ಸಾರಾಂಶ
ಈ ಚಿತ್ರೋತ್ಸವ ಜು. 27 ಮತ್ತು 28 ರಂದು ನಡೆಯಲಿದೆ. ಈ ಚಿತ್ರೋತ್ಸವಕ್ಕೆ ಸುಮಾರು 40 ದೇಶಗಳಿಂದ ಪ್ರವೇಶಗಳು ಬಂದಿವೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ್ ಮಾಹೆ ವಿವಿಯ ಅಂತರ್‌ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರ (ಸಿಐಎಸ್‌ಡಿ)ವು ಸಿದ್ಧಪಡಿಸಿದ ಕರಾವಳಿ ಕರ್ನಾಟಕದ ಪಾರಂಪರಿಕ ಕಲೆ ಯಕ್ಷಗಾನದ ಕುರಿತ ಸಾಕ್ಷ್ಯಚಿತ್ರವು ಯುಎಸ್‌ಎಯ ಲಾಸ್‌ಏಂಜಲೀಸ್‌ನ ಪ್ರತಿಷ್ಠಿತ ವರ್ಲ್ಡ್ ಕಲ್ಚರ್ ಪಿಲ್ಮ್ ಫೆಸ್ಟಿವಲ್-2024 ರ ಸೆಮಿ ಫೈನಲ್ ಗೆ ಆಯ್ಕೆಯಾಗಿದೆ.ಈ ಚಿತ್ರೋತ್ಸವ ಜು. 27 ಮತ್ತು 28 ರಂದು ನಡೆಯಲಿದೆ. ಈ ಚಿತ್ರೋತ್ಸವಕ್ಕೆ ಸುಮಾರು 40 ದೇಶಗಳಿಂದ ಪ್ರವೇಶಗಳು ಬಂದಿವೆ.
ಸಿಐಎಸ್‌ಡಿಯು ಈ ಸಾಕ್ಷ್ಯಚಿತ್ರವನ್ನು ‘ತುಳುನಾಡಿನ ಸಜೀವ ಸಂಸ್ಕೃತಿಗಳು : ಭಾರತದ ಅರಿವು’ ಯೋಜನೆಯ ಭಾಗವಾಗಿ ತಯಾರಿಸಲಾಗಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಪ್ರಾದೇಶಿಕ ಕಲೆಯಾದ ಯಕ್ಷಗಾನದ ಭವ್ಯ ಪರಂಪರೆಯನ್ನು ಎತ್ತಿಹಿಡಿಯುವ ಈ ಸಾಕ್ಷ್ಯಚಿತ್ರವು ಈಗಾಗಲೇ ವಿವಿಧ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ 11 ಭಾರಿ ಪ್ರದರ್ಶನಗೊಂಡಿರುವುದು ಗಮನಾರ್ಹವಾಗಿದೆ.ಈ ಸಾಕ್ಷ್ಯಚಿತ್ರವನ್ನು ಡಾ. ಪ್ರವೀಣ್ ಶೆಟ್ಟಿ ಮತ್ತು ನಿತೇಶ್ ಅಂಚನ್ ನಿರ್ದೇಶಿಸಿದ್ದಾರೆ. ಈ ಹಿಂದೆ ವಾರಾಣಾಸಿಯ ಸಾಂಸ್ಕೃತಿಕ ಪ್ರವಾಸೋದ್ಯಮದ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಈ ಚಿತ್ರವು ತೀರ್ಪುಗಾರರ ಪ್ರಶಸ್ತಿ [ಜೂರಿ ಅವಾರ್ಡ್] ಪಡೆದಿರುವುದು ಮತ್ತು ಹೊಸದಿಲ್ಲಿಯ ಯುಜಿಸಿಯ ಕನ್ಸೋರ್ಟಿಯಂ ಫಾರ್ ಎಜುಕೇಶನಲ್ ಕಮ್ಯುನಿಕೇಶನ್ [ಸಿಇಸಿ]ಯಲ್ಲಿ ಅತ್ಯುತ್ತಮ ಚಿತ್ರಕಥೆ [ಸ್ಕ್ರಿಪ್ಟ್ ರೈಟಿಂಗ್] ಬಹುಮಾನ ಗಳಿಸಿದೆ.
ಈ ತಂಡವನ್ನು ಅಭಿನಂದಿಸಿರುವ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ‘ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ದೊರೆತ ಮನ್ನಣೆಯು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ಬೆಳೆಸುವ ಮಾಹೆಯ ಬದ್ಧತೆಗೆ ದೊರೆತ ಮಾನ್ಯತೆಯೆಂದು ಭಾವಿಸುತ್ತೇವೆ. ಈ ಸಾಕ್ಷ್ಯಚಿತ್ರವು ಪಾರಂಪರಿಕ ಕಲೆಯೊಂದರ ಅಮೂಲ್ಯ ದಾಖಲಾತಿಯಷ್ಟೇ ಅಲ್ಲ, ಮಾಹೆಯಲ್ಲಿರುವ ಸಂಶೋಧನ ತಂಡದ ಸಮೂಹ ಪ್ರಯತ್ನಕ್ಕೆ ಸಾಕ್ಷಿಯಾಗಿದೆ’ ಎಂದಿದ್ದಾರೆ.