ಗಂಗಾವತಿ ತಾಲೂಕಿನಲ್ಲಿರುವ ಪಾಪಯ್ಯ ಸುರಂಗ ಮಾರ್ಗವು ಒಂದು ಕಿಲೋಮೀಟರ್ ಉದ್ದವಿದೆ
ಮುನಿರಾಬಾದ್: ₹ 430 ಕೋಟಿ ವೆಚ್ಚದಲ್ಲಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಆಧುನೀಕರಣಗೊಳಿಸಲಾಗುವುದು ಎಂದು ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಲಕ್ಷ್ಮಣ್ ನಾಯಕ್ ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯದ ಜಖಂಗೊಂಡ 33ಗೇಟ್ ಬದಲಾಯಿಸುವ ಪ್ರಕ್ರಿಯೆ ನಡೆದಿದೆ. ಇನ್ನೊಂದೆಡೆ 6,30,000 ಎಕರೆ ಅಚ್ಚುಕಟ್ಟು ಪ್ರದೇಶದ ರೈತರ ಗದ್ದೆಗಳಿಗೆ ನೀರು ಹರಿಸುವ 241 ಕಿಮೀ ಉದ್ದದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಆಧುನೀಕರಣ ಕಾಮಗಾರಿ ಒಟ್ಟಾಗಿ ಮಾಡಲಾಗುವುದು ಎಂದು ತಿಳಿಸಿದರು.ಎಡದಂಡೆ ಮುಖ್ಯ ಕಾಲುವೆ ಆಧುನೀಕರಣ ಸಂಬಂಧಿಸಿದಂತೆ ಗುರುವಾರ ಕರ್ನಾಟಕ ನೀರಾವರಿ ನಿಗಮದ ಉಪಸಮಿತಿ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ತಂಡವು ಎಡದಂಡೆ ಕಾಲುವೆಯ ಆಧುನೀಕರಣ ನಡೆಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಹಿಟ್ನಾಳ್ ಹೋಬಳಿ, ಗಂಗಾವತಿ ತಾಲೂಕು ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ ಮತ್ತು ಮಸ್ಕಿ ತಾಲೂಕುಗಳ ಮೂಲಕ ಹರಿದು ಹೋಗುವ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ವೀಕ್ಷಣೆ ಮಾಡಿದರು.
ಗಂಗಾವತಿ ತಾಲೂಕಿನಲ್ಲಿರುವ ಪಾಪಯ್ಯ ಸುರಂಗ ಮಾರ್ಗವು ಒಂದು ಕಿಲೋಮೀಟರ್ ಉದ್ದವಿದೆ. ಈಗ ಆ ಸುರಂಗದ ಮೂಲಕ 4,200 ಕ್ಯೂಸೆಕ್ ನೀರು ಮಾತ್ರ ಹರಿದು ಹೋಗುತ್ತಿದೆ. ತಜ್ಞರ ತಂಡವು ಪಾಪಯ್ಯ ಸುರಂಗವನ್ನು ಅಗಲಗೊಳಿಸಲು ತೀರ್ಮಾನಿಸಿದೆ. ಅಗಲಗೊಂಡ ನಂತರ ಸುರಂಗದಿಂದ 5,000 ಕ್ಯೂಸೆಕ್ ನೀರನ್ನು ಹರಿಸಲು ಸಾಧ್ಯವಾಗುತ್ತದೆ. ಈ ಸುರಂಗದ ಮೂಲಕ 5,000 ಕ್ಯೂ ಸೆಕ್ ನೀರು ಹರಿಸಿದರೆ ಅದು ಎಡದಂಡೆ ಮುಖ್ಯ ಕಾಲುವೆಯ ಕೊನೆಯ ಭಾಗದ ರೈತರ ಗದ್ದೆಯವರೆಗೂ ನೀರು ಹರಿಸಲು ಸುಲಭವಾಗುತ್ತದೆ ಎಂದು ತಜ್ಞರ ತಂಡ ಅಭಿಪ್ರಾಯ ಪಟ್ಟಿತು.ತಜ್ಞರ ತಂಡವು ಎಡದಂಡೆ ಕಾಲುವೆಯ ಆಧುನೀಕರಣಕ್ಕೆ ₹430 ಕೋಟಿ ವೆಚ್ಚದಲ್ಲಿ ಡಿಪಿಆರ್ ಸಿದ್ದಪಡಿಸಿದ್ದು. ತಜ್ಞರ ತಂಡವು ಇದನ್ನು ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಿದ್ದು. ಸರ್ಕಾರದ ಅನುಮೋದನೆ ಬಂದ ತಕ್ಷಣ ಟೆಂಡರ್ ಪ್ರಕ್ರಿಯೆ ಕರೆದು ಜೂನ್ 2026 ವೇಳೆಗೆ ಎಡದಂಡೆ ಮುಖ್ಯ ಕಾಲುವೆಯ ಆಧುನೀಕರಣ ಮಾಡಲಾಗುವುದು ಎಂದರು.
ತುಂಗಭದ್ರಾ ಜಲಾಶಯದ ಗೇಟುಗಳ ಬದಲಾವಣೆ ಹಿನ್ನೆಲೆಯಲ್ಲಿ ಕಾಲುವೆಗಳಿಗೆ ಆರು ತಿಂಗಳ ಕಾಲ (ಜನವರಿ 2026 ಯಿಂದ ಜೂನ್ 2026 ವರೆಗೆ) ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುವುದು. ಈ ಸಮಯದಲ್ಲಿ ಕಾಲುವೆಗಳ ಆಧುನೀಕರಣ ಕೈಗೊಳ್ಳಲಾಗುವುದು ಎಂದರು.ಇದಕ್ಕೂ ಮುನ್ನ ತಜ್ಞರ ತಂಡದ ಅಧ್ಯಕ್ಷರು ಹಾಗೂ ಸದಸ್ಯರು ಶಿಥಿಲಗೊಂಡ ತುಂಗಭದ್ರಾ ಜಲಾಶಯದ ಗೇಟ್ ಗಳ ಬದಲಾವಣೆ ಕಾರ್ಯ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸಿಂಧನೂರು ಶಾಸಕ ಬಾದರ್ಲಿ ಹಂಪನಗೌಡ, ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ಮಲ್ಲಿಗಿವಾಡ್, ನಿವೃತ್ತ ಮುಖ್ಯ ಅಭಿಯಂತರ ಮಂಜಪ್ಪ ಹಾಗೂ ಇತರರು ಉಪಸ್ಥಿತರಿದ್ದರು.