ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ಜನರು ಕಾತುರದಿಂದ ಎದುರು ನೋಡುತ್ತಿದ್ದ ಮುದ್ದೇಬಿಹಾಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಮೈಬೂಬ ಗೊಳಸಂಗಿ ಹಾಗೂ ಉಪಾಧ್ಯಕ್ಷರಾಗಿ ಪ್ರೀತಿ ದೇಗಿನಾಳ ಆಯ್ಕೆಯಾಗಿದ್ದಾರೆ. ಪುರಸಭೆ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರು ಆಯ್ಕೆಯಾಗಿದ್ದಾಗಿ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಘೋಷಿಸಿದರು.ಬಳಿಕ, ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಭೇಟಿ ಮಾಡಿ ಅಭಿನಂದಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಶಾಸಕ ಸಿ.ಎಸ್.ನಾಡಗೌಡರು, ಸರ್ಕಾರದಿಂದ ಹೆಚ್ಚು ಅನುದಾನ ತಂದು ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸುವೆ. ನಾನು ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಕಾನೂನಿನಡಿಯೇ ನಡೆದು ಬಂದಿದ್ದೇನೆ. ಹೇಳಿಕೆ ನೀಡುವವರು ಯೋಚಿಸಿ ಹೇಳಿಕೆ ಕೊಡಬೇಕು. ಯಾರನ್ನೋ ತೇಜೋವಧೆ ಮಾಡಲು ಅಲ್ಲ ಎಂದು ಅರ್ಥ ಮಾಡಿಕೊಂಡರೆ ಸಾಕು ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಪುರಸಭೆ ಕಚೇರಿಯಲ್ಲಿ ಬೆಳಗ್ಗೆ 11ಕ್ಕೆ ಆರಂಭವಾದ ಚುನಾವಣೆ ಪ್ರಕ್ರಿಯೆ ವೇಳೆ ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಸದಸ್ಯ ರಿಯಾಜ ಅಹ್ಮದ ಡವಳಗಿ ಬಿಜೆಪಿಯ ಬಸವರಾಜ ಮುರಾಳ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಭಾರತಿ ಪಾಟೀಲ ಹಾಗೂ ಪ್ರೀತಿ ದೇಗಿನಾಳ ಬಿಜೆಪಿಯ ಸಹನಾ ಬಡಿಗೇರ ನಾಮಪತ್ರ ಸಲ್ಲಿಸಿದ್ದರು. 8 ಬಿಜೆಪಿ ಸದಸ್ಯರು, 8 ಕಾಂಗ್ರೆಸ್, 5 ಪಕ್ಷೇತರರು ಸೇರಿ ಒಟ್ಟು 23 ಸದಸ್ಯರ ಬಲ ಹೊಂದಿದೆ. ಸದ್ಯ 5 ಪಕ್ಷೇತರರು ಹಾಗೂ 8 ಜನ ಬಿಜೆಪಿ ಸದಸ್ಯರು ಪರಸ್ಪರ ಹೊಂದಾಣಿಕೆಯಿಂದ ಪಕ್ಷೇತರ ಅಭ್ಯರ್ಥಿ ರಿಯಾಜ ಅಹ್ಮದ್ ಢವಳಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿತ್ತು. ಆದರೆ, ಶಾಸಕರು ಅಜ್ಞಾತ ಸ್ಥಳಕ್ಕೆ ರಿಯಾಜ ಅಹ್ಮದ್ ಡವಳಗಿಯನ್ನು ಕರೆಸಿಕೊಂಡು ಮೈಬೂಬ ಗೊಳಸಂಗಿ ಅಧ್ಯಕ್ಷರಾಗಲಿ ಎಂದು ಮುಖಂಡರ ನೇತೃತ್ವದಲ್ಲಿ ಮನವೊಲಿಸುವಲ್ಲಿ ಯಶಸ್ವಿಯಾದರು.ಬಳಿಕ ನಡೆದ ಚುನಾವಣೆಯಲ್ಲಿ ಗೊಳಸಂಗಿ ಅಧ್ಯಕ್ಷರಾಗುವುದಕ್ಕೆ 16 ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದ್ದು, ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಬಳಿಕ ಪ್ರೀತಿ ದೇಗಿನಾಳ ಉಪಾಧ್ಯಕ್ಷರನ್ನಾಗಿ ಆಯ್ಕೆಯಾದರು. ಬಿಜೆಪಿ ಸದಸ್ಯ ಬಸವರಾಜ ಮುರಾಳ ಅವರು ನೀಡಿದ್ದ ನಾಮಪತ್ರ ಹಿಂಪಡೆದುಕೊಳ್ಳುವಂತೆ ಮಾಡಿ ಪಕ್ಷೇತರ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿದ್ದ ಬಿಜೆಪಿಗೆ ತಂತ್ರಗಾರಿಕೆ ಮೂಲಕ ಕಾಂಗ್ರೆಸ್ ಟಾಂಗ್ ನೀಡಿದ್ದು, ಬಿಜೆಪಿಗೆ ಮುಖಭಂಗವಾದಂತಾಗಿದೆ.ಕಾರ್ಯಕರ್ತರ ವಿಜಯೋತ್ಸವ:
ಪುರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಆಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪುರಸಭೆ ಕಚೇರಿ ಎದುರು ಪಟಾಕಿ ಸಿಡಿಸಿ ಪರಸ್ಪರ ಗುಲಾಲು ಎರಚಿಕೊಂಡು ಸಂಭ್ರಮಾಚರಣೆ ಆಚರಿಸಿದರು. ಈ ವೇಳೆ ಮೈಬೂಬ ಗೊಳಸಂಗಿ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಕಾರ್ಯಕರ್ತರು ಮೆರವಣಿಗೆ ಮಾಡಿದರು.ಪುರಸಭೆಗೆ ಹೆಚ್ಚಿನ ಭದ್ರತೆ:
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನಲೆ ಮುಂಜಾಗ್ರತೆಯಾಗಿ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಹಾಗೂ ಪಿಎಸೈ ಸಂಜಯ ತಿಪ್ಪಾರೆಡ್ಡಿ ಹಾಗೂ ತಾಳಿಕೋಟಿ ಪಿಎಸೈ ರಾಮನಗೌಡ ಸಂಕನಾಳ, ಕ್ರೈಂ ಪಿಎಸ್‌ಐ ಆರ್.ಎಸ್.ಬಂಗಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಪುರಸಭೆ ಕಚೇರಿ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಿ ಬಂದೋಬಸ್ತ್ ಕಲ್ಪಿಸಲಾಗಿತ್ತು.ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮುಖಂಡರಾದ ಸಂಗಮೇಶ ಬಿರಾದಾರ(ಜಿಟಿಸಿ), ಎಂ.ಬಿ.ನಾವದಗಿ, ಗಫೂರಸಾಬ ಮಕಾಂದಾರ, ಸಿಬಿ ಅಸ್ಕೀ, ಸಿಕಂದರ ಜಾನ್ವೇಕರ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸದಸ್ಯರಾದ ವಿರೇಶ ಹಡಲಗೇರಿ, ಚನ್ನಪ್ಪ ಕಂಠಿ, ಯಲ್ಲಪ್ಪ ನಾಯಕಮಕ್ಕಳ, ಸೋನಾಬಾಯಿ ನಾಯಕ, ರಫೀಕ ದ್ರಾಕ್ಷಿ, ಶಿವು ಶಿವಪುರಿ, ಹಣಮಂತ ಭೋವಿ, ಶಾಹಾಜಾದಬಿ ಹುಣಸಗಿ, ಮಹಮ್ಮದ ರಫೀಕ ಶಿರೋಳ, ಸದ್ದಾಂ ಕುಂಟೋಜಿ, ಕಾಮರಾಜ ಬಿರಾದಾರ, ಸಂಗಪ್ಪ ಮೇಲಿಮನಿ, ಶ್ರೀಕಾಂತ ಚಲವಾದಿ, ಬಸವರಾಜ ಗೊಳನಾಳ ಸೇರಿ ಇತರರು ಇದ್ದರು.
----------------ಕೋಟ್........
ಶಾಸಕ ಸಿ.ಎಸ್.ನಾಡಗೌಡ ಹಾಗೂ ತಾಲೂಕು ಕಾಂಗ್ರೆಸ್ ಮುಖಂಡರ ಆಶೀರ್ವಾದದಿಂದ ನಾನು ಅಧ್ಯಕ್ಷನಾಗಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ಎಲ್ಲ ಸದಸ್ಯರ ವಿಶ್ವಾಸ ಪಡೆದು ಪಟ್ಟಣದ ಜನರಿಗೆ ಸಕಾಲಕ್ಕೆ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ, ಉದ್ಯಾನವನಗಳು, ರಸ್ತೆಗಳ ಅಭಿವೃದ್ಧಿ ಸೇರಿ ಸಮಗ್ರ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಲ್ಲುತ್ತೇನೆ. ಅಧ್ಯಕ್ಷನಾಗಲು ಶ್ರಮಿಸಿದ ಶಾಸಕರು ಸೇರಿ ಎಲ್ಲರಿಗೂ ಧನ್ಯವಾದಗಳು.- ಮೈಬೂಬ ಗೊಳಸಂಗಿ, ಪುರಸಭೆ ನೂತನ ಅಧ್ಯಕ್ಷ
-----------ಚುನಾವಣೆಯಲ್ಲಿ ಮಾತ್ರ ನಾವು ನಮ್ಮ ಪಕ್ಷ ಎಂಬುದಿರುತ್ತದೆ. ಗೆದ್ದ ಬಳಿಕ ನಾವು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಅಭಿವೃದ್ಧಿಗೆ ಶ್ರಮಿಸಬೇಕು. ಒಂದೂವರೆ ವರ್ಷದಿಂದ ಪುರಸಭೆ ಅಧಿಕಾರವಿಲ್ಲದೇ ಅಭಿವೃದ್ಧಿ ಕುಂಠಿತವಾಗಿತ್ತು. ನಮಗೆ ಇನ್ನು ಒಂದು ವರ್ಷ ಆಡಳಿತಕ್ಕೆ ಸಮಯವಿದೆ. ಮಾದರಿ ಪಟ್ಟಣ ನಿರ್ಮಾಣದ ಗುರಿ ಹೊಂದಿದ್ದೇವೆ.
- ಸಿ.ಎಸ್.ನಾಡಗೌಡ(ಅಪ್ಪಾಜಿ), ಶಾಸಕ;Resize=(128,128))
;Resize=(128,128))