ನವಲಗುಂದ:

ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿಗೆ ಕೇಂದ್ರ ಬದ್ಧವಾಗಿದೆ. 15 ದಿನದೊಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ವಿಶೇಷ ಸಭೆ ನಡೆಸಲಾಗುವುದು. ಅನುಮತಿ ಪಡೆಯಲು ಪರಿಹಾರ ಮಾರ್ಗ ಕಂಡುಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾನುವಾರ ತಮ್ಮನ್ನು ಭೇಟಿ ಮಾಡಿದ ಮಲಪ್ರಭಾ-ಮಹದಾಯಿ, ಕಳಸಾ-ಬಂಡೂರಿ ಕೇಂದ್ರ ಸಮಿತಿಯ ಪ್ರತಿನಿಧಿಗಳ ನಿಯೋಗದ ಮನವಿ ಸ್ವೀಕರಿಸಿ ಮಾತನಾಡಿದರು.

ಕಳಸಾ ಬಂಡೂರಿ ಯೋಜನೆ ಕುರಿತು ವನ್ಯಜೀವಿ ಮಂಡಳಿ ಪರವಾನಗಿ ಪಡೆಯುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ನಿಯೋಗಕ್ಕೆ ತಿಳಿಸಿದರು.

ಇದೆ ವೇಳೆ ಸಿಬಿಲ್ ಕಾರಣದಿಂದ ಸಾಲ ನಿರಾಕರಣೆ ಆಗುತ್ತಿರುವುದನ್ನು ನಿವಾರಿಸಿ, ರೈತರಿಗೆ ಸಾಲ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರ ನಿಯೋಗ ಜೋಶಿ ಅವರಲ್ಲಿ ಮನವಿ ಮಾಡಿತು.


ಏಕ ತಿರುವಳಿ ಸಾಲ ತೀರಿಸಿದ ರೈತರಿಗೆ ಬ್ಯಾಂಕ್‌ಗಳಿಂದ ಮರಳಿ ಸಾಲ ಕೊಡಿಸುವ ವ್ಯವಸ್ಥೆ ಕುರಿತು ಕೊಡಲೇ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರಿಗೆ ದೂರವಾಣಿ ಕರೆ ಮಾಡಿ ಸೂಚನೆ ನೀಡಿದರು.

ಈ ಸಂದರ್ಭ ಶಾಸಕರಾದ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೆ, ಶಿವಣ್ಣ ಹುಬ್ಬಳ್ಳಿ, ಸುಭಾಸ ಚಂದ್ರಗೌಡ ಪಾಟೀಲ್, ರವಿ ತೋಟದ, ಫಕ್ಕೀರಗೌಡ ಬಸನಗೌಡ್ರ, ಸಂಗಪ್ಪ ನೀಡುವಣಿ, ಮುರಿಗೆಪ್ಪ ಪಲ್ಲೇದ, ಶಿವನಗೌಡ ಲಕ್ಷನಗೌಡ್ರ, ಸೊರಟೂರು ಇತರರು ಉಪಸ್ಥಿತರಿದ್ದರು