ಈದ್ಗಾ ಮಸೀದಿ ರಸ್ತೆ, ಪುಲಿಕೇಶಿ ರಸ್ತೆ ಮೂಲಕ ಸಾಗಿ ಮುಸ್ಲಿಂ ಸ್ಮಶಾನದ ವೃತ್ತದ ಬಳಿ ಫಾತೆಹಾಖಾನಿ ಮತ್ತು ದುವಾ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಮೈಸೂರುನಗರದ ವಿವಿಧ ಮಸೀದಿಗಳಲ್ಲಿ ಪ್ರವಾದಿ ಮಹಮ್ಮದರ 1501ನೇ ಜನ್ಮದಿನದ ಅಂಗವಾಗಿ ಜಶ್ನೆ ಈದ್ ಮಿಲಾದ್ ಆಚರಿಸಲಾಯಿತು.
ಮುಸ್ಲಿಂ ಸಮುದಾಯದವರು ಬುಧವಾರ ಸಡಗರ ಸಂಭ್ರಮದಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಬುಧವಾರ ಸಂಜೆ ನೂರಾರು ಮಂದಿ ಮುಸ್ಲಿಮರು ಆಕರ್ಷಕ ಮೆರವಣಿಗೆ ಮೂಲಕ ಸಾರ್ವಜನಿಕರ ಗಮನ ಸೆಳೆದರು.ಮೆರವಣಿಗೆಗೆ ಮೈಸೂರಿನ ಸರ್ ಖಾಜಿ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಅವರು ಚಾಲನೆ ನೀಡಿದರು. ಸಮುದಾಯದ ಸ್ನೇಹಿತರು, ಬಂಧುಗಳು ಪರಸ್ಪರ ಶುಭಾಶಯ ವಿಮನಿಯಮ ಮಾಡಿಕೊಂಡರು.
ಮಂಗಳವಾರ ರಾತ್ರಿ ನಗರದಾದ್ಯಂತ ಇರುವ ಮಸೀದಿಗಳಲ್ಲಿ ಪ್ರವಾದಿ ಮಹಮ್ಮದ್ ಅವರ ಜಯಂತಿ ಆಚರಿಸಲಾಯಿತು. ಎಲ್ಲರೂ ತಡರಾತ್ರಿವರೆಗೆ ಪ್ರಾರ್ಥನೆ ಸಲ್ಲಿಸಿದರು.ಬುಧವಾರ ಬೆಳಗ್ಗೆ ಹೊಸ ಉಡುಗೆ ಧರಿಸಿದ್ದ ಮುಸ್ಲಿಂ ಬಾಂಧವರು ಹಾಗೂ ಮಕ್ಕಳು ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಂತರ ಅಲ್ಲಿ ತಂಪು ಪಾನೀಯ, ಒಣ ಹಣ್ಣುಗಳ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಮುಸ್ಲಿಂ ಬಾಂಧವರು ಆಕರ್ಷಕ ಮೆರವಣಿಗೆ ನಡೆಸಿದರು. ಸಾಡೆ ರಸ್ತೆ, ಮೀನಾ ಬಜಾರ್, ಡಾ.ಜಾಕಿರ್ ಹುಸೇನ್ ವೃತ್ತ, ಈದ್ಗಾ ಮಸೀದಿ ರಸ್ತೆ, ಪುಲಿಕೇಶಿ ರಸ್ತೆ ಮೂಲಕ ಸಾಗಿ ಮುಸ್ಲಿಂ ಸ್ಮಶಾನದ ವೃತ್ತದ ಬಳಿ ಫಾತೆಹಾಖಾನಿ ಮತ್ತು ದುವಾ ಸಲ್ಲಿಸಲಾಯಿತು.ಬಳಿಕ ನಗರದ ಕೆ.ಟಿ. ಸ್ಟ್ರೀಟ್, ಸುನ್ನಿ ಚೌಕ, ಕೆ.ಆರ್. ಪಾರ್ಕ್ ರಸ್ತೆಗಳ ಮೂಲಕ ಸಾಗಿ ಮತ್ತೆ ಅಶೋಕ ರಸ್ತೆಯ ಮಸೀದಿ ಬಳಿ ಮೆರವಣಿಗೆ ಕೊನೆಗೊಂಡಿತು.
ಮಿಲಾದ್ ಪಾರ್ಕ್ ನಲ್ಲಿ ಸಿದ್ಧಪಡಿಸಲಾಗಿದ್ದ ವೇದಿಕೆ ಬಳಿ ಧರ್ಮಗುರುಗಳು ಪ್ರವಾದಿ ಮಹಮ್ಮದ್ ಪೈಗಂಬರರ ಸಂದೇಶ, ಜೀವನ, ಬೋಧನೆ, ತ್ಯಾಗ ಮತ್ತು ವ್ಯಕ್ತಿತ್ವವನ್ನು ತಿಳಿಸಿದರು. ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸಿದ್ದರು.