ಮನುಷ್ಯನಲ್ಲಿ ದುರಾಸೆ ಹೆಚ್ಚಾದಂತೆ ಪರಿಸರವೂ ವಿನಾಶದತ್ತ ಸಾಗಿದೆ. ಗಿಡ ಮರಗಳು ಇಲ್ಲದಿರುವ ಕಾರಣ ಸಕಾಲದಲ್ಲಿ ಮಳೆ ಆಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ರಾಮನಗರ

ಯಾರೂ ಪರಿಸರದ ಮುಂದೆ ಹೊರತಾಗಿಲ್ಲ. ಒಂದು ಮರ ಪರಿಸರಕ್ಕೆ ಉಪಕಾರಿಯಾಗಿರುವಂತೆ ಮನುಷ್ಯನೂ ಪರಿಸರಕ್ಕೆ ಪರೋಪಕಾರಿಯಾಗಿ ಬದುಕು ಬೇಕು. ಪ್ರತಿಯೊಬ್ಬರು ಪರಿಸರವನ್ನು ಉಳಿಸಿ ಬೆಳೆಸುವ ಸಂಸ್ಕೃತಿಯನ್ನು ಪರಿಪಾಲನೆ ಮಾಡಬೇಕು ಎಂದು ಕನ್ನಡಪ್ರಭ ಸಮನ್ವಯ ಸಂಪಾದಕರಾದ ಬಿ.ವಿ.ಮಲ್ಲಿಕಾರ್ಜುನಯ್ಯ ಸಲಹೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶ್ರೀ ಅಪ್ರಮೇಯ ಡೆವಲಪರ್ಸ್ ಮತ್ತು ಪ್ರಮೋಟರ್ಸ್, ಗಣೇಶ್ ಜ್ಯೂಯಲರರ್ಸ್ , ಆದರ್ಶ ಆಂಗ್ಲ ಪ್ರೌಢಶಾಲೆ, ಹೋಲಿ ಕ್ರೆಸಂಟ್ ಆಂಗ್ಲ ಶಾಲೆ , ನ್ಯೂ ಎಕ್ಸ್ ಪರ್ಟ್ ಕಾಲೇಜು, ರೋಟರಿ ಸಿಲ್ಕ್ ಸಿಟಿ, ಬಿಡದಿ ಭರತ್ ಮೆಲ್ಟಿಸ್ಪೇಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಮಕ್ಕಳಿಗೆ ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು.

ಮನುಷ್ಯನಲ್ಲಿ ದುರಾಸೆ ಹೆಚ್ಚಾದಂತೆ ಪರಿಸರವೂ ವಿನಾಶದತ್ತ ಸಾಗಿದೆ. ಗಿಡ ಮರಗಳು ಇಲ್ಲದಿರುವ ಕಾರಣ ಸಕಾಲದಲ್ಲಿ ಮಳೆ ಆಗುತ್ತಿಲ್ಲ. ಹೀಗಾಗಿಯೇ ಅನೇಕ ಜಿಲ್ಲೆಗಳು ಬರಪೀಡಿತವಾಗಿವೆ.ಪರಿಸರ ಹಾಳಾದರೆ ನಾವೆಲ್ಲರು ಹಾಳಾದಂತೆ. ಆದ್ದರಿಂದಲೇ ಚಿತ್ರಕಲಾ ಸ್ಪರ್ಧೆ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಒಂದು ಗಿಡ ಲಕ್ಷೋಪಲಕ್ಷ ಆದಾಯ ತಂದು ಕೊಡುತ್ತದೆ. ಅದು ಕೇವಲವಾಗಿ ಮರವಾಗಿ ಉಳಿಯದೆ ಫಲ, ನೆರಳು, ಗಾಳಿ ಕೊಡುತ್ತದೆ. ಇವೆಲ್ಲವೂ ಪರಿಸರಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲಾಭ ತಂದುಕೊಡುತ್ತದೆ. ಆದರೆ, ಅರಣ್ಯ ಉಳಿಸುವುದರಿಂದ ನಮಗಾಗುವ ಲಾಭ ಮತ್ತು ಅವುಗಳ ನಾಶದಿಂದಾಗುವ ನಷ್ಟವನ್ನು ನಾವು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾಲು ಮರದ ತಿಮ್ಮಕ್ಕ ಮಕ್ಕಳಿಲ್ಲ ಎಂಬ ಕೊರಗನ್ನು ಗಿಡಗಳನ್ನು ನೆಟ್ಟು ದೂರವಾಗಿಸಿಕೊಂಡರು. ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ತಿಮ್ಮಕ್ಕ ಪರಿಸರಕ್ಕೆ ಅನನ್ಯವಾದ ಕೊಡುಗೆ ನೀಡಿ ಹೋಗಿದ್ದಾರೆ. ಅವರು ನೆಟ್ಟಿ ಪೋಷಿಸಿದ ಗಿಡ ಮರಗಳೇ ತಿಮ್ಮಕ್ಕ ಅವರಿಗೆ ಅನೇಕ ಪ್ರಶಸ್ತಿ, ಕ್ಯಾಬಿನೆಟ್ ದರ್ಜೆ ಗೌರವಗಳು ದಕ್ಕುವಂತೆ ಮಾಡಿದವು ಎಂದು ಹೇಳಿದರು.

