ಕಂಚಾವೀರರ ಭಗಣಿಗೂಟ, ಗೊರವರ ಸರಪಳಿ ಪವಾಡಗಳು ನೆರೆದಿದ್ದ ಭಕ್ತರನ್ನು ಮಂತ್ರ ಮುಗ್ದರನ್ನಾಗಿಸಿತು.
ಹೂವಿನಹಡಗಲಿ: ನಾಡಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ದೇವಸ್ಥಾನದ ಆವರಣದಲ್ಲಿ, ಕಂಚಾವೀರರ ಭಗಣಿಗೂಟ, ಗೊರವರ ಸರಪಳಿ ಪವಾಡಗಳು ನೆರೆದಿದ್ದ ಭಕ್ತರನ್ನು ಮಂತ್ರ ಮುಗ್ದರನ್ನಾಗಿಸಿತು.
ಕಳೆದ 11 ದಿನಗಳ ಕಾಲ ನಡೆದ ಮೈಲಾರಲಿಂಗೇಶ್ವರ ಜಾತ್ರೆಗೆ ಪವಾಡಗಳೊಂದಿಗೆ ಸಂಭ್ರಮದ ತೆರೆ ಕಂಡಿತ್ತು. ವಿವಿಧ ಪವಾಡಗಳನ್ನು ಮಾಡುವ ಕಂಚಾವೀರರು, ಗೊರವರನ್ನು ಮೆರವಣಿಗೆ ಮೂಲಕ ಕರೆ ತರುವ ಮೂಲಕ, ದೇವಸ್ಥಾನದ ಆವರಣದ ಗಂಗಿಮಾಳಮ್ಮ ದೇವಸ್ಥಾನ ಮುಂದಿನ ಪವಾಡ ಕಟ್ಟೆ ಮುಂಭಾಗದಲ್ಲಿ, ಪವಾಡಕ್ಕೆ ಬಳಕೆ ಮಾಡುವ ವಿವಿಧ ಆಯುಧಗಳನ್ನು, ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಇವರ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.ಭಗಣಿಗೂಟ, ಚರ್ಮದ ಮಿಣಿಗಳು, ಮುಳ್ಳಿನ ಕಂಟಿ, ಖಡ್ಗಗಳು, ಕೈಗೆ ಚುಚ್ಚಿಕೊಳ್ಳುವ ಆರುತಿ ಆಯುಧ ಸೇರಿದಂತೆ ಇನ್ನಿತರ ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ. ನಂತರದಲ್ಲಿ ಗುರು ವೆಂಕಪ್ಪಯ್ಯ ಒಡೆಯರ್ ಇವರಿಂದ ಭಂಡಾರ ಆಶೀರ್ವಾದ ಪಡೆದರು.
ಕಟ್ಟಿಗೆಯಿಂದ ತಯಾರಿಸಿದ ಭಗಣಿಗೂಟವೆಂಬ ಆಯುಧವನ್ನು ಕಂಚಾವೀರರು ತಮ್ಮ ಬಲಕಾಲಿನ ಕೆಳಗೆ ಏಳು ಕೋಟಿ ಏಳು ಕೋಟಿ ಏಳು ಕೋಟಿಗೋ ಎಂದು ಮೈಲಾರಲಿಂಗೇಶ್ವರ ಸ್ವಾಮಿ ನಾಮ ಸ್ಮರಣೆ ಮಾಡುತ್ತಾ, ಕಾಲಿಗೆ ಬಡಿದುಕೊಳ್ಳುತ್ತಾರೆ. ಕಾಲಿನಲ್ಲಿ ರಂಧ್ರ ಮಾಡಿದ ಬಳಿಕ ಇದರಲ್ಲಿ ಚರ್ಮದ ಮಿಣಿಗಳು, ಮುಳ್ಳಿನ ಕಂಟಿಗಳನ್ನು ದಾಟಿಸುತ್ತಾರೆ. ಮೈಲಾರಲಿಂಗೇಶ್ವರ ಸ್ವಾಮಿ ಕುರಿತು ಖಡ್ಗಗಳನ್ನು ಹಿಡಿದು ದೇವರ ಮಹಿಳೆ ಹೊಗಳುವ ಒಡವುಗಳನ್ನು ಹೇಳಿದರು. ಗೊರವರು ಕಬ್ಬಿಣದ ಪರಪಳಿಯನ್ನು ಪವಾಡ ಕಟ್ಟೆಗೆ ಕಟ್ಟಿದ ಬಳಿಕ ದೇವರ ನಾಮ ಸ್ಮರಣೆ ಮಾಡುತ್ತಾ, ಸರಪಳಿಯನ್ನು ಹರಿದರು. ಕಂಚಾವೀರರು ಹಾಗೂ ಗೊರವರು ಮಾಡುವ ಪವಾಡಗಳ ಸಂದರ್ಭದಲ್ಲಿ, ನೆರೆದಿದ್ದ ಭಕ್ತರು ಸೀಳಳು ಕೇಕೆ ಹಾಕುತ್ತಾರೆ, ಜತೆಗೆ ಗೊರವರ ಢಮರುಗ ಶಬ್ದ ಪವಾಡ ಮಾಡುವವರಿಗೆ ಹುಮ್ಮಸ್ಸು ತುಂಬಿದರು.ದೇವಸ್ಥಾನದಲ್ಲಿ ವಂಶ ಪಾರಂಪರ್ಯವಾಗಿ ಪವಾಡಗಳನ್ನು ಮಾಡುತ್ತಾ ಬಂದಿರುವ, ಕಂಚಾವೀರರು ಮತ್ತು ಗೊರವರು, ಪವಾಡಕ್ಕೂ ಮುನ್ನ ಒಂದು ದಿನ ಉಪವಾಸ ವ್ರತ ಮಾಡುತ್ತಾರೆ, ವ್ರತಕ್ಕೆ ಭಂಗ ಬರದಂತೆ ಮನೆಯಲ್ಲಿನ ಮಹಿಳೆಯರನ್ನು ಬೇರೆಡೆ ಕಳಿಸುತ್ತಾರೆ, ಕಾರಣ ಪವಾಡಗಳಿಗೆ ತೊಂದರೆ ಆಗದಂತೆ ಮಡಿಯುಡಿಯಿಂದ ಪವಾಡಗಳನ್ನು ಮಾಡುತ್ತೇವೆ ಎನ್ನುತ್ತಾರೆ ಕಂಚಾವೀರರು.
