ಸಾರಾಂಶ
ಮಣಿಪಾಲ್ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಮಣಿಪಾಲಭಾರತೀಯ ಆರೋಗ್ಯ ಕ್ಷೇತ್ರದಲ್ಲಿಯೇ ಒಂದು ಹೆಗ್ಗುರುತಾಗಲಿರುವ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಇಲ್ಲಿನ ಹಾವಂಜೆಯಲ್ಲಿ ‘ಮಣಿಪಾಲ್ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್’ (ಎಂಎಚ್‌ಆರ್‌ಸಿ)ಗೆ ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟೀಸ್ ಸೈಯದ್ ಅಬ್ದುಲ್ ನಜೀರ್ ಬುಧವಾರ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಮಾಹೆಯು ಎಂ.ಎಚ್.ಆರ್.ಸಿ. ಯೋಜನೆಯ ಮೂಲಕ, ಗಂಭೀರ ಮತ್ತು ಜೀವನದ ಕೊನೆಯ ಹಂತದಲ್ಲಿರುವ ರೋಗಿಗಳ ಮತ್ತು ಅವರ ಕುಟುಂಬದವರ ನೋವು ನಿವಾರಿಸುವ ಮಾನವೀಯತೆಯ ಕೆಲಸವನ್ನು ಒಂದು ಮೂಲಭೂತ ಮಾನವ ಹಕ್ಕು ಎನ್ನುವಂತೆ ಪರಿಗಣಿಸಿರುವುದು ಶ್ಲಾಘನೀಯ ಎಂದರು.2022ರಲ್ಲಿ 14 ಲಕ್ಷ ಹೊಸ ಕ್ಯಾನ್ಸರ್ ರೋಗಿಗಳು ಪತ್ತೆಯಾಗಿದ್ದರು, ಅವರಲ್ಲಿ ಶೇ.10 ರೋಗಿಗಳಿಗೆ ಮಾತ್ರ ಆರೈಕೆ ಪಡೆಯುವ ಆರ್ಥಿಕ ಶಕ್ತಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಎಂ.ಎಚ್.ಆರ್.ಸಿ. ಒಂದು ಆಶಾದಾಯಕ ಹೆಜ್ಜೆಯಾಗಿದೆ. ಇದು ರೋಗಿಗಳ ಕುಟುಂಬಗಳ ಮೇಲಿನ ಭಾವನಾತ್ಮಕ ಮತ್ತು ಆರ್ಥಿಕ ಸಂಕಷ್ಟವನ್ನು ಬಹಳವಾಗಿ ಕಡಿಮೆ ಮಾಡುತ್ತದೆ ಎಂದ ರಾಜ್ಯಪಾಲರು, ಮಾನವ ಸೇವೆ ಮಾಧವ ಸೇವೆ ಎನ್ನುವುದನ್ನು ನೆನಪಿಸುವ ಈ ಕೇಂದ್ರ ದೇಶಕ್ಕೆ ಒಂದು ಮಾದರಿ ಯೋಜನೆಯಾಗಿದೆ ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ಅಭಯಚಂದ್ರ ಜೈನ್ ಭಾಗವಹಿಸಿದ್ದರು.ಮಾಹೆ ಟ್ರಸ್ಟ್‌ನ ಟ್ರಸ್ಟಿ ವಾಸಂತಿ ಆರ್. ಪೈ, ಅಧ್ಯಕ್ಷ ಡಾ. ರಂಜನ್ ಪೈ, ಟಿ.ಎಂ.ಎ.ಪೈ ಫೌಂಡೇಶನ್ ಅಧ್ಯಕ್ಷ ಅಶೋಕ್ ಪೈ, ಮಾಹೆಯ ಸಹಕುಲಪತಿ ಡಾ.ಎಚ್.ಎಸ್. ಬಲ್ಲಾಳ್, ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್ ವೇದಿಕೆಯಲ್ಲಿದ್ದರು.ಮಾಹೆ ಸಹಉಪಕುಲಪತಿಗಳಾದ ಡಾ.ನಾರಾಯಣ ಸಭಾಹಿತ್, ಡಾ.ಶರತ್ ಕೆ. ರಾವ್, ಡಾ.ಮಧು ವೀರರಾಘವನ್, ಡಾ.ದಿಲೀಪ್ ಜಿ. ನಾಯ್ಕ್, ಮುಖ್ಯ ನಿರ್ವಹಣಾಧಿಕಾರಿಗಳಾದ ಡಾ. ರವಿರಾಜ ಎನ್.ಎಸ್. ಮತ್ತು ಡಾ.ಆನಂದ್ ವೇಣುಗೋಪಾಲ್, ಕುಲಸಚಿವ ಡಾ.ಪಿ. ಗಿರಿಧರ್ ಕಿಣಿ, ಕೆಎಂಸಿ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಪ್ಯಾಲಿಯೇಟಿವ್ ಮೆಡಿಸಿನ್ ಮತ್ತು ಸಪೋರ್ಟ್ ಕೇರ್ ವಿಭಾಗದ ಮುಖ್ಯಸ್ಥ ಡಾ.ನವೀನ್ ಸಾಲಿನ್ಸ್ ಉಪಸ್ಥಿತರಿದ್ದರು. -------------------
12 ಎಕ್ರೆ ಹಸಿರು ಕ್ಯಾಂಪಸ್‌ನಲ್ಲಿ ಉಚಿತ ಆರೈಕೆಮಣಿಪಾಲದ ಹೊರಭಾಗದಲ್ಲಿ, ಸ್ವರ್ಣಾ ನದಿಯ ದಡದಲ್ಲಿ 12 ಎಕರೆ ಪ್ರದೇಶದಲ್ಲಿ ಎಂಎಚ್‌ಆರ್‌ಸಿ ನಿರ್ಮಾಣಗೊಂಡಿದೆ. ಗುಣವಾಗದ ಕಾಯಿಲೆಗಳಿಂದ ಜೀವನದ ಕೊನೆಯ ದಿನಗಳಲ್ಲಿರುವ ರೋಗಿಗಳಿಗೆ ಸಮಗ್ರ ರೋಗಿ ಕೇಂದ್ರಿತ ಆರೈಕೆ ನೀಡುವ ಉದ್ದೇಶದಿಂದ ನಿರ್ಮಾಣವಾಗಿರುವ ಈ ಕೇಂದ್ರದಲ್ಲಿ ಸಂಪೂರ್ಣ ಉಚಿತ ಸೇವೆ ಲಭ್ಯವಿದೆ.
ಪ್ರಥಮ ಹಂತದಲ್ಲಿ 35 ಹಾಸಿಗೆಗಳೊಂದಿಗೆ ಪ್ರಾಂಭವಾಗಿ, ನಂತರ 100 ಹಾಸಿಗೆಗಳಿಗೆ ವಿಸ್ತಾರಗೊಳ್ಳಲಿದೆ. ಮೆಡಿಕಲ್ ಕಾಲೇಜ್ ಮತ್ತು ಟೆರಿಟರಿ ಕೇರ್ ಹಾಸ್ಪಿಟಲ್ ಜೊತೆ ಸಂಯೋಜಿತವಾಗಿರುವ ದೊಡ್ಡ ಸೌಲಭ್ಯದ ಭಾರತದ ಏಕೈಕ ಹಾಸ್ಪೈಸ್ ಕೇಂದ್ರ ಇದಾಗಿದೆ.