ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಪ್ರವಾಸಿ ತಾಣಗಳ ಪರಿಸರದಲ್ಲಿ ನೈರ್ಮಲ್ಯವನ್ನು ಕಾಪಾಡು ವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಪ್ರವಾಸಿ ತಾಣಗಳ ಪರಿಸರದಲ್ಲಿ ನೈರ್ಮಲ್ಯವನ್ನು ಕಾಪಾಡು ವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು.

ನಗರದ ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೀದರ್ ಜಿಲ್ಲೆಯು ಪ್ರವಾಸೋದ್ಯಮದ ಎಲ್ಲಾ ವೈವಿಧ್ಯಮಯ ವಿಭಾಗಗಳನ್ನು ತನ್ನಲ್ಲಿ ಒಳಗೊಂಡಿದ್ದು, ವಿಶ್ವಮಟ್ಟದಲ್ಲಿ ಪ್ರದರ್ಶಿಸಲು ಹೆಮ್ಮೆಪಡುವಂತಹ ಸುಂದರ ತಾಣವಾಗಿದೆ ಎಂದರು.

ಅವರು ಜಿಲ್ಲೆಯ ಧಾರ್ಮಿಕ ಪ್ರವಾಸೋದ್ಯಮ ಬಗ್ಗೆ ಉಲ್ಲೇಖಿಸಿ ಝರಣಿ ನರಸಿಂಹ ಸ್ವಾಮಿ ದೇವಾಲಯ, ಗುರುನಾನಕರ ಗುರುದ್ವಾರ, ಪಾಪನಾಶ ದೇವಾಲಯ ಹಾಗೂ ಬಸವಕಲ್ಯಾಣದ ಅನುಭವ ಮಂಟಪಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರದೆ, ಎಲ್ಲಾ ವರ್ಗದ ಮತ್ತು ಎಲ್ಲಾ ಧರ್ಮಗಳ ಜನರನ್ನು ಆಕರ್ಷಿಸುತ್ತವೆ ಎಂದರು.

ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವೀಣಾ ಎಸ್. ಸೊರಗನ್ವಿ ಮಾತನಾಡಿ, ಕರ್ನಾಟಕದ ಪ್ರಸಿದ್ಧ ಐತಿಹಾಸಿಕ ತಾಣಗಳ ಸೌಂದರ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯಲು ಹಾಗೂ ಅವುಗಳ ರಕ್ಷಣೆಗೆ ಕೃತಕ ಬುದ್ಧಿಮತ್ತೆಯಂತಹ (ಎಐ) ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಯುವ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮುಂದಾಗಬೇಕೆಂದು ಕರೆ ನೀಡಿದರು.

ಪ್ರಸ್ತುತ ವಾಯು ಮಾಲಿನ್ಯ, ಪ್ರವಾಹ ಹಾಗೂ ವಾತಾವರಣದ ವೈಪರೀತ್ಯಗಳಿಂದಾಗಿ ನಮ್ಮ ಐತಿಹಾಸಿಕ ಸ್ಮಾರಕಗಳು ಹಾನಿಗೊಳಗಾಗುತ್ತಿವೆ. ಇವುಗಳನ್ನು ಸಂರಕ್ಷಿಸಲು ವಿದ್ಯಾರ್ಥಿಗಳು ಮತ್ತು ನಾಗರಿಕರು ಜಂಟಿಯಾಗಿ ಶ್ರಮಿಸಬೇಕು. ಗಾಳಿ, ನೀರು ಮತ್ತು ಮಣ್ಣು ಎಲ್ಲರಿಗೂ ಸೇರಿದ್ದು, ಅವುಗಳನ್ನು ಮಿತವಾಗಿ ಬಳಸಿ ಪರಿಸರವನ್ನು ಸ್ವಚ್ಛವಾಗಿಡುವುದು ಎಲ್ಲರ ಹೊಣೆಗಾರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಬೀದರ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹೊಸ ಮೊಬೈಲ್ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ಹಾಗೂ ವಿದ್ಯಾರ್ಥಿಗಳು ರೂಪಿಸಿದ ಅತ್ಯುತ್ತಮ ತಾಂತ್ರಿಕ ಯೋಜನಾ ಮಾದರಿಗಳನ್ನು (Projects) ಸರ್ಕಾರಕ್ಕೆ ಶಿಫಾರಸು ಮಾಡುವ ಯೋಜನೆ ಇದೆ ಎಂದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೀದರ್ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಲಿಂಗಪ್ಪ ಡೆಂಗಿ, ಬೆಳಗಾವಿ ವಿಟಿಯು ಇ.ಸಿ ಸದಸ್ಯರಾದ ಡಾ. ಪವಿತ್ ಸಿಂಗ್, ಜಿಎನ್ಡಿಇಸಿ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ಕರ್ನಲ್ ರವಿದೀಪ್ ಸಿಂಗ್, ‘ಪ್ರವಾಸಿ ಮಿತ್ರ’ ಸಿಬ್ಬಂದಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.