ಸಾರಾಂಶ
ನಗರದ ಬಸ್ ನಿಲ್ದಾಣದ ಎದುರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಡೆಂಘೀ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಹಿರಿಯೂರು
ಈಡಿಸ್ ಸೊಳ್ಳೆಯಿಂದ ಡೆಂಘೀ ಹರಡಲಿದ್ದು, ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದರ ಜೊತೆಗೆ ಮನೆಯ ಸುತ್ತ ಮುತ್ತಲೂ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಆರೋಗ್ಯ ನಿರೀಕ್ಷಕ ಸೋಮಲಾಪುರ ಹೇಳಿದರು.
ನಗರದ ಬಸ್ ನಿಲ್ದಾಣದ ಎದುರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಡೆಂಘೀ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶುದ್ಧ ಗಾಳಿ ಸೊಳ್ಳೆಯ ನಿಯಂತ್ರಣಕ್ಕೆ ಉತ್ತಮ ಮದ್ದಾಗಿದ್ದು ತುಳಸಿ ಗಿಡ, ಚೆಂಡು ಹೂವಿನ ಗಿಡಗಳನ್ನು ಹೆಚ್ಚಾಗಿ ಬೆಳೆಸಿಕೊಳ್ಳಬೇಕು ಎಂದರು.ಸಾಮಾನ್ಯವಾಗಿ ಸೊಳ್ಳೆಗಳ ಜೀವಿತಾವಧಿ 30 ದಿನವಾಗಿದ್ದು, ಅವು ಮೂರು ಬಾರಿ ಮೊಟ್ಟೆಗಳನ್ನು ಇಡುತ್ತವೆ. ಒಂದು ಬಾರಿಗೆ ಸುಮಾರು 400 ಮೊಟ್ಟೆ ಇಡುವ ಸಾಮರ್ಥ್ಯವನ್ನು ಹೊಂದಿವೆ. ಸೊಳ್ಳೆಗಳು ತಮ್ಮ 30 ದಿನದ ಜೀವಿತಾವಧಿಯಲ್ಲಿ 1200 ಮೊಟ್ಟೆಗಳಳನ್ನು ಉತ್ಪತ್ತಿ ಮಾಡುತ್ತವೆ ಎಂದು ತಿಳಿಸಿದರು.
ಈ ವೇಳೆ ಶಾಲೆಯ ಆವರಣದಲ್ಲಿ ನೆಡಲು ಇನ್ನರ್ ವೀಲ್ ಕ್ಲಬ್ ವತಿಯಿಂದ ತೆಂಗಿನ ಸಸಿಗಳನ್ನು ನೀಡಿ ಗುರು ಪೂರ್ಣಿಮಾ ಪ್ರಯುಕ್ತ ಶಾಲೆಯ ಶಿಕ್ಷಕರುಗಳಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಪಾದಪೂಜೆ ಮಾಡಿಸುವ ಮೂಲಕ ಗುರುವಂದನೆ ಸಲ್ಲಿಸಿ ಸನ್ಮಾನಿಸಲಾಯಿತು.ಇನ್ನರ್ ವೀಲ್ ಅಧ್ಯಕ್ಷೆ ಸುಚಿತ್ರ ಅಮರನಾಥ್, ಸದಸ್ಯರಾದ ಸರ್ವ ಮಂಗಳ ರಮೇಶ್, ಲಕ್ಷ್ಮಿ ರಾಜೇಶ್, ರಚನಾ ಅನಂತ್, ಲತಾ ಶಿವಪ್ರಸಾದ್, ಸ್ವರ್ಣ ಲತಾ ರೆಡ್ಡಿ, ಸುವರ್ಣ ಪ್ರಶಾಂತ್, ಸೌಮ್ಯ ಪ್ರಶಾಂತ್, ಚಂದ್ರಮ್ಮ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.