ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನವೇ ಇದಕ್ಕೆ ಕಾರಣವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಮುಖ್ಯ ರಸ್ತೆಯನ್ನು ಪಟ್ಟಣ ಪಂಚಾಯಿತಿಯವರು, ಕಳೆದ ಕೆಲವು ವರ್ಷಗಳ ಹಿಂದೆ ನಗರೋತ್ಥಾನ ಅನುದಾನದಡಿ ಡಾಂಬರೀಕರಣ ನಡೆಸಿ ಆ ಸಮಯದಲ್ಲಿದ್ದ, ಏಕಪದ ಕಾಂಕ್ರೀಟ್ ರಸ್ತೆಯನ್ನು ತೆರವುಗೊಳಿಸದೆ ಅದರ ಮೇಲೆ ಡಾಂಬರೀಕರಣ ನಡೆಸಿ, ಅವೈಜ್ಞಾನಿಕ ಮಾದರಿಯಲ್ಲಿ ರಸ್ತೆ ನಿರ್ಮಿಸಲಾಗಿತ್ತು.
ಕಾಂಕ್ರೀಟ್ ರಸ್ತೆಯ ಮೇಲೆ ಡಾಂಬರು ನಿಲ್ಲುವುದಿಲ್ಲವೆಂದು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು ಅದನ್ನು ಲೆಕ್ಕಿಸದೆ, ಪಟ್ಟಣ ಪಂಚಾಯಿತಿಯವರು ವೀರಶೈವ ಕಲ್ಯಾಣ ಮಂಟಪದಿಂದ ರೇಣುಮಿಲ್‌ವರೆಗೂ ಡಾಂಬರೀಕರಣ ನಡೆಸಿ , ಮಧ್ಯದಲ್ಲಿ ಕಾಂಕ್ರೀಟ್ ಡಿವೈಡರ್ ನಿರ್ಮಿಸಿ ದ್ವಿಪಥ ರಸ್ತೆಯನ್ನಾಗಿಸಿದ್ದರು.ಆ ಸಂದರ್ಭದಲ್ಲಿ ರಸ್ತೆಯ ಎರಡು ಬದಿಗಳಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಿ ಸುಸಜ್ಜಿತ ದ್ವಿಪಥ ರಸ್ತೆಯನ್ನಾಗಿಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗಿದ್ದರು, ಅದಕ್ಕೆ ಬೆಲೆ ಕೊಡದೆ ತರಾತುರಿಯಲ್ಲಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಡಾಂಬರೀಕರಣ ಉತ್ತಮ ಗುಣಮಟ್ಟದಲ್ಲೇ ಮಾಡಲಾಗಿತ್ತಾದರೂ, ಮಳೆ ನೀರು ರಸ್ತೆಯಿಂದ ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸದೆ, ಕೆಲವು ಕಡೆ ರಸ್ತೆಗಿಂತ ಎತ್ತರದಲ್ಲಿ ಚರಂಡಿಗಳನ್ನು ನಿರ್ಮಿಸಲಾಗಿತ್ತು. ಹಾಗೂ ರಸ್ತೆಯ ಮಧ್ಯ ನಿರ್ಮಿಸಲಾಗಿದ್ದ ಕಾಂಕ್ರೀಟ್ ಡಿವೈಡರ್‌ಗಳ ನಡುವೆ ನೀರು ಹರಿಯಲು ಜಾಗ ಬಿಡದ ಕಾರಣ ರಸ್ತೆಯಲ್ಲೇ ನೀರು ನಿಂತು ಆ ಜಾಗಗಳಲ್ಲಿ ಡಾಂಬರ್ ಕಿತ್ತು ಹೋಗಿ ಮಂಡಿಯುದ್ಧದ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುವುದರ ಜೊತೆಗೆ ಪ್ರತಿದಿನ ಒಂದಿಲ್ಲ ಒಂದು ಅಪಘಾತಗಳು ಸಂಭವಿಸುತ್ತಿದೆ. ಈಗಾಗಲೇ ಕೆಲವರು ಪ್ರಾಣ ಕಳೆದುಕೊಂಡಿದ್ದರೆ ಹಲವು ಮಂದಿ ತೀವ್ರ ಗಾಯಗಳಿಗೆ ತುತ್ತಾಗಿದ್ದಾರೆ. ಇದರೊಟ್ಟಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ರಸ್ತೆಯ ಎರಡು ಬದಿಗಳಲ್ಲಿ ಕಾರು ಬೈಕ್‌ಗಳನ್ನು ನಿಲ್ಲಿಸಲಾಗುತ್ತಿದ್ದು, ಇದರಿಂದಾಗಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ರಸ್ತೆಯ ಗುಂಡಿಗಳನ್ನು ಪ್ರತಿ ವರ್ಷವೂ ನಾಮಕಾವಸ್ಥೆಗೆ ಮುಚ್ಚಲಾಗುತ್ತಿದ್ದು, ಮಳೆ ಬಂದಾಗ ಡಾಂಬರು, ಜೆಲ್ಲಿ ಕೊಚ್ಚಿ ಹೋಗಿ ಪುನಃ ಮಂಡಿ ಉದ್ದದ ಗುಂಡಿಗಳು ನಿರ್ಮಾಣವಾಗುತ್ತಿದ್ದು,ಇದು ಪ್ರತಿ ವರ್ಷವೂ ಪುನರಾವರ್ತನೆ ಆಗುತ್ತಿದೆ.ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ಬೇಕಾಬಿಟ್ಟಿ ವಿನಿಯೋಗಿಸುವುಕ್ಕೆ ಕಡಿವಾಣ ಹಾಕಿ ಶಾಸಕರು ಶೀಘ್ರ ಇತ್ತ ಗಮನಹರಿಸಿ, ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯನ್ನು ವೈಜ್ಞಾನಿಕ ಮಾದರಿಯಲ್ಲಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.
