಪಾಟೀಲ ಅವರು ಹೊಂದಿದ ಅಪಾರ ಗೌರವ ಮತ್ತು ಅಭಿಮಾನದ ಕುರಿತು ಮಾತನಾಡಿದರು. ವಿಶೇಷ ಆಹ್ವಾನಿತರಾದ ಸಾಹಿತಿ ಹಾಗೂ ಆಧ್ಯಾತ್ಮ ಚಿಂತಕ ಜೆ.ಕೆ. ಜಮಾದಾರ ಪುಸ್ತಕ ವಿಶ್ಲೇಷಿಸಿ ಮಾತನಾಡಿದರು.ಡಾ. ಜಯಶ್ರೀ ಹೊಸಮನಿ ವೇಮನರ ಸಹಕಾರ, ಸಹಬಾಳ್ವೆಗೆ ಪೂರಕವಾದ ಮೌಲ್ಯಯುತವಾದ ವಿಚಾರಗಳನ್ನು ತಿಳಿಸಿದರು. ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಎ.ಎನ್. ನಾಗರಹಳ್ಳಿ ವೇಮನರ ವ್ಯಕ್ತಿತ್ವ ಮತ್ತು ವಿಚಾರಧಾರೆಗಳನ್ನು ಕುರಿತು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಎಂ. ಮೂಲಿಮನಿ ವೇಮನರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಲು ತಿಳಿಸಿದರು.
ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ಚೇರ್‌ಮನ್ ಡಾ. ಎಸ್.ಆರ್. ನಾಗನೂರ, ರಮೇಶ ಜಂಗಲ್, ರಘು ಸಾಹುಕಾರ, ವಿ.ಬಿ. ತುಳಸಿಗೇರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಗುರಣ್ಣ ಬಳಗಾನೂರ, ಬಿ.ಬಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ವೈಷ್ಣವಿ ರಾಠೋಡ ಪ್ರಾರ್ಥಿಸಿದರು. ಮಹಾಯೋಗಿ ವೇಮನ ಪೀಠ, ಕ.ವಿ.ವಿ. ಧಾರವಾಡ ಸಂಯೋಜಕ ಡಾ. ಎಚ್.ಬಿ. ನೀಲಗುಂದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಂ.ಬಿ. ಮಡ್ಡಿ, ಎಂ.ಡಿ. ಮಾದರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.