ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಮಾಹೆಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ವತಿಯಿಂದ ಅ.7ರಿಂದ 12ರ ವರೆಗೆ ಮಾನಸಿಕ ಆರೋಗ್ಯ ಜಾಗೃತಿ ವಾರವನ್ನು ಆಚರಿಸಲಾಗುತ್ತಿದೆ. ಈ ವರ್ಷ ‘ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ’ ಎಂಬ ಧ್ಯೇಯವಾಕ್ಯದಡಿ ಈ ವಾರ ಆಚರಣೆ ನಡೆಯಲಿದೆ ಎಂದು ಮಾಹೆಯ ಆರೋಗ್ಯ ವಿಜ್ಞಾನಗಳ ಸಹಉಪಕುಲಪತಿ ಡಾ. ಶರತ್ ರಾವ್ ಹೇಳಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೃತ್ತಿ ಪರಿಸರದಲ್ಲಿ ಉತ್ತಮ ಮಾನಸಿಕ ಆರೋಗ್ಯವು ಹೆಚ್ಚು ಅಗತ್ಯವಿರುವುದರಿಂದ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಒಳಗೊಂಡಂತೆ ಇಡೀ ಮಾಹೆಯ ಸಮುದಾಯಕ್ಕೆ ಅನುಕೂಲವಾಗುವಂತೆ ಈ ಸಾಪ್ತಾಹವನ್ನು ವಿನ್ಯಾಸಗೊಳಿಸಲಾಗಿದೆ. ಇದು ಒಟ್ಟಾರೆ ಕೆಲಸದ ಉತ್ಪಾದಕತೆ ಮತ್ತು ತೃಪ್ತಿಯನ್ನು ಹೆಚ್ಚಿಸುತ್ತದೆ ಎಂದರು.ಈ ಸಪ್ತಾಹದ ಅಂಗವಾಗಿ ಅ.10ರಂದು ಸಂಜೆ 4 ಗಂಟೆಗೆ ‘ಮಾನಸಿಕ ಆರೋಗ್ಯಕ್ಕಾಗಿ ಮ್ಯಾರಥಾನ್’ ಅನ್ನು ಆಯೋಜಿಸಲಾಗಿದೆ. 11ರಂದು ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಾಗಾರವನ್ನು ನಡೆಸಲಾಗುವುದು, ಅದರಲ್ಲಿ ತಜ್ಞರು ಕೆಲಸದ ಸ್ಥಳದಲ್ಲಿ ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸುವ ಪ್ರಾಯೋಗಿಕ ಸಾಧನಗಳು ಮತ್ತು ತಂತ್ರಗಳನ್ನು ಒದಗಿಸುತ್ತಾರೆ ಎಂದು ಹೇಳಿದರು.ಮಾಹೆಯ ಉಪಕುಲಪತಿ ಲೆಜ (ಡಾ.) ಎಂ.ಡಿ. ವೆಂಕಟೇಶ್ ಮಾತನಾಡಿ, ಮಾಹೆಯ ಎಲ್ಲಾ ವಿಭಾಗಗಳಲ್ಲಿ, ವಿಶೇಷವಾಗಿ ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಆರೋಗ್ಯಕರ ಕೆಲಸಕ್ಕೆ ಆರೋಗ್ಯಕರ ಮನಸ್ಸು ಅತ್ಯಗತ್ಯ. ಇದು ನಿಸ್ಸಂದೇಹವಾಗಿ ಉತ್ತಮ ಶೈಕ್ಷಣಿಕ ಮತ್ತು ವೃತ್ತಿಪರ ಫಲಿತಾಂಶಗಳಿಗೆ ಕಾರಣವಾಗುತ್ತಿದೆ ಎಂದರು.ಮಾಹೆ ಮಣಿಪಾಲದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ರವಿರಾಜ ಎನ್.ಎಸ್., ಸರಸ್ವತಿ ಕೆ ಭಟ್ ನಿರ್ದೇಶಕಿ ಹಣಕಾಸು, ಮಾಹೆ ಮಣಿಪಾಲ ಇವರು ಮಾನಸಿಕ ಆರೋಗ್ಯ ಜಾಗೃತಿ ಸಪ್ತಾಹಕ್ಕೆ ಶುಭ ಹಾರೈಸಿದರು.ಮಾಹೆ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ನಿರ್ದೇಶಕಿ ಡಾ. ಗೀತಾ ಮಯ್ಯ ಸ್ವಾಗತಿಸಿದರು, ಶೈಕ್ಷಣಿಕ ಉಪನಿರ್ದೇಶಕ ಡಾ ರಾಘವೇಂದ್ರ, ವಿದ್ಯಾರ್ಥಿ ವ್ಯವಹಾರಗಳ ಉಪನಿರ್ದೇಶಕರುಗಳಾದ ಪ್ರೊ.ರೋಶನ್ ಡೇವಿಡ್ ಜಾತಣ್ಣ, ಡಾ.ರಶ್ಮಿ ಯೋಗೀಶ್ ಪೈ ಉಪಸ್ಥಿತರಿದ್ದರು. ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ಉಪನಿರ್ದೇಶಕ ಡಾ.ಅರವಿಂದ ಪಾಂಡೆ ವಂದಿಸಿದರು.