ಕೃಷಿಯಲ್ಲಿ ತೊಡಗಿರುವ ಯುವಕರಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿರುವ ಪರಿಸ್ಥಿತಿ ಇದೆ. ಹೆಣ್ಣು ರೈತ ಮಹಿಳೆಯಾಗಿ, ರೈತನ ಹೆಂಡತಿಯಾಗಿ, ಮಗಳಾಗಿದ್ದರೆ ಪರಿಸರ ಉಳಿಯುತ್ತದೆ. ಆಗ ನಾವುಗಳು ಕ್ಷೇಮವಾಗಿ ಇರುತ್ತೇವೆ ಎಂಬ ಮನಸ್ಥಿತಿ ಎಲ್ಲರಲ್ಲೂ ಬರಬೇಕು ಎಂದು ತಿಳಿಸಿದರು.

ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ ಸಂಸ್ಕೃತಿ, ಸಂಸ್ಕಾರ ಮೂಡಿಸುವ ಉದ್ದೇಶದಿಂದ ಚಿತ್ರಕಲಾ ಸ್ಪರ್ಧೆ ಆಯೋಜನೆ ಮಾಡಿದ್ದೇವೆ. ರಾಜ್ಯದ 31 ಜಿಲ್ಲೆಗಳಲ್ಲೂ ಸ್ಪರ್ಧೆಗಳು ನಡೆಯುತ್ತಿದ್ದು, ಇದಕ್ಕೆ ಎಲ್ಲೆಡೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದೊಂದು ಹೆಮ್ಮೆಯ ವಿಚಾರ. ಇನ್ನು ಮುಂದೆ ಪ್ರತಿ ವರ್ಷ ಬೇರೆ ಬೇರೆ ವಿಷಯಗಳ ಮೇಲೆ ಸ್ಪರ್ಧೆಗಳು ಜರುಗಲಿವೆ ಎಂದು ಬಿ.ವಿ.ಮಲ್ಲಿಕಾರ್ಜುನಯ್ಯ ತಿಳಿಸಿದರು.

ಪರಿಸರ ಮತ್ತು ವನ್ಯಜೀವಿ ಕುರಿತು ವಿಶೇಷ ಕಾಳಜಿ ವಹಿಸಿ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ನ ಕಾರ್ಯ ಬೇರೆ ಮಾಧ್ಯಮಗಳಿಗೆ ಮಾದರಿಯಾಗಿದೆ. ಸೋಲು ಗೆಲುವು ಸಹಜ. ಗೆದ್ದಾಗ ಬೀಗದೆ, ಸೋತಾಗ ಕುಗ್ಗದೆ ಮುನ್ನಡೆಯಬೇಕು. ಸೋಲನ್ನು ಗೆಲುವಿನ ಮೆಟ್ಟಿಲು ಮಾಡಿಕೊಂಡು ಸಾಲುಮರದ ತಿಮ್ಮಕ್ಕ ಈ ಭೂಮಿಯಲ್ಲಿ ಮತ್ತೊಮ್ಮೆ ಹುಟ್ಟಿ ಬರುವುದಿಲ್ಲ. ಪರಿಸರ ಸಂರಕ್ಷಣೆ ಕುರಿತು ಚಿಪ್ಕೊ ಮತ್ತು ಅಪ್ಕೊ ಚಳವಳಿ ಹೊರತು ಪಡಿಸಿದರೆ ಬೇರೆ ಯಾವ ಚಳವಳಿಗಳು ಗಮನ ಸೆಳೆದಿಲ್ಲ. ಮಕ್ಕಳು ತಮ್ಮ ಮನೆಗಳ ಮುಂದೆ ಕಡ್ಡಾಯವಾಗಿ ಒಂದು ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದು ನ್ಯೂ ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಡಾ.ಡಿ.ಆರ್.ರವಿಕುಮಾರ್ ತಿಳಿಸಿದರು.

