ಮಹಿಳಾ ಕ್ರಾಂತಿ ಸಂಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ: ಸೌಮ್ಯಾ ರಾವ್

| Published : Jun 08 2024, 12:34 AM IST

ಮಹಿಳಾ ಕ್ರಾಂತಿ ಸಂಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ: ಸೌಮ್ಯಾ ರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಕಾರವಾರದ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಒಳಗೊಂಡು ದೆಹಲಿ ಮಟ್ಟದವರೆಗೂ ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ದೂರು ನೀಡಿದ್ದಾರೆ. ಆದರೆ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕ್ರಮ ವಹಿಸದಿರುವುದು ದುರ್ದೈವದ ಸಂಗತಿಯಾಗಿದೆ.

ಕಾರವಾರ: ಶಿರಸಿಯ ಮಹಿಳಾ ಕ್ರಾಂತಿ ಸಂಸ್ಥೆಯು ಎಚ್‌ಐವಿ ವಿರುದ್ಧ ಜಾಗೃತಿ ಮೂಡಿಸುವ, ಮಹಿಳಾ ಆರೋಗ್ಯ ಶಿಕ್ಷಣ ನೀಡುವ ಸಂಸ್ಥೆಯಾಗಿದ್ದು, ಆದರೆ ಇದು ಕಾನೂನಾತ್ಮಕವಾಗಿ ನಡೆಯುತ್ತಿಲ್ಲ. ಅಲ್ಲದೇ ಹಲವು ಸಿಬ್ಬಂದಿಗೆ ನೀವು ಕೂಡ ಸೆಕ್ಸ್ ವರ್ಕರ್ (ಲೈಂಗಿಕ ಕಾರ್ಯಕರ್ತೆ) ಎಂದು ಪ್ರಚಾರ ಮಾಡುತ್ತೇವೆಂದು ಬೆದರಿಕೆ ಹಾಕಲಾಗುತ್ತಿದೆ ಎಂದು ಸಂಸ್ಥೆಯ ಮಾಜಿ ಆಪ್ತ ಸಮಾಲೋಚಕಿ ಸೌಮ್ಯಾ ರಾವ್ ಆರೋಪಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೩೦ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅವರಿಗೆ ಸರಿಯಾಗಿ ವೇತನ ನೀಡುವುದಿಲ್ಲ. ಸರ್ಕಾರದಿಂದ ಇಂತಹ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೇತನ ನೀಡಲು ವರ್ಷಕ್ಕೆ ಎರಡು ಬಾರಿ (ಆರು ತಿಂಗಳಿಗೊಮ್ಮೆ) ಅನುದಾನ ಬರುತ್ತದೆ. ಆದರೆ ಬಂದ ಅನುದಾನವನ್ನು ದುರುಪಯೋಗ ಮಾಡಿಕೊಂಡು, ೨-೩ ತಿಂಗಳ ವೇತನ ನೀಡುತ್ತಾರೆ. ಕಳೆದ ಕೆಲವು ತಿಂಗಳ ಹಿಂದೆ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಅನುಮಾನ ಬಂದಿತ್ತು. ಬಳಿಕ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಕೆಲವು ಸಿಬ್ಬಂದಿಯ ವೇತನವನ್ನು ತಡೆ ಹಿಡಿದಿದ್ದಾರೆ. ನಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಕೆಲಸ ಮಾಡಿದರೂ ವೇತನ ನೀಡಿಲ್ಲ. ಮನೆಗೆ ಬಂದು ಗಲಾಟೆ ಮಾಡುತ್ತೇವೆಂದು ಬೆದರಿಕೆ ಹಾಕುತ್ತಾರೆ ಎಂದು ಅಳಲು ತೋಡಿಕೊಂಡರು.

