ಮಹೇಶ್‌ಗೆ ರೇಣು ಟೀಕಿಸುವ ನೈತಿಕತೆ ಇಲ್ಲ:ರಾಜು ವೀರಣ್ಣ

| Published : Jan 26 2025, 01:30 AM IST

ಸಾರಾಂಶ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ವೇದಿಕೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್‌ಗೆ ಜೈ, ಕಾಂಗ್ರೆಸ್ಸಿಗೆ ಜೈಕಾರ ಹಾಕುತ್ತ, ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದ್ದ ಎಂ.ಆರ್.ಮಹೇಶ್‌ಗೆ ಬಿಜೆಪಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆ ಇಲ್ಲ ಎಂದು ಬಿಜೆಪಿ ಯುವ ಮುಖಂಡರಾದ ರಾಜು ವೀರಣ್ಣ, ಪ್ರವೀಣ ಜಾಧವ್ ತಿರುಗೇಟು ನೀಡಿದರು.

ಹೊನ್ನಾಳಿ ಎಂ.ಆರ್.ಮಹೇಶ, ಚನ್ನಗಿರಿ ನವೀನ್‌ಗೆ ಇತರರ ಎಚ್ಚರಿಕೆ । ಕಾಂಗ್ರೆಸ್‌ ಪರ ಜೈಕಾರಕ್ಕೆ ಆಕ್ರೋಶ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ವೇದಿಕೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್‌ಗೆ ಜೈ, ಕಾಂಗ್ರೆಸ್ಸಿಗೆ ಜೈಕಾರ ಹಾಕುತ್ತ, ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದ್ದ ಎಂ.ಆರ್.ಮಹೇಶ್‌ಗೆ ಬಿಜೆಪಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆ ಇಲ್ಲ ಎಂದು ಬಿಜೆಪಿ ಯುವ ಮುಖಂಡರಾದ ರಾಜು ವೀರಣ್ಣ, ಪ್ರವೀಣ ಜಾಧವ್ ತಿರುಗೇಟು ನೀಡಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊನ್ನಾಳಿಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕೃಪಾಕಟಾಕ್ಷದಿಂದಲೇ ಬಿಜೆಪಿಗೆ ಬಂದು, ಜಿಪಂ ಸದಸ್ಯರಾದ ಎಂ.ಆರ್.ಮಹೇಶ ಅದೇ ಮಾಜಿ ಸಚಿವ ರೇಣುಕಾಚಾರ್ಯ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ, ಅಷ್ಟಕ್ಕೂ ಹೊನ್ನಾಳಿಯಲಲಿ ಪಕ್ಷದ ಸದಸ್ಯತ್ವ ಪಡೆದಿದ್ದೀಯಾ? ಎಷ್ಟು ಜನರ ಸಕ್ರಿಯ ಸದಸ್ಯತ್ವ ಮಾಡಿಸಿದ್ದೀಯಾ ಎಂದರು.

ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ಎಂ.ಆರ್.ಮಹೇಶ ಮಾಡಿದ್ದ ಅವ್ಯವಹಾರಗಳು, ಬ್ಲಾಕ್ ಮೇಲ್ ಎಲ್ಲವೂ ಕ್ಷೇತ್ರದ ಜನರಿಗೆ ಗೊತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿ, ಈಗ ಸಜ್ಜನರಂತೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಪಕ್ಷ ವಿರೋಧಿ ಕೆಲಸ ಮಾಡಿದ ನಿಮಗೆ ನಮ್ಮ ಪಕ್ಷದ ನಾಯಕರಾದ ರೇಣುಕಾಚಾರ್ಯ ಬಗ್ಗೆ ಮಾತನಾಡಲು ಯಾವ ಯೋಗ್ಯತೆ ಇದೆ ಎಂದು ಪ್ರಶ್ನಿಸಿದರು.

