ಸಮೀಪದಲ್ಲಿರುವ ಕುಡ್ಲೂರು ಗ್ರಾಮದ ಆರೋಗ್ಯದೇವ ಶ್ರೀ ಮಹೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ತರೀಕೆರೆ

ಸಮೀಪದಲ್ಲಿರುವ ಕುಡ್ಲೂರು ಗ್ರಾಮದ ಆರೋಗ್ಯದೇವ ಶ್ರೀ ಮಹೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮವೆಲ್ಲ ತಳಿರು ತೋರಣಗಳಿಂದ ಅಲಂಕಾರಗೊಂಡಿದ್ದು ವಿದ್ಯುತ್ ದೀಪ ಅಲಂಕಾರ ಎಲ್ಲಾ ದೇವಾಲಯಗಳು ಜಗಮಗಿಸುವಂತಿತ್ತು.

ಜಾತ್ರಾ ಅಂಗವಾಗಿ ಸೋಮವಾರ ಸಂಜೆ ಚತ ಶ್ರೀ ವೀರಭದ್ರ ಸ್ವಾಮಿ ಉತ್ಸವ ಮೂರ್ತಿ ಭುಜಂಗ ಮೆರವಣಿಗೆ ನಡೆಸಿ ಸಂಜೆ ಶ್ರೀ ಮಹೇಶ್ವರ ಸ್ವಾಮಿ ದೇವಾಲಯದ ಸನ್ನಿಧಾನಕ್ಕೆ ತಲುಪಿತು.

ಶ್ರೀ ವೀರಭದ್ರ ಸ್ವಾಮಿಯ ಮೂಲಸ್ಥಾನ ದಲ್ಲಿ ಮಠದ ಗುರುಗಳು ಜೋಳಿಗೆಯಲ್ಲಿ ಮೀಸಲು ತಂದು ಮಹೇಶ್ವರ ಸ್ವಾಮಿ ಸನ್ನಿಧಿಗೆ ತಲುಪಿಸಿ ನಂತರ ಮಹೇಶ್ವರ ಸ್ವಾಮಿಯ ದುಗ್ಗಲಸೇವೆ ಆರಂಭವಾಯಿತು. ಜಾತ್ರೆಯಲ್ಲಿ ಜರುಗಿದ ದುಗ್ಗಲಯೋತ್ಸವ ಅಂದರೆ ಕುಂಡದೊಳಗೆ ಕೊಬ್ಬರಿ ಚೂರು ಏಳು ಗಂಟೆ ಕರ್ಪೂರ ಹಾಕಿ ತಲೆ ಮೇಲೆ ಹಿಡಿದುಕೊಂಡು ದೇವರ ಸುತ್ತ ಪ್ರದಕ್ಷಿಣೆ ಹಾಕಿದರು.

ಇದು ಸನಾತನ ಕಾಲದಿಂದ ನಡೆದು ಬಂದಿದೆ, ಶ್ರೀ ಮಹೇಶ್ವರ ಸ್ವಾಮಿ ಗ್ರಾಮದ ಆರಾಧ್ಯ ದೇವರಾಗಿ ಭಕ್ತರಿಗೆ ನಂಬಿಕೆ ಮೆರೆಸಿ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ, ವಿವಾಹ ಭಾಗ್ಯ ಜೊತೆಗೆ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಜಾತ್ರಾ ಮಹೋತ್ಸವಕ್ಕೆ ವಿಶೇಷವಾಗಿ ಶಿವಪುರದ ಗುರು ಶ್ರೀ ಸಿದ್ದರಾಮೇಶ್ವರ ಸ್ವಾಮಿ, ಕೊರಟಿಕೆರೆ ಬಸವೇಶ್ವರ ಸ್ವಾಮಿ ಮೂರ್ತಿಗಳು ಆಗಮಿಸಿದವು. ಪ್ರತಿವರ್ಷ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು ಜಾತ್ರೆ ವಿಶೇಷವಾಗಿ ಜರುಗಿತು.