ಈ ಸಂಬಂಧವಾಗಿ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಪಟ್ಟಣದ ಮುಖ್ಯ ರಸ್ತೆ ಡಾಂಬರೀಕರಣಕ್ಕಾಗಿ ಈಗಾಗಲೇ ಅನುದಾನವನ್ನು ಮೀಸಲಿಡಲಾಗಿದ್ದು, ಮಳೆ ನಿಂತ ತಕ್ಷಣವೇ ಡಾಂಬರೀಕರಣ ಕಾರ್ಯ ಪ್ರಾರಂಭಿಸಲಾಗುವುದು. ಅಲ್ಲದೆ ಕೆಇಬಿ ಸರ್ಕಲ್‌ನಿಂದ ಅರ್ಧ ಕಿಲೋ ಮೀಟರ್‌ವರೆಗೆ ದ್ವಿಪಥ ರಸ್ತೆಯನ್ನಾಗಿಸಿ, ಮುಂದಿನ ದಿನಗಳಲ್ಲಿ ಆಲೂರು ಕೂಡಿಗೆಯಿಂದ ಬೈರಾಪುರದವರೆಗೂ ಉತ್ತಮ ಗುಣಮಟ್ಟದ ದ್ವಿಪಥ ರಸ್ತೆಯನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.ಈ ಸಂಬಂಧವಾಗಿ ಪತ್ರಿಕೆ ಮಾತಾಡಿದ ನಾಗರಿಕರಾದ ಸ್ಟುಡಿಯೋ ವೆಂಕಟೇಶ್ ರಸ್ತೆಯ ಪಕ್ಕದಲ್ಲಿ ತಮ್ಮ ಅಂಗಡಿ ಇದ್ದು, ಅಂಗಡಿಯ ಮುಂಭಾಗದಲ್ಲಿ ಮಂಡಿಯುದ್ಧದ ಗುಂಡಿ ಬಿದ್ದಿದ್ದು ವಾಹನಗಳ ಚಕ್ರಕ್ಕೆ ಸಿಲುಕಿದ ಕಲ್ಲುಗಳು ಅಂಗಡಿ ಮುಂಗಟ್ಟುಗಳಿಗೆ ಬಡಿಯುತ್ತಿದ್ದು, ಹಲವು ಬಾರಿ ಗ್ರಾಹಕರು ಪೆಟ್ಟು ತಿಂದಿದ್ದಾರೆ. ಪ್ರತಿವರ್ಷವೂ ನಾಮ್‌ಕಾವಸ್ತೆಗೆ ಗುಂಡಿ ಮುಚ್ಚುವುದನ್ನು ಬಿಟ್ಟು ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಬೇಕೆಂದು ಒತಾಯಿಸಿದ್ದಾರೆ.
ನಾಗರಿಕ ಹೋರಾಟ ಸಮಿತಿಯ ಮಲ್ಲಿಕಾರ್ಜುನ್ (ಮೂರ್ತಿ ) ಮಾತನಾಡಿ, ರಸ್ತೆ ಕಿರಿದಾಗಿದ್ದು ಈ ರಸ್ತೆಯ ಎರಡು ಬದಿಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ರಸ್ತೆಯಲ್ಲಿ ಮಾರುದ್ದದ ಗುಂಡಿಗಳು ಬಿದ್ದಿದ್ದು ಇದರೊಟ್ಟಿಗೆ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುತ್ತಿರುವುದು ವಾಹನ ಸಂಚಾರಕ್ಕೆ ಪ್ರಮುಖ ಅಡಚಣೆಯಾಗಿದೆ. ಶೀಘ್ರ ರಸ್ತೆ ದುರಸ್ತಿಗೊಳಿಸುವುದರ ಜೊತೆಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕೆಂಬುದು ತಮ್ಮ ಒತ್ತಾಯವಾಗಿದೆ ಎಂದು ತಿಳಿಸಿದರು.