ರೇಣುಕಾಚಾರ್ಯ ಉಪಕಾರದಿಂದಲೇ ಎಂ.ಆರ್.ಮಹೇಶ ಜಿಪಂ ಸದಸ್ಯ, ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದನ್ನು ಮರೆಯಬಾರದು. ಈಗ ಅದೇ ರೇಣುಕಾಚಾರ್ಯ ವಿರುದ್ಧ ಹೇಳಿಕೆ ನೀಡುವಮೂಲಕ ತಮ್ಮ ಯೋಗ್ಯತೆ ಪ್ರದರ್ಶಿಸುತ್ತಿದ್ದಾರೆ. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಜನರಿಗೆ, ಮತದಾರರಿಗೆ ಮಾಜಿ ಸಚಿವ ರೇಣುಕಾಚಾರ್ಯ ಮಾಡಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಸಂಪೂರ್ಣ ಅರಿವಿದೆ ಎಂದು ತಿಳಿಸಿದರು.

ಚನ್ನಗಿರಿ ಕ್ಷೇತ್ರದ ಮುಖಂಡ ಮಾಡಾಳ್ ಮಲ್ಲಿಕಾರ್ಜುನ, ಮಾಜಿ ಶಾಸಕ ಮಾಡಾಳ ವಿರುಪಾಕ್ಷಪ್ಪ ಬಗ್ಗೆ ನವೀನ ಹಗುರವಾಗಿ ಮಾತನಾಡಿದ್ದಾರೆ. ಚನ್ನಗಿರಿಯಲ್ಲಿ ಮಲ್ಲಿಕಾರ್ಜುನರ ಸಂಘಟನೆ, ಸಾಮರ್ಥ್ಯದ ಬಗ್ಗೆ ಸಂಪೂರ್ಣ ಅರಿವಿದ್ದರೂ ಬಾಯಿಗೆ ಬಂದಂತೆಲ್ಲಾ ಮಾತನಾಡುತ್ತಿರುವುದು ಸರಿಯಲ್ಲ. ಮಲ್ಲಿಕಾರ್ಜುನರಿಗೆ ರಾಜಕೀಯವಾಗಿ ಅಂಬೆಗಾಲಿಡುತ್ತಿದ್ದೀರೆಂದು ಟೀಕಿಸಿರುವ ನವೀನ್ ರಾಜಕೀಯದಲ್ಲೇನು ಹೆಮ್ಮರವೇ ಎಂದು ಅವರು ಕಿಡಿಕಾರಿದರು.

ಇನ್ನೂ ರಾಜಕೀಯ ಜನ್ಮವನ್ನೇ ಪಡೆಯದ ನವೀನ್‌ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾರ ಕುತಂತ್ರದಿಂದ ಬಿಜೆಪಿಗೆ ಹಿನ್ನಡೆಯಾಯಿತು ಎಂಬ ಸಂಗತಿ ಚನ್ನಗಿರಿ, ದಾವಣಗೆರೆ ಜನತೆಗೂ ಗೊತ್ತಿದೆ. ರೇಣುಕಾಚಾರ್ಯ, ಮಾಡಾಳ್ ವಿರುಪಾಕ್ಷಪ್ಪ, ಮಾಡಾಳ್ ಮಲ್ಲಿಕಾರ್ಜುನರ ಸಂಘಟನೆ, ಸಾಮರ್ಥ್ಯದ ಬಗ್ಗೆ ಗೊತ್ತಿದ್ದರೂ, ಇನ್ನೊಮ್ಮೆ ಹಗುರವಾಗಿ ಮಾತನಾಡಿದರೆ ಸಹಿಸುವುದಿಲ್ಲ ಎಂದು ರಾಜು ವೀರಣ್ಣ ಎಚ್ಚರಿಸಿದರು.

ಪಕ್ಷದ ಯುವ ಮುಖಂಡರಾದ ಪ್ರವೀಣ ಜಾಧವ್, ಪಂಜು ಪೈಲ್ವಾನ್, ಚಂದ್ರು ಪಾಟೀಲ, ಜಯರುದ್ರೇಶ, ಕೆ.ಎನ್.ವೆಂಕಟೇಶ, ಧರ್ಮರಾಜ, ದಯಾನಂದ ಇತರರು ಇದ್ದರು.