ಮಂಗಳವಾರ ಬೆಳಿಗ್ಗೆ ಶ್ರೀ ಮಹೇಶ್ವರ ಸ್ವಾಮಿ ದುಗ್ಲಲದೊಂದಿಗೆ ರಸ್ತು ಸೇವೆ ಆರಂಭವಾಗಿ ಸಾವಿರಾರು ಭಕ್ತರ ಕಣ್ತುಂಬಿತು. ಭಕ್ತನು ಹಾಸಿದ ರತ್ನಗಂಬಳಿ ಮಡಿವಾಳ ನೆಲಮಡಿ ಮೇಲೆ ಸ್ವಾಮಿಯ ರಸ್ತು ಕಳಸ ಮಹೇಶ್ವರ ಸ್ವಾಮಿ ಮೂಲ ಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಶ್ರೀ ಈಶ್ವರನ ದೇವಾಲಯ ತಲುಪಿ ನಂತರ ತೋಟದ ಶ್ರೀ ಸಿದ್ದೇಶ್ವರ ಸ್ವಾಮಿಯ ಆಸ್ಥಾನ ತಲುಪಿತು.

ಸಿದ್ದೇಶ್ವರ ಸ್ವಾಮಿಯ ಆಸ್ಥಾನದಲ್ಲಿ ಮಹದೇವಪ್ಪನನ್ನು ಗದ್ದಿಗೆಯಲ್ಲಿ ಮಹೇಶ್ವರ ಸ್ವಾಮಿಯನ್ನು ಕೂರಿಸಿ ಉದ್ಭವ ಗುಂಡಿಯಿಂದ ಲಿಂಗವಂತ ತಂದು ಸ್ವಾಮಿಯ ಎದುರಿಗೆ ಇರಿಸಿ ಇಲ್ಲಿ ಬಾಳೆಹಣ್ಣು ಹಾಲು ತುಪ್ಪ ಸಕ್ಕರೆ ಅನ್ನದೊಂದಿಗೆ ಬೆರೆಸಿ ನೈವೇದ್ಯ ಮಾಡಿ ಗಣಂಗಳ ಸೇವೆ ಆರಂಭವಾಯಿತು. ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾಗಿ ಮೀಸಲು ಹರಕೆ ಒಪ್ಪಿಸಿ ಪ್ರಸಾದ ಸ್ವೀಕರಿಸಿ ಶಿವನಿಗೆ ಶರಣು ಹಾಕಿದರು.

ವಾದ್ಯಗೋಷ್ಠಿಯೊಂದಿಗೆ ನೆರವೇರಿದ ಶ್ರೀ ಮಹೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಜತೆಯಲ್ಲಿ ಗ್ರಾಮದ ಆರಾಧ್ಯ ದೇವ ಶ್ರೀ ವೀರಭದ್ರ ಸ್ವಾಮಿ, ಶಿವಪುರದ ಶ್ರೀ ಸಿದ್ದರಾಮೇಶ್ವರ ಸ್ವಾಮಿ, ಸಿದ್ದೇಶ್ವರ ಸ್ವಾಮಿ, ಕೊರಟಿಕೆರೆ ಶ್ರೀ ಬಸವೇಶ್ವರ ಸ್ವಾಮಿ. ಶ್ರೀ ರಾಮದೇವರು, ಗ್ರಾಮ ದೇವತೆ ಉಳಿಸಲಮ್ಮ, ಬನಶಂಕರಮ್ಮ ಉತ್ಸವದಲ್ಲಿ ಭಾಗಿಯಾದವು.

ಭಕ್ತರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಡೂರು ಘಟಕದ ಬಸ್ಸಿನ ವ್ಯವಸ್ಥೆ ಗ್ರಾಮಕ್ಕೆ ಅನುಕೂಲ ಮಾಡಿಕೊಡಲಾಯಿತು.