ಕರ್ನಲ್‌ ಸೋಫಿಯಾ ಖುರೇಷಿ ಅವಹೇಳನ: ಮಹಿಳಾ ಕಾಂಗ್ರೆಸ್‌ ಖಂಡನೆ

| Published : May 17 2025, 01:38 AM IST

ಸಾರಾಂಶ

ಭಾರತೀಯ ಸೇನೆಯ ಅತ್ಯುನ್ನತ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಉಗ್ರವಾದಿಗಳ ಸಹೋದರಿ ಎಂದ ಮಧ್ಯಪ್ರದೇಶದ ಬಿಜೆಪಿ ಸಚಿವನ ಹೇಳಿಕೆಯ ವಿರುದ್ದ ಕಾರ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಬಾಸ್ಕರ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳಭಾರತೀಯ ಸೇನೆಯ ಅತ್ಯುನ್ನತ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಉಗ್ರವಾದಿಗಳ ಸಹೋದರಿ ಎಂದ ಮಧ್ಯಪ್ರದೇಶದ ಬಿಜೆಪಿ ಸಚಿವನ ಹೇಳಿಕೆಯ ವಿರುದ್ದ ಕಾರ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಬಾಸ್ಕರ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ದೇಶವೇ ಗೌರವಿಸುವ ಸೈನ್ಯದ ಅ‌ತ್ಯುನ್ನತ ಸ್ಥಾನದಲ್ಲಿರುವ ಮಹಿಳಾ ಸೇನಾ ಮುಖ್ಯಸ್ಥೆಯ ವಿರುದ್ಧ ಇಂತಹ ಅವಹೇಳನಕಾರಿ ಹೇಳಿ ನೀಡಿದ ಬಿಜೆಪಿ ಸಚಿವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ. ಭಾರತೀಯ ಸೇನೆಯು ಧರ್ಮ ನಿರಪೇಕ್ಷವಾಗಿ ದೇಶ ರಕ್ಷಣೆಯ ಕೆಲಸದಲ್ಲಿ ತೊಡಗಿದ್ದು ಶಿಸ್ತು, ಸಂಯಮ ಮತ್ತು ಸೇನಾ ನ್ಯಾಯಕ್ಕೆ ವಿಶ್ವದಲ್ಲಿಯೇ ಅತ್ಯುತ್ತಮ ಹೆಸರು ಪಡೆದುಕೊಂಡಿದೆ. ಸೇನೆಯಲ್ಲಿ ಅನೇಕ ಜಾತಿ, ಸಮುದಾಯ, ಧರ್ಮ , ಪ್ರಾಂತವಾರು ಭೇದಭಾವ ಇಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ದೇಶ ರಕ್ಷಣೆಯ ಕರ್ತವ್ಯ ನಿಭಾಯಿಸುತ್ತಿದ್ದಾರೆ, ಇಂತಾ ಸೇನೆಗೆ ಈ ಬಿಜೆಪಿ ನಾಯಕರು ಅವಹೇಳನಕಾರಿಯಾಗಿ ಮಾತನಾಡುವುದು ಅವರ ಕೊಳಕು ಮನಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸ್ವತಃ ನಾನು ಸೇನೆಯ ಮಾಜಿ ಯೋಧನ ಪತ್ನಿಯಾಗಿದ್ದು, ಸೇನೆಯ ಯೋಧರ ಸುಖ ಕಷ್ಟಗಳ ಅರಿವು ನನಗಿದೆ. ತನ್ನ ಕುಟುಂಬವನ್ನು ತೊರೆದು ಸಾವಿರಾರು ಕಿಲೋಮೀಟರ್ ದೂರದಲ್ಲಿನ ದೇಶದ ಗಡಿಯಲ್ಲಿ ಜೀವದ ಹಂಗು ತೊರೆದು ದೇಶಕ್ಕಾಗಿ ಹೋರಾಡುವ ಸೈನ್ಯದ ಬಗ್ಗೆ ಬಿಜೆಪಿ ನಾಯಕ ಕೀಳುಮಟ್ಟದಲ್ಲಿ ನಾಲಿಗೆ ಹರಿಬಿಟ್ಟಿರುವುದು ಇದು ದೇಶದ ಸೈನ್ಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿಯ ರಾಷ್ಟ್ರ ವಿರೋಧಿ ಮನಃಸ್ಥಿತಿಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿ ಖಂಡಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ‌.