ಮೈಲಾರಲಿಂಗೇಶ್ವರ ಜಾತ್ರೆಯ ಕೊನೆ ದಿನದಂದು ದೇವಸ್ಥಾನ ಆವರಣದಲ್ಲಿ ಜರುಗುವ, ಪವಾಡಗಳಲ್ಲಿ ಯುವಕರು ಭಾಗವಹಿಸಬಹುದು, ಆದರೆ, ಅವರು ಮದುವೆಗೂ ಮುನ್ನ ಪವಾಡಗಳನ್ನು ಮಾಡಬೇಕಿದೆ ಎನ್ನುತ್ತಾ ಗುರು ವೆಂಕಪ್ಪಯ್ಯ ಒಡೆಯರ್.ಮೈಲಾರಲಿಂಗೇಶ್ವರ ಕಾರ್ಣಿಕ ಸ್ಥಳ ಡೆಂಕಣ ಮರಡಿಯಲ್ಲಿ (ಮಣಿಕಾಚೂಲ ಪರ್ವತ) ಅಡಗಿ ಕುಳಿತಿದ್ದ ಮಣಿಕಾಸುರ, ಮಲ್ಲಾಸುರ ರಾಕ್ಷಸರನ್ನು ಸಂಹರಿಸಿ ನಂತರ ದೇವಸ್ಥಾನದ ಕಂಚಾವೀರರು, ಗೊರವರು ಪವಾಡಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
ಡೆಂಕಣ ಮರಡಿಯಲ್ಲಿ ರಾಕ್ಷಸರ ಸಂಹಾರದ ನೆನಪಿಗಾಗಿ ಹಿಂದಿನ ಕಾಲದಲ್ಲಿ ಶಿರಚ್ಛೇಧ ನಡೆಯುತ್ತಿತ್ತು. ಅಹಿಂಸಾ ಪರಮೋ ಧರ್ಮ ಬಂದ ನಂತರದಲ್ಲಿ ಈ ಪದ್ದತಿಯನ್ನು ನಿಲ್ಲಿಸಲಾಗಿದೆ. ಆದಿ ಕರ್ನಾಟಕ ಜನಾಂಗದ ಕಂಚಾವೀರರೆಂದು ಕರೆಯುವ ಇವರು, ಭಗಣಿಗೂಟ ಪವಾಡಗಳನ್ನು ಮಾಡುತ್ತಾರೆ, ಗೊರವರ ಸರಪಳಿ ಪವಾಡ ಮಾಡುವುದು ಸಂಪ್ರದಾಯ ಮುಂದುವರೆದಿದೆ ಎನ್ನುತ್ತಾರೆ ಗುರು ವೆಂಕಪ್ಪಯ್ಯ ಒಡೆಯರ್.ಬಗಣಿ ಗೂಟ ಪವಾಡ ಮಾಡಿದವರು: ವಸಂತ ಕಂಚಾವೀರ, ಚೇತನ್ ಕಂಚಾವೀರ, ಮಾಲತೇಶ ಕಂಚಾವೀರ.
ಕೈ ಪವಾಡ: ಫಕ್ಕೀರೇಶ ಕಂಚಾವೀರ.ಸರಪಳಿ ಪವಾಡ: ಅನಿಲ್ ದಳವಾಯಿ, ಉಮೇಶ್ ದಳವಾಯಿ ಹಾಗೂ ಸಂಗಡಿಗರಾದ ನಿಂಗಪ್ಪ ರಾಗೇರ, ಭರಮಪ್ಪ ಆರೇರ, ರವೀಂದ್ರ ಮಾಲ್ದಾರ.