ಬಿಡದಿ ಪುರಸಭೆ ವಿಪಕ್ಷ ನಾಯಕ ಸಿ.ಉಮೇಶ್ , ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ , ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ರಾಮಕೃಷ್ಣಪ್ಪ, ಎಸ್ ಎಂಎಎಸ್ ನ ಡಿಜಿಒ ಡಾ.ಐಶ್ವರ್ಯ, ನ್ಯೂ ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ಡಿ.ಆರ್.ರವಿಕುಮಾರ್ , ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಪ್ರಕಾಶ್ ಉಪಸ್ಥಿತರಿದ್ದರು....ಕೋಟ್ ...

ದೇಶದ ಸತ್ಪ್ರಜೆಗಳಾಗಿ ರೂಪುಗೊಳ್ಳಲಿರುವ ನಿಮ್ಮಗಳ ಮೇಲೂ ಪರಿಸರ ಉಳಿಸಿಕೊಳ್ಳುವ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪರಿಸರ ವಿಚಾರವಾಗಿ ಚಿತ್ರಕಲಾ ಸ್ಪರ್ಧೆ ಆಯೋಜನೆ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಶ್ಲಾಘನೀಯ. ಭವಿಷ್ಯದಲ್ಲಿ ನೀವುಗಳು ವೈದ್ಯರು, ಎಂಜಿನಿಯರ್ ಮಾತ್ರವಲ್ಲದೆ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತೀರಿ. ಆಗಲೂ ನಿಮ್ಮಲ್ಲಿ ಪರಿಸರದ ಬಗ್ಗೆ ಕಾಳಜಿ ಇರಬೇಕು.

- ಸಿ.ಉಮೇಶ್ , ವಿಪಕ್ಷ ನಾಯಕ, ಪುರಸಭೆ , ಬಿಡದಿ.

...ಕೋಟ್ ...

ಮಕ್ಕಳಲ್ಲಿ ಅಡರುವ ಪ್ರತಿಭೆ ಮತ್ತು ಪರಿಸರ ಜ್ಞಾನವನ್ನು ಅರಿಯಲು ಚಿತ್ರಕಲಾ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಮನುಷ್ಯನಲ್ಲಿ ಸ್ವಾರ್ಥ ಮತ್ತು ದುರಾಸೆ ಹೆಚ್ಚಾದಂತೆ ಪರಿಸರ ನಾಶವಾಗುತ್ತಿದ್ದು, ಋತುಮಾನಗಳಲ್ಲಿಯೇ ಬದಲಾವಣೆ ಆಗಿ ಹೋಗಿವೆ. ನಗರೀಕರಣ ಮಾಡುತ್ತಾ ಹೋದರೆ ಮುಂದಿನ ಪೀಳಿಗೆಗೆ ಪರಿಸರವೇ ಉಳಿಯುವುದಿಲ್ಲ. ಆದ್ದರಿಂದ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟಿ, ಬೆಳೆಸಿ, ಸಂರಕ್ಷಣೆ ಮಾಡೋಣ.

- ಕೆ.ಸತೀಶ್, ಜಿಲ್ಲಾಧ್ಯಕ್ಷರು, ಸರ್ಕಾರಿ ನೌಕರರ ಸಂಘ, ಬೆಂ.ದಕ್ಷಿಣ ಜಿಲ್ಲೆ.

-------

13ಕೆಆರ್ ಎಂಎನ್ 4.ಜೆಪಿಜಿ

ರಾಮನಗರದ ಅಂಬೇಡ್ಕರ್ ಭವನದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಕನ್ನಡಪ್ರಭ ಸಮನ್ವಯ ಸಂಪಾದಕರಾದ ಬಿ.ವಿ.ಮಲ್ಲಿಕಾರ್ಜುನಯ್ಯ ಶಾಲಾ ಮಕ್ಕಳಿಗೆ ಗಿಡಗಳನ್ನು ವಿತರಿಸಿದರು.