ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಪೂಜೆಯಲ್ಲಿ ಪಾಲ್ಗೊಂಡಿದ್ದ ಕಾರಣ ಶ್ರೀಕಂಠ ಆನೆಯು ತಾಲೀಮಿನಲ್ಲಿ ಪಾಲ್ಗೊಂಡಿರಲಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಗಜಪಡೆಗೆ ಮರಳು ಮೂಟೆ ಹೊರಿಸುವ ತಾಲೀಮು ಭಾನುವಾರದಿಂದ ಆರಂಭಿಸಲಾಗಿದ್ದು, ಮೊದಲ ದಿನ ಮಹೇಂದ್ರ ಆನೆ ಮೈಮೇಲೆ ಸುಮಾರು 600 ಕೆ.ಜಿ ಬಾರ ಹೊರಿಸುವ ಮೂಲಕ ತಾಲೀಮು ನಡೆಸಲಾಯಿತು.

ಮರಳು ಮೂಟೆ ಭಾರ ಹೊತ್ತ ಮಹೇಂದ್ರ ಆನೆ ವಿಶ್ವಾಸದ ಹೆಜ್ಜೆ ಹಾಕಿತು. ಮಹೇಂದ್ರನನ್ನು ಹಿಂಬಾಲಿಸಿಕೊಂಡು ಕಾವೇರಿ, ಲಕ್ಷ್ಮೀ, ಧನಂಜಯ, ಏಕಲವ್ಯ, ಪ್ರಶಾಂತ, ಗೋಪಿ ಮತ್ತು ಶ್ರೀರಾಮ ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದವು.

ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಪೂಜೆಯಲ್ಲಿ ಪಾಲ್ಗೊಂಡಿದ್ದ ಕಾರಣ ಶ್ರೀಕಂಠ ಆನೆಯು ತಾಲೀಮಿನಲ್ಲಿ ಪಾಲ್ಗೊಂಡಿರಲಿಲ್ಲ.

ಮಹೇಂದ್ರ ಆನೆಗೆ ಬಾರ ಹೊರಿಸುವ ತಾಲೀಮಿಗೂ ಮುನ್ನ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಸ್ಥಾನದ ಮುಂಭಾಗ ಅರ್ಚಕ ಎಸ್.ವಿ. ಪ್ರಹ್ಲಾದ್‌ ರಾವ್ ಅವರು, ಮಹೇಂದ್ರ, ಕಾವೇರಿ ಮತ್ತು ಲಕ್ಷ್ಮೀ ಆನೆಗೆ ಕಾಲು ತೊಳೆದು ಅರಿಶಿನಿ, ಕುಂಕುಮ, ಗಂಧ ಇರಿಸಿ ಪೂಜಿಸಿದರು. ಬಳಿಕ ಎಲ್ಲಾ ಆನೆಗಳಿಗೂ ಪಂಚಫಲ ನೀಡಿ, ದೃಷ್ಠಿ ತೆಗೆದು ಆರತಿ ಬೆಳಗಿದರು.

ಪೂಜಾ ಕಾರ್ಯ ನಡೆದ ಬಳಿಕ ಮಹೇಂದ್ರ ಆನೆ ಮೇಲೆ ಗಾದಿ, ನಮ್ದಾ ಕಟ್ಟಲಾಯಿತು. 200 ಕೆ.ಜಿ. ತೂಕದ ನಮ್ದಾ, ಗಾದಿಯನ್ನು ಮಹೇಂದ್ರ ಮೇಲೆ ಬಿಗಿಯಾಗಿ ಕಟ್ಟಿದ ಬಳಿಕ ಸುಮಾರು 400 ಕೆ.ಜಿ ತೂಕದ ಮರಳು ಮೂಟೆ ಇರಿಸಿ, ಕುಮ್ಕಿ ಆನೆಯೊಂದಿಗೆ ಜಂಬೂಸವಾರಿ ದಿನ ಚಿನ್ನದ ಅಂಬಾರಿ ಕಟ್ಟುವ ಕ್ರೇನ್ ಇರುವ ಸ್ಥಳಕ್ಕೆ ಕರೆದೊಯ್ದು ಸ್ಥಳ ಪರಿಚಯಿಸಲಾಯಿತು. ನಂತರ ಮೆರವಣಿಗೆ ಸಾಗುವ ಮಾರ್ಗದಲ್ಲಿ ಕರೆ ತರಲಾಯಿತು.

