ವಿದೇಶದಲ್ಲಿ ಹರಡಿದ ಮಹೇಶ ಕಲಾಕೃತಿ ಕಂಪು

| Published : May 24 2024, 12:51 AM IST

ವಿದೇಶದಲ್ಲಿ ಹರಡಿದ ಮಹೇಶ ಕಲಾಕೃತಿ ಕಂಪು
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಸಮೂಹ ಚಿತ್ರಕಲಾ ಪ್ರದರ್ಶನದಲ್ಲಿ ಬಾದಾಮಿ ತಾಲೂಕಿನ ಯುವ ಕಲಾವಿದ ಮಹೇಶ ಮನೋಹರ ಬಡಿಗೇರ ಅವರು ರಚಿಸಿದ ಕಲಾಕೃತಿ ಆಯ್ಕೆಯಾಗಿದೆ.

ಕನ್ನಡಪ್ರಭ ವಾರ್ತೆ ಬಾದಾಮಿ

ಮೇ 16 ರಿಂದ ಜೂ.6ರವರೆಗೆ ಅಂತಾರಾಷ್ಟ್ರೀಯ ಸಮೂಹ ಚಿತ್ರಕಲಾ ಪ್ರದರ್ಶನವನ್ನು ರಿಪಬ್ಲಿಕ್ ಡೊಮಿನಿಕನ್ ದೇಶದ ಸ್ಯಾಂಟೋ ಡೋಮಿಂಗೊ ನಗರದಲ್ಲಿ ಸೀಲೂ ಆರ್ಟ್ ಫೌಂಡೇಶನ್‌ ವತಿಯಿಂದ ಆಯೋಜಿಸಲಾಗಿದೆ. ಈ ಪ್ರದರ್ಶನಕ್ಕಾಗಿ ವಿಶ್ವದ 39 ದೇಶದ ಕಲಾವಿದರನ್ನು ಆಯ್ಕೆ ಮಾಡಿ ಅವರ ಕಲಾಕೃತಿಗಳ ಪ್ರದರ್ಶನ ನಡೆಸಲಾಗುತ್ತಿದೆ. ಇದರಲ್ಲಿ ನಾಡಿನ ಯುವ ಕಲಾವಿದ ಮಹೇಶ ಮನೋಹರ ಬಡಿಗೇರ ಅವರು ರಚಿಸಿದ ಕಲಾಕೃತಿಯು ಆಯ್ಕೆಯಾಗಿರುವುದು ನಾಡಿಗೆ ಹಾಗೂ ಕನ್ನಡ ವಿವಿ, ಹಂಪಿ ಮತ್ತು ಬಾದಾಮಿ ಕೇಂದ್ರ-ಬನಶಂಕರಿ ವಿಭಾಗಕ್ಕೆ ಹೆಮ್ಮೆ ತಂದಿದೆ.

ಕಲಾವಿದರ ಸಂಕ್ಷಿಪ್ತ ಪರಿಚಯ:ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೂದಿಹಾಳ (ಎಸ್.ಜೆ)ದಲ್ಲಿ 1996ರ ಅಕ್ಟೋಬರ್ 8ರಂದು ಮನೋಹರ ಹಾಗೂ ಶಕುಂತಲಾ ಎಂಬ ದಂಪತಿ ಎರಡನೆಯ ಮಗನಾಗಿ ಮಹೇಶ ಬಡಿಗೇರ ಅವರು ಜನಿಸಿದರು. ಪ್ರಾಥಮಿಕ ಶಿಕ್ಷಣ ತಮ್ಮ ಸ್ವಗ್ರಾಮದಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಕಾತರಕಿ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಹುಬ್ಬಳ್ಳಿಯಲ್ಲಿ ಪಡೆದರು. ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವುದರಿಂದ ಮುಂದಿನ ಶಿಕ್ಷಣವನ್ನು ಕಲಾ ಕ್ಷೇತ್ರದಲ್ಲಿ ಆರಂಭಿಸುವ ಉದ್ದೇಶದಿಂದ ಕನ್ನಡ ವಿಶ್ವವಿದ್ಯಾಲಯದ ಬಾದಾಮಿ ಕೇಂದ್ರದ-ಬನಶಂಕರಿಯಲ್ಲಿ ಬಿ.ವಿ.ಎ ಚಿತ್ರಕಲೆಗೆ ಪ್ರವೇಶ ಪಡೆದರು.

ಕಲೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ ಈ ಯುವ ಕಲಾವಿದ ಬನಶಂಕರಿ ಚಿತ್ರಕಲೆ ಕಲಾಶಾಲೆಯಲ್ಲಿ ಬಿ.ವಿ.ಎ ಸ್ನಾತಕ ಪದವಿ ಹಂತದಲ್ಲಿ ಇರುವಾಗಲೇ ಇವರು ರಚಿಸಿದ ಅನೇಕ ಕಲಾಕೃತಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಾ ಪ್ರದರ್ಶನಕ್ಕೆ ಆಯ್ಕೆಯಾಗಿ ಎಲ್ಲರ ಗಮನ ಸೆಳೆದಿವೆ. ಉನ್ನತ ಕಲಾ ಶಿಕ್ಷಣ ಪಡೆಯಲು ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗಕ್ಕೆ 2021ರಲ್ಲಿ ಪ್ರವೇಶ ಪಡೆದರು.

ಮಹೇಶ ಬಡಿಗೇರ ತಮ್ಮ ಸ್ವಂತ ಶೈಲಿಯಲ್ಲಿ ಹಲವಾರು ಕೃತಿಗಳನ್ನು ರಚಿಸಿ ಪ್ರದರ್ಶನ ಮಾಡುತ್ತ ಬಂದಿದ್ದಾರೆ. ಮುಂದೆ ಇವರ ಕಲಾಕೃತಿಗಳು ರಾಜ್ಯ ವ್ಯಾಪಿ ಮತ್ತು ದೇಶದಿಂದ ವಿದೇಶಗಳ ಗಡಿಭಾಗವನ್ನು ಸಲೀಸಾಗಿ ತಲುಪಿದವು. ಟರ್ಕಿ, ಅಮೆರಿಕ, ಮೆಕ್ಸಿಕೋ, ಉಕ್ರೇನ್, ಅರ್ಜೆಂಟೈನ್‌, ಸ್ಪೇನ್, ಬ್ರಜಿಲ್ ದೇಶಗಳಲ್ಲಿ ಕಲಾಕೃತಿಗಳು ಪ್ರದರ್ಶನಗೊಂಡು ಹಲವಾರು ಪ್ರಶಸ್ತಿ ಪಡೆದಿದ್ದಾರೆ.

ಅಲ್ಲದೆ, ವಿಶೇಷವಾಗಿ ಮಹಿಳೆಯರು ಬಳಸುವ ವ್ಯಾನಿಟಿ ಬ್ಯಾಗ್, ಟೀ-ಶರ್ಟ್ ವಸ್ತ್ರವಿನ್ಯಾಸ ಹಾಗೂ ಪುಸ್ತಕಗಳಲ್ಲಿ ಇವರ ಕಲಾಕೃತಿಗಳು ಮುದ್ರಣವಾಗಿವೆ. ಇನ್ನೊಂದು ವಿಶೇಷವೆಂದರೆ ಮೇ 10 ರಿಂದ 30ರವರೆಗೆ ಟರ್ಕಿ ದೇಶದಲ್ಲಿ ಇವರ ಗುಂಪು ಕಲಾ ಪ್ರದರ್ಶನ ನಡೆದಿರುವುದು ಹೆಮ್ಮೆಯ ಸಂಗತಿ. ಇಂತಹ ಸೃಜನಶೀಲ ಕಲಾವಿದರ ಕಲಾಕೃತಿ ರಿಪಬ್ಲಿಕ್ ಡೊಮಿನಿಕನ್ ದೇಶದಲ್ಲಿ ನಡೆಯುವ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಕೃತಿಗಳ ವಸ್ತು-ವಿಷಯ: ಸಾಮಾನ್ಯವಾಗಿ ಇವರ ಕೃತಿಯಲ್ಲಿ ನಿಸರ್ಗದಲ್ಲಿ ಕಂಡುಬರುವ ಪ್ರಾಣಿ, ಪಕ್ಷಿಗಳೇ ವಿಷಯವಸ್ತುಗಳಾಗಿವೆ. ಇವುಗಳನ್ನೇ ತಮ್ಮ ಕೃತಿಗಳಲ್ಲಿ ವಿಶಿಷ್ಟವಾದ ಶೈಲಿಯಿಂದ ನಿರೂಪಿಸುತ್ತಾರೆ. ಮಹಿಳೆ, ವನ್ಯಜೀವಿ, ಜಲ-ಚರಗಳು, ಪಕ್ಷಿಗಳು ಸಂಯೋಜನೆಯ ಜೊತೆಗೆ ಗಾಢವಾದ ವರ್ಣಗಳು ಕಂಡುಬರುತ್ತವೆ. ಇವರ ಈ ಸಾಧನೆಗೆ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ, ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಹಾಗೂ ಬಾದಾಮಿ ಕೇಂದ್ರದ ಮುಖ್ಯಸ್ಥರು, ಅಧ್ಯಾಪಕರು ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.