ಡಬ್ಲ್ಯುಎಚ್ಆರ್, ಆರ್‌ಕೆ ಫೌಂಡೇಷನ್ ವಿಶ್ವ ಮಾನವ ಹಕ್ಕು ಸಂಸ್ಥೆಯ ಕಾನೂನು ಸಲಹೆಗಾರ್ತಿ ಅರ್ಚನಾ ನಾಯಕ ಮಾತನಾಡಿ, ಮಹಿಳಾ ಕ್ರಾಂತಿ ಸಂಸ್ಥೆಯು ಆರೋಗ್ಯ ತಪಾಸಣೆ, ಸರ್ಕಾರದ ಯೋಜನೆ ಕೊಡಿಸುವ ಇತ್ಯಾದಿ ಹೆಸರಿನಲ್ಲಿ ಮಹಿಳೆಯರನ್ನು ಒಂದುಗೂಡಿಸಿ ಅವರಿಗೆ ತಿಳಿಯದಂತೆ ಸಹಿ, ವಿಳಾಸ, ದಾಖಲೆ ಪಡೆದು ಲೈಂಗಿಕ ಕಾರ್ಯಕರ್ತೆಯರೆಂದು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸಂಸ್ಥೆಗೆ ಹೆಚ್ಚಿನ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆ ತೋರಿಸಿ ಅದರಿಂದ ಬರುವ ಅನುದಾನ ಮತ್ತು ಸೌಲಭ್ಯಗಳನ್ನು ಸ್ವಂತಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಈ ವಿಷಯ ಅಮಾಯಕ ಹೆಣ್ಣುಮಕ್ಕಳಿಗೆ ತಿಳಿದಿಲ್ಲ. ಈವರೆಗೆ ಅಂದಾಜು ೩೦೦೦ಕ್ಕೂ ಹೆಚ್ಚು ಹೆಣ್ಣುಮಕ್ಕಳನ್ನು ಸೆಕ್ಸ್ ವರ್ಕರ್ ಎಂದು ನೋಂದಣಿ ಮಾಡಿಸಿರುವ ಬಗ್ಗೆ ಅಲ್ಲಿನ ಸಿಬ್ಬಂದಿಯೇ ತಿಳಿಸಿದ್ದಾರೆ. ಇದರಲ್ಲಿ ೧೮ರಿಂದ ೨೦ ವರ್ಷದ ಹೆಣ್ಣುಮಕ್ಕಳೂ ಇದ್ದಾರೆ ಎಂದರು.

ಕಾರವಾರದ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಒಳಗೊಂಡು ದೆಹಲಿ ಮಟ್ಟದವರೆಗೂ ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ದೂರು ನೀಡಿದ್ದಾರೆ. ಆದರೆ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕ್ರಮ ವಹಿಸದಿರುವುದು ದುರ್ದೈವದ ಸಂಗತಿಯಾಗಿದೆ. ಉತ್ತರ ಕನ್ನಡದಲ್ಲಿ ಲೈಂಗಿಕ ಕಾರ್ಯಕರ್ತೆಯರು ನೂರಾರು ಜನರು ಕೂಡಾ ಇಲ್ಲ. ಆದರೆ ಈ ಸಂಸ್ಥೆ ದಾಖಲೆಯಲ್ಲಿ ಸಾವಿರಾರು ಜನರು ಇದ್ದಾರೆ. ಸಂಬಂಧಿಸಿದ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಯಪ್ರಕಾಶ ನಾಯಕ, ಮಂಜುನಾಥ ನಾಯ್ಕ, ಶ್ರೀಧರ ನಾಯ್ಕ, ಶ್ರೀನಿವಾಸ ನಾಯ್ಕ, ಎನ್.ಎಂ. ನಾಯ್ಕ, ಮಾಲಿನಿ ನಾಯ್ಕ, ಥೆರೆಸಾ ಡಿಸೋಜಾ, ಮೀನಾಕ್ಷಿ, ಫಾತಿಮಾ ಸಿದ್ದಿ, ಗುಲ್ಸಾರ್ ಬಾನು, ರೋಜಿ ಫರ್ನಾಡೀಸ್ ಇದ್ದರು.