ಅರಮನೆ ಮುಂಭಾಗದಿಂದ ಹೊರಟ ಮಹೇಂದ್ರ ನೇತೃತ್ವದ ಗಜಪಡೆಯು ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದ ವೃತ್ತ, ಆರ್ ಎಂಸಿ ವೃತ್ತ, ಹೈವೇ ವೃತ್ತದ ಮೂಲಕ ಬನ್ನಿಮಂಟಪದ ಪಂಜಿನ ಕವಾಯತು ಮೈದಾನವನ್ನು ತಲುಪಿತು. ಕೆಲಕಾಲ ವಿಶ್ರಾಂತಿ ಬಳಿಕ ಗಜಪಡೆಯು ಬನ್ನಿಮಂಟಪದಿಂದ ಅರಮನೆಗೆ ವಾಪಸ್ ಆದವು.

ಈ ವೇಳೆ ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ, ಆರ್ ಎಫ್ಒ ಯಶ್ಮಾ ಮಾಚಮ್ಮ, ಪಶುವೈದ್ಯ ಡಾ. ಆದರ್ಶ್ ಮೊದಲಾದವರು ಇದ್ದರು.

----

ಬಾಕ್ಸ್... ಗಜಪಡೆಗೆ ನೋಡಲು ಜನಸ್ತೋಮ- ಸಂಚಾರ ಅಸ್ತವ್ಯಸ್ತ

ಫೋಟೋ- 6ಎಂವೈಎಸ್17, 18

ದಸರಾ ಆನೆಗಳನ್ನು ವೀಕ್ಷಿಸಿಲು ನೆರೆದಿದ್ದ ಸಾವಿರಾರು ಜನಸ್ತೋಮ.

----

ದಸರಾ ಜಂಬೂಸವಾರಿ ಮಾರ್ಗದಲ್ಲಿ ದಸರಾ ಆನೆಗಳ ತಾಲೀಮು ವೀಕ್ಷಿಸಲು ಭಾನುವಾರ ಸಂಜೆ ಸಾವಿರಾರು ಜನ ನೆರೆದಿದ್ದರು.

ಮೈಸೂರು ಅರಮನೆ ಆವರಣದಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಆಗಮಿಸುತ್ತಿದ್ದಂತೆ ಸಾವಿರಾರು ಜನ ಆನೆಗಳನ್ನು ನೋಡಲು ಮುಗಿಬಿದ್ದರು. ತಮ್ಮ ಮೊಬೈಲ್, ಕ್ಯಾಮರಾಗಳಲ್ಲಿ ಆನೆಗಳ ಭಾವಚಿತ್ರವನ್ನು ಸೆರೆ ಹಿಡಿದರು.

ಭಾನುವಾರ ರಜೆ ಇದ್ದ ಕಾರಣ ಸಾವಿರಾರು ಜನ ಚಾಮರಾಜ ವೃತ್ತ, ಪುರಭವನ, ಕೆ.ಆರ್. ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ಸಯ್ಯಾಜಿರಾವ್ ರಸ್ತೆಯಲ್ಲಿ ನೆರೆದಿದ್ದರು. ದಾರಿಯುದ್ದಕೂ ಸಾವಿರಾರು ಜನ ರಸ್ತೆ ಬದಿಯಲ್ಲಿ ನಿಂತು ಆನೆಗಳ ಫೋಟೋ ಕ್ಲಿಕ್ಕಿಸಿಕೊಂಡರು.

ಇದರಿಂದಾಗಿ ಚಾಮರಾಜ ವೃತ್ತ, ಪುರಭವನ, ಆಲ್ಬರ್ಟ್ ವಿಕ್ಟರ್ ರಸ್ತೆ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